ಯಕ್ಷಲೋಕದ ಸವ್ಯಸಾಚಿಯ ನೆನಪು


ಕೆರೆಮನೆ ಶಂಭು ಹೆಗಡೆ ಅವರೊಂದಿಗೆ ಮಾತಾಡುತ್ತ ಕುಳಿತರೆ ಹೊತ್ತು ಹೋದದ್ದು ಗೊತ್ತಾಗುವುದಿಲ್ಲ. ಅವರ ಮಾತು ಎಂದೂ ಬೋರು ಹೊಡೆಸಿದ್ದಿಲ್ಲ. ಒಮ್ಮೊಮ್ಮೆ ಅವರು ಹಿಂದೆ ಹೇಳಿದ ವಿಚಾರವನ್ನೇ ಮತ್ತೆ ಪ್ರಸ್ತಾಪಿಸಿದರೂ ಆಲಿಸುವುದಕ್ಕೆ ಹರುಷವೇ ಆಗುತ್ತಿತ್ತು. ಮಹಾನ್ ಕಲಾವಿದ ಇಷ್ಟು ಆಕರ್ಷಕ ವ್ಯಕ್ತಿತ್ವವನ್ನು ಹೇಗೆ ರೂಪಿಸಿಕೊಂಡರು ಎಂದು ಅನೇಕ ಬಾರಿ ನನಗೆ ನಾನೇ ಪ್ರಶ್ನೆ ಕೇಳಿಕೊಂಡಿದ್ದೇನೆ.

ಚಿಕ್ಕಂದಿನಿಂದ ಶಂಭು ಹೆಗಡೆ ಪಾತ್ರ ನೋಡಿ ಪ್ರಭಾವಿತನಾಗಿದ್ದ ನನಗೆ, ಕಳೆದ ನಾಲ್ಕೈದು ವರ್ಷದಿಂದ ಈಚೆಗೆ ಅವರ ಆತ್ಮೀಯ ವಲಯದಲ್ಲೊಂದು ಸ್ಥಾನ ಸಿಕ್ಕಿತ್ತು. ಆಟ ನೋಡುವಾಗ ಚೌಕಿಗೆ ಹೋಗಿ ದೂರದಲ್ಲೇ ನಿಂತು ಹೆಗಡೆ ಅವರನ್ನು ಕಂಡು ಹಿಗ್ಗಿದ್ದು ನೆನಪಿದೆ. ಅನಂತರ ಅವರ ಸಾಮೀಪ್ಯ ದೊರಕಿದಾಗ ಇದು ಕನಸಾಗಿರಬಹುದೇ ಎಂದು ಭಾವಿಸಿದ್ದೂ ಇದೆ. ಆದರೆ, ಮರು ಕ್ಷಣದಲ್ಲಿ ಒಂದು ಕಾಲದಲ್ಲಿ ಕಂಡ ಕನಸು ನನಸಾಗಿದೆಯೆಂದು ಧನ್ಯತಾ ಭಾವ ಅನುಭವಿಸಿದ್ದೇನೆ.

ಈಗಲೂ ನೆನಪಿದೆ. ಕನ್ನಡ ಶಾಲೆ, ಹೈಸ್ಕೂಲಿಗೆ ಹೋಗುವಾಗ ಚಿತ್ರ ಬಿಡಿಸುವುದು ಬಹಳ ಅಪ್ಯಾಯಮಾನವಾಗಿತ್ತು. ಹೆಚ್ಚು ಚಿತ್ರ ಬಿಡಿಸುತ್ತಿದ್ದುದು ಯಕ್ಷಗಾನದ್ದೇ ಆಗಿತ್ತು. ಅದರಲ್ಲೂ ಶಂಭು ಹೆಗಡೆ ಪಾತ್ರದ ಚಿತ್ರ ಬರೆಯುವ ಹಠ. "ನೀನು ಯಕ್ಷಗಾನದ ಚಿತ್ರ ಬರೆದರೆ ಮೂಗು, ಮೀಸೆ, ಮುಖ ಶಂಭು ಹೆಗಡೆ ಅವರನ್ನೇ ಹೋಲುತ್ತದೆ" ಎಂದು ಸ್ನೇಹಿತರು ಕಿಚಾಯಿಸುತ್ತಿದ್ದರು. ನಾನು ನಿರುತ್ತರನಾಗುತ್ತಿದ್ದೆ. ಅಂತರಂಗದಲ್ಲಿ ಮಾತ್ರ ಶಂಭು ಹೆಗಡೇರ ವೇಷದ ಯಥಾವತ್ತು ಚಿತ್ರ ಮೂಡಿಸಲು ಆಗಲಿಲ್ಲವೆಂಬ ಬೇಸರ ಕಾಡುತ್ತಿತ್ತು.

ಚಿತ್ರ ಬಿಡಿಸುವುದರೊಂದಿಗೆ ಬರವಣಿಗೆಯ ಗೀಳು ಹುಟ್ಟಿಕೊಂಡಿತ್ತು. ಇದಕ್ಕೆ ಸ್ಫೂರ್ತಿಯೂ ಶಂಭು ಹೆಗಡೆಯವರೇ ಆಗಿದ್ದರು. ಒಣ ಪಾಂಡಿತ್ಯ ಪ್ರದರ್ಶನವಿಲ್ಲದ ಸರಳ, ಸುಲಭ ಸಂವಹನಶಾಲಿಯಾದ, ಸುಸಂಬದ್ಧವಾದ ಹೆಗಡೆಯವರ ಅರ್ಥಗಾರಿಕೆ ಶೈಲಿ ಮನಸ್ಸನ್ನು ಸೆಳೆದಿತ್ತು. ಹರಿಶ್ಚಂದ್ರ, ಕರ್ಣ, ನಳ, ರಾಮ ಸೇರಿದಂತೆ ಅನೇಕ ಪಾತ್ರಗಳಲ್ಲಿ ಅವರು ಕಟ್ಟಿಕೊಟ್ಟ ಅರ್ಥದ ಪದಪುಂಜಗಳಿಂದ ನನ್ನ ಆರಂಭದ ಬರಹಗಳಿಗೆ ಒಳ್ಳೆಯ ವಾಕ್ಯ ಜೋಡಣೆ ಮಾಡಲು ಸಾಧ್ಯವಾಗುತ್ತಿತ್ತು. ವಿಷಯವನ್ನು ಗುಣವಂತೆಯ ಶ್ರೀಮಯ ಯಕ್ಷಗಾನ ಕಲಾಕೇಂದ್ರದ ಕಚೇರಿಯಲ್ಲಿ ಮಾತಾಡುವಾಗ ಅವರಿಗೇ ತಿಳಿಸಿದ್ದೆ. ಅದಕ್ಕೆ ಗಂಭೀರವದನರಾಗಿ ನಕ್ಕು ಸುಮ್ಮನಾಗಿದ್ದರು.

ಶಂಭು ಹೆಗಡೆಯವರು ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಬೆಂಗಳೂರಿನಲ್ಲಿ ಅವರನ್ನು ಭೇಟಿಯಾಗುವುದು ಸಂಭ್ರಮವಾಗಿತ್ತು. ಕನ್ನಡ ಭವನದ ಕಚೇರಿಯಲ್ಲೋ, ಸರಸ್ವತಿ ಲಾಡ್ಜ್ನಲ್ಲೋ ಅವರೊಂದಿಗೆ ಮಾತುಕತೆ ನಡೆಯುತ್ತಿತ್ತು. "ನಿಮಗೆ ಬಿಡುವಿದ್ದರೆ ಖಂಡಿತ ಬನ್ನಿ. ನನಗೆ ಮಾತಾಡಲು ಅಭ್ಯಂತರವಿಲ್ಲ. ಬೇಕಾದಷ್ಟು ವಿಷಯಗಳಿವೆಎಂದು ಹೆಗಡೆ ಯಾವಾಗಲೂ ಹೇಳುತ್ತಿದ್ದರು. ನನ್ನಂತಹ ಚಿಕ್ಕ ಪ್ರಾಯದವರನ್ನೂ ಬಹುವಚನದಿಂದಲೇ ಮಾತಾಡಿಸುತ್ತಿದ್ದರು. ಕೇಳಲು ಮುಜುಗರವಾಗುತ್ತಿತ್ತು. ಅವರಲ್ಲಿ ನಿವೇದಿಸಿಕೊಂಡರೂ ಅಪ್ಪಿತಪ್ಪಿಯೂ ಏಕವಚನ ಪ್ರಯೋಗ ಮಾಡುತ್ತಿರಲಿಲ್ಲ.

ನಾನು ಮೊದಲ ಬಾರಿ ಅವರನ್ನು ಗಟ್ಟಿಯಾಗಿ ಪರಿಚಯ ಮಾಡಿಕೊಂಡಾಗ ಬೆಂಗಳೂರಿನ ಗಿರಿನಗರದ ರಾಮಾಶ್ರಮದಲ್ಲಿ ವಿಜಯ ಕರ್ನಾಟಕಕ್ಕಾಗಿ ಸಂದರ್ಶನ ಮಾಡಿದ್ದೆ. ಆಗ ಎರಡು ದಿನ ಕೆರೆಮನೆ ಮೇಳದ ಆಟ ನಡೆದಿತ್ತು. ಶಂಭು ಹೆಗಡೇರು ಸಂಧಾನದ ಕೃಷ್ಣ, ದಮಯಂತಿ ಪುನಃಸ್ವಯಂವರದ ಬಾಹುಕನ ಪಾತ್ರ ನಿರ್ವಹಿಸಿದ್ದರು. ಆಗಿನ ಭೇಟಿಯಲ್ಲಿ ನನ್ನನ್ನೇ ಅವರು ಸಂದರ್ಶಿಸಿದ್ದರು. ಅಂದರೆ ಪ್ರತಿ ಪ್ರಶ್ನೆ ಕೇಳಿದಾಗಲೂ ಅವರು ಅದಕ್ಕೆ ಪೂರಕವಾಗಿ ಹತ್ತು ಪ್ರಶ್ನೆ ಹಾಕುತ್ತಿದ್ದರು. ಅಂತೂ ಸಂದರ್ಶನ ಪೂರ್ಣಗೊಳಿಸಿದಾಗ ಸುಸ್ತಾಗಿತ್ತು. ನಂತರದ ಭೇಟಿಗಳಲ್ಲೂ ಅವರು ನನ್ನನ್ನು ಚಕಿತ್ಸಕ ದೃಷ್ಟಿಯಿಂದಲೇ ಪರೀಕ್ಷಿಸುತ್ತಿದ್ದರು. ಯಕ್ಷಗಾನದ ಬಗ್ಗೆ ಆಸಕ್ತಿ ಉಂಟೋ ಇಲ್ಲವೋ ಜತೆಗೆ ಬಗೆಗಿನ ಜ್ಞಾನ ಎಷ್ಟಿದೆ ಎಂಬುದನ್ನು ಖಾತರಿ ಪಡಿಸಿಕೊಳ್ಳಲು ಹಾಗೆ ಮಾಡಿದರೆಂದು ಕಡೆಗೆ ಅರ್ಥವಾಯಿತು.

ನನ್ನ ಯಕ್ಷಗಾನ ಸಂಬಂಧಿ ಬರಹ, ಪ್ರದರ್ಶನ ಆಧರಿತ ವಿಮರ್ಶೆಗಳ ಕುರಿತೂ ಮೊದಮೊದಲು ಶಂಭು ಹೆಗಡೆ ಆಸಕ್ತಿ ತೋರುತ್ತಿರಲಿಲ್ಲ. ಬರಬರುತ್ತಾ ವಿಚಾರದಲ್ಲೂ ಪ್ರತಿಕ್ರಿಯೆ ಕೊಡುತ್ತಿದ್ದರು. ಅಲ್ಲಿವರೆಗೆ "ಯಕ್ಷಗಾನದಲ್ಲಿ ವಿಮರ್ಶೆಯೆಂದರೆ, ವೈಭವೀಕರಣ ಹಾಗೂ ಕಟು ಟೀಕೆ" ಎಂದು ನಿಷ್ಠುರವಾಗಿ ಹೇಳುತ್ತಿದ್ದರು. ಹಾಗಂತ ನನ್ನ ವಿಮರ್ಶಾ ಬರಹಗಳನ್ನು ಶ್ಲಾಘಿಸಿದರು ಎಂದು ಬೆನ್ನು ಚಪ್ಪರಿಸಿಕೊಂಡು ಇತಿಹಾಸಕ್ಕೆ ಅಪಚಾರ ಮಾಡಲಾರೆ. ಬರೆಯುವ ಸಾಧ್ಯತೆ, ಅರ್ಹತೆಯಿದೆ. ನಿಟ್ಟಿನಲ್ಲಿ ಅಧ್ಯಯನ ಅಗತ್ಯ. ಒಬ್ಬ ಕಲಾವಿದನೊಂದಿಗೆ ಇನ್ನೊಬ್ಬ ಕಲಾವಿದನನ್ನು ಹೋಲಿಸುವುದನ್ನೇ ಅಳತೆಗೋಲಾಗಿ ಸ್ವೀಕರಿಸಬಾರದು. ಪೂರ್ವ ಪರಂಪರೆ, ಹೊಸ ಸೃಷ್ಟಿಯ ಬಗ್ಗೆ ಗಂಭೀರ ಅಧ್ಯಯನ ಮಾಡಿಕೊಳ್ಳಬೇಕು ಎಂದು ಎಚ್ಚರಿಸುತ್ತಿದ್ದರು. ಆಯಾ ಪಾತ್ರದ ಗುಣ, ಸ್ವಭಾವ, ಕಥೆಯ ಅಂತರ್ದೃಷ್ಟಿ, ಒಟ್ಟಾರೆ ಪ್ರದರ್ಶನದ ಪರಿಣಾಮ, ಸಂದೇಶದ ಕುರಿತಾಗಿಯೂ ವಿವೇಚನೆಯಿಂದ ಅರಿತುಕೊಳ್ಳಬೇಕು ಎನ್ನುತ್ತಿದ್ದರು.

ಶಂಭು ಹೆಗಡೆ ಅವರೊಂದಿಗಿನ ಆಪ್ತತೆ ಎನ್ನುವುದು ಇತ್ತೀಚೆಗೆ ಸಲುಗೆಯಾಗಿಯೂ ಪರಿವರ್ತನೆಗೊಂಡಿತ್ತು. ಹೆಗಡೇರ ಜತೆಗೆ ಯಾವಾಗ ಬೇಕಾದರೂ ಸಮಾಲೋಚನೆಗೆ ತೊಡಗಬಹುದು. ಅವರು ಮುಕ್ತವಾಗಿ ಸ್ಪಂದಿಸುತ್ತಾರೆಂಬ ವಿಶ್ವಾಸ ಬೆಳೆಯಿತು. ಇದನ್ನು ಒಂದು ರೀತಿಯ ಹಮ್ಮು ಎಂದೂ ಅರ್ಥೈಸಿಕೊಂಡರೆ ತಪ್ಪಾಗದು. ಯಾಕೆಂದರೆ ಸಲುಗೆ ಎನ್ನುವುದು ಅಗತ್ಯಕ್ಕಿಂತ ಹೆಚ್ಚು ವಿಶ್ವಾಸವನ್ನೂ ತಂದು ಕೊಟ್ಟು ಬಿಡುತ್ತದೆ. ಬೆಳವಣಿಗೆ ಅನೇಕ ಸಂಬಂಧಗಳಲ್ಲಿ ವೈಮನಸ್ಯ ತಂದ ನಿದರ್ಶನಗಳಿವೆ. ಶಂಭು ಹೆಗಡೆ ಮತ್ತು ನನ್ನ ಬಾಂಧವ್ಯದಲ್ಲಿ ಅಂತಹ ಅಪಾಯಕ್ಕೆ ಎಲ್ಲಿಯೂ ಎಡೆಯಾಗಲಿಲ್ಲ. ವಿಷಯಾಧಾರಿತವಾಗಿ ಹೆಗಡೇರ ಕೆಲ ನಿಲುವುಗಳು ಒಪ್ಪಿತವಾಗದಿದ್ದರೂ ಅವರ ಮೇಲಿನ ಗೌರವ ಎಳ್ಳಿನಿತೂ ಕಡಿಮೆಯಾಗಲಿಲ್ಲ. ಯಕ್ಷಗಾನ ವಲಯದಲ್ಲಿ ಕಲಾವಿದರು, ಸಹೃದಯರೊಂದಿಗೆ ಶಂಭು ಹೆಗಡೆಯವರ ಬಗ್ಗೆ ಚರ್ಚಿಸಿದ್ದಿದೆ. ಪರ, ವಿರೋಧ ವಾದವೂ ನಡೆದಿದೆ. ತಾತ್ವಿಕ ನೆಲೆಯಲ್ಲಿ ಹೆಗಡೆಯವರ ಕೆಲವೊಂದು ಧೋರಣೆ ಕುರಿತು ತೀರ ವಿರಳವಾಗಿ ಇತರರಲ್ಲಿ ಅಸಮಾಧಾನ ತೋಡಿಕೊಂಡಿದ್ದೂ ಇದೆ. ಆದರೆ, ಯಾವ ಕಾಲಕ್ಕೂ ಆದರ್ಶದ ಹಾಗೂ ನಾನು ಆರಾಧಿಸುವ ಕಲಾವಿದರಾಗಿ ಗೋಚರಿಸಿದ್ದು ಶಂಭು ಹೆಗಡೆಯವರೇ.

ಪ್ರಾರಂಭದಲ್ಲಿ ಶಂಭು ಹೆಗಡೆ ಅವರೊಂದಿಗೆ ಸಮಾಲೋಚಿಸುವಾಗ ರೆಕಾರ್ಡ್ ಮಾಡಿಕೊಳ್ಳಬೇಕು ಎನ್ನಿಸುತ್ತಿತ್ತು. ಅದಕ್ಕೆ ಅವರು ಆಸ್ಪದ ಕೊಡುತ್ತಿರಲಿಲ್ಲ (ಆಗಿನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ). ಆತ್ಮೀಯತೆ ಬೆಳೆದ ಮೇಲೆ ರೆಕಾರ್ಡ್ ಮಾಡಿಕೊಂಡಿದ್ದರೆ ಬೇಡವೆನ್ನುತ್ತಿರಲಿಲ್ಲ. ಆದರೆ, ಮೊದಲೇ ತಿಳಿಸಿದಂತೆ ಹೆಗಡೆಯವರೊಂದಿಗೆ ಸಲುಗೆ ಬೆಳೆದಿತ್ತಲ್ಲ ? ಜತೆಗೆ ಯಾವಾಗ ಬೇಕಾದರೂ ಕೇಳಿದ್ದಕ್ಕೆಲ್ಲ ಯಾವ ಹಿಗ್ಗು, ಸಿಗ್ಗೂ ಇಲ್ಲದೇ ಉತ್ತರಿಸಿ ಮಾರ್ಗದರ್ಶನ ಮಾಡುತ್ತಾರೆಂಬ ವಿಶ್ವಾಸವೂ ಮೂಡಿ ಬಿಟ್ಟಿತ್ತು. ಹೀಗಾಗಿ ಶಂಭು ಹೆಗಡೆಯವರ ಅನೇಕ ಮೌಲ್ಯಯುತವಾದ, ಯಕ್ಷಗಾನ ರಂಗದ ಬೆಳವಣಿಗೆ, ಸುಧಾರಣೆಗೆ ಅತ್ಯವಶ್ಯವಾದ ವಿಚಾರಧಾರೆಗಳನ್ನು ದಾಖಲಿಸಿಕೊಳ್ಳುವುದರಿಂದ ವಂಚಿತನಾದೆ. ಬೇರೆಯವರು ಮಹತ್ವದ ಕಾರ್ಯವನ್ನು ಒಂದು ಹದದಲ್ಲಿ ಮಾಡಿದ್ದಾರೆ. ಆದರೆ, ವೈಯಕ್ತಿಕ ಜ್ಞಾನ ಸಂಪಾದನೆಗಾದರೂ ಶಂಭು ಹೆಗಡೆ ಎನ್ನುವ ಅಕ್ಷಯಪಾತ್ರೆಗೆ ಕೈಹಾಕಿದಾಗಲೆಲ್ಲ ಸಂಪತ್ತನ್ನು ಗಳಿಸಿಕೊಳ್ಳುವ ಅವಕಾಶದಿಂದ ವಿಧಿ ವಂಚಿಸಿತು. ಪ್ರಮಾದಕ್ಕಾಗಿ ಮನದ ಮೂಲೆಯಲ್ಲಿ ಅಪರಾಧಿ ಪ್ರಜ್ಞೆ ಆವರಿಸಿಕೊಂಡಿದೆ.

ಶಂಭು ಹೆಗಡೆ ಇಷ್ಟು ಬೇಗ ಭೌತಿಕ ಶರೀರ ತೊರೆದು ಮತ್ತೆ ಬಾರದ ಲೋಕಕ್ಕೆ ತೆರಳುತ್ತಾರೆ. ಯಕ್ಷಲೋಕದ ರಾಮಾವತಾರಕ್ಕೆ ತೆರೆ ಎಳೆಯುತ್ತಾರೆಂದು ಎಣಿಸುವುದಕ್ಕೂ ಸಾಧ್ಯವಿರಲಿಲ್ಲ. ಅವರು ಇನ್ನೂ ಬಹುಕಾಲ ನಮ್ಮೊಂದಿಗೆ ಇದ್ದಿದ್ದರೆ, ಕಡೆ ಪಕ್ಷ ಅವರು ಹೇಳಿದ್ದನ್ನು ಬರೆದು ಪ್ರಕಟಿಸಿದ್ದರೂ ಬೃಹತ್ ಗ್ರಂಥವಾಗುತ್ತಿತ್ತು. ಯಕ್ಷರಂಗಭೂಮಿಯ ದೊಡ್ಡ ಆಸ್ತಿಯಾಗುತ್ತಿತ್ತು. ಅಂತಹ ಸಂಪತ್ತಿನ ಮೂಲವನ್ನೇ ಈಗ ಕಳೆದುಕೊಂಡಿದ್ದೇವೆ. ನನ್ನ ಪಾಲಿಗೆ ಶಂಭು ಹೆಗಡೆಯವರೊಂದಿಗಿನ ಒಡನಾಟದ ಅನುಕ್ಷಣವೂ ಸುಮಧುರವೇ ಆಗಿದೆ. ಅವರು ಇಹಲೋಕ ತ್ಯಜಿಸಿದಾಗ ಅಂತಿಮ ದರ್ಶನ ಪಡೆದ ಭಾಗ್ಯವೂ ನನ್ನದಾಗಿದೆ. ವಿಜಯ ಕರ್ನಾಟಕದ ವರದಿಗಾರನಾಗಿ ಶಂಭು ಹೆಗಡೆಯವರ ನಿಧನ, ಅಂತ್ಯ ಸಂಸ್ಕಾರದ ವರದಿ ಮಾಡುವ ಅವಕಾಶವೂ ಸಿಕ್ಕಿತು.

ಶಂಭು ಹೆಗಡೆ ಅವರನ್ನು ನೆನಪಿಸಿಕೊಂಡಾಗ ಈಗಲೂ ಹ್ವಾಯ್ ನಂದಿಕಲ್ ಕಡೇಗ್ರ... ಎಂದು ಕರೆದಂತೆ ಅನ್ನಿಸುತ್ತದೆ. ನನ್ನ ಮೇಲೆ ಬದುಕಿನ ಹಲವು ಸಂದರ್ಭದಲ್ಲಿ ಗೊತ್ತಿದ್ದು, ಗೊತ್ತಿಲ್ಲಿದೆಯೋ, ಪ್ರತ್ಯಕ್ಷ, ಪರೋಕ್ಷವಾಗಿ ಪ್ರಭಾವ ಬೀರಿದವರು ಶಂಭು ಹೆಗಡೆ. ಅವರು ಯಕ್ಷಲೋಕದ ಸವ್ಯಸಾಚಿಯಷ್ಟೇ ಅಲ್ಲ. ನನಗೆ ಕ್ಷೇತ್ರದ ದಿವ್ಯ ಶಕ್ತಿ, ವಿಸ್ಮಯವಾಗಿಯೂ ಗೋಚರಿಸಿದ್ದರು. ಅವರ ಬಗ್ಗೆ ಇನ್ನಷ್ಟು ಮತ್ತಷ್ಟು ಬರೆಯಬೇಕೆಂದುಕೊಂಡಿದ್ದೇನೆ.
(ಫೋಟೊ ಕ್ರಪೆ : ಬಾಲು ಮಂದರ್ತಿ)

Last Posts