ಹಡಗಿನ ಬಾಗಿಲಿನ ಸ್ವಾಭಿಮಾನಿ ಕಲಾವಿದ

ಕಂದ್ದನ್ನು ಕಂಡ ಹಾಗೆ ಖಡಕ್ ಆಗಿ ಹೇಳುವ ನಿಷ್ಠುರವಾದಿ. ಆತ್ಮಾಭಿಮಾನಕ್ಕೆ ಪೆಟ್ಟು ಕೊಡುವ ಮಾತನ್ನು ಯಾರೇ ಆಡಿದರೂ ಸಹಿಸುವ ಜಾಯಮಾನದವರಲ್ಲ. ಸಹೃದಯಿ. ಭಾವಜೀವಿ. ಎಲ್ಲಕ್ಕಿಂತ ಮುಖ್ಯವಾಗಿ ಕೊಟ್ಟ ಪಾತ್ರವನ್ನು ಅತ್ಯಂತ ಚೊಕ್ಕದಾಗಿ ನಿರ್ವಹಿಸುವ ಪ್ರಾಮಾಣಿಕ.

ಯಕ್ಷಗಾನ ಕಲಾವಿದ ಹಡಿನಬಾಳು ಶ್ರೀಪಾದ ಹೆಗಡೆ ಅವರ ವ್ಯಕ್ತಿತ್ವಕ್ಕೆ ಇದಕ್ಕಿಂತ ಹೊರತಾದ ಚೌಕಟ್ಟು ಕಟ್ಟಲು ಸಾಧ್ಯವಾಗುವುದಿಲ್ಲ. ಉತ್ತರ ಕನ್ನಡದ ಹೊನ್ನಾವರ ತಾಲೂಕಿನಲ್ಲಿ ಬ್ರಿಟೀಷರ ಕಾಲದಲ್ಲಿ ‘ಹಡಗಿನ ಬಾಗಿಲು’ ಎಂದಿದ್ದ ಊರು ವ್ಯತ್ಯಸ್ಥಗೊಂಡು ಹಡಿನಬಾಳು ಆಗಿದೆ. ಈ ಕಡಲ ಕಿನಾರೆಯಿಂದ ಬಂದಿರುವ ಶ್ರೀಪಾದ ಹೆಗಡೆ ಅವರದ್ದು ಯಕ್ಷಗಾನದಲ್ಲಿ ಅಲೆ ಎಬ್ಬಿಸಿದ ಜನಪ್ರಿಯ ಹೆಸರಲ್ಲ. ಆದರೆ, ಅವರು ‘ಜನ ಪ್ರೀತಿ’ ಗಳಿಸಿದ ಕಲಾವಿದ.

ರಂಗಸ್ಥಳದಲ್ಲಿ ಸ್ವರ್ಣ ವರ್ಣ ಲೇಪಿತ ವೇಷಭೂಷಣದಿಂದ ಶೋಭಿಸುವ ಶ್ರೀಪಾದ ಹೆಗಡೆ, ನಿಜ ಜೀವನದಲ್ಲಿ ಬಡತನದ ಬೇಗೆಯಲ್ಲಿ ಬೆಂದಿದ್ದಾರೆ. ಅದನ್ನು ಎಲ್ಲಿಯೂ ಹೇಳಿಕೊಂಡವರೂ ಅಲ್ಲ. ಬದುಕು ಸಾಗಿಸಲು ಯಕ್ಷಗಾನದೊಟ್ಟಿಗೆ ಹೊಲಿಗೆ, ವೀಳ್ಯದ ಎಲೆ ವ್ಯಾಪಾರ, ಕೊಡೆ ರಿಪೇರಿ, ಗಣಪತಿ ಮೂರ್ತಿ ಮಾಡುವ ವೃತ್ತಿಯನ್ನೂ ಅಪ್ಪಿಕೊಂಡಿದ್ದಾರೆ.

ಕಲಾವಿದರಾಗಿ ಶ್ರೀಪಾದ ಹೆಗಡೆ ಗಟ್ಟಿ ಪ್ರತಿಭೆ. ಕೆರೆಮನೆ ಮಹಾಬಲ ಹೆಗಡೆ ಅವರಂತಹ ಮೇರು ನಟರಲ್ಲಿ ವಿದ್ಯಾರ್ಥಿಯಾಗಿ ಅಭ್ಯಾಸ ಮಾಡಿದ್ದಾರೆ. ಮಹಾಬಲ ಹೆಗಡೆ ಪ್ರಭಾವವು ಪ್ರತ್ಯಕ್ಷ, ಪರೋಕ್ಷವಾಗಿ ಅನೇಕ ಕಲಾವಿದರ ಮೇಲೆ ಆಗಿದೆ. ಆದರೆ, ಈಗಲೂ ಮಹಾಬಲರನ್ನು ಮಾತಾಡಿಸಿದರೆ, ‘ಹಡಿನಬಾಳು ಶ್ರೀಪಾದ ನನ್ನ ವಿದ್ಯಾರ್ಥಿ’ ಎಂದು ಮೆಚ್ಚುಗೆಯ ಪ್ರಶಸ್ತಿ ಕೊಡುತ್ತಾರೆ. ಇದು ಹಡಿನಬಾಳರಿಗೆ ಸಲ್ಲುವ ದೊಡ್ಡ ಗೌರವವೇ ಸರಿ. ಮುನ್ನುಗ್ಗುವ, ಓಲೈಸುವ ಸ್ವಭಾವಕ್ಕೆ ಕಟ್ಟು ಬೀಳದಿರುವುದರಿಂದ ಅದೆಷ್ಟೋ ಅವಕಾಶದಿಂದ ವಂಚಿತರಾಗಿದ್ದೂ ನಿಜ.

ಅಜಾನುಬಾಹು ಹಡಿನಬಾಳು ಧೈತ್ಯ, ದಾನವ ವೇಷಗಳಿಗೆ ಹೇಳಿ ಮಾಡಿಸಿದಂತಹ ಕಲಾವಿದ. ಸಾತ್ವಿಕ ಪಾತ್ರಗಳನ್ನೂ ಸಮರ್ಥವಾಗಿಯೇ ತೂಗಿಸುತ್ತಾರೆ. ಕೃಷ್ಣ ಸಂಧಾನದ ಶ್ರೀಪಾದರ ಕೌರವ, ಸುಭದ್ರಾ ಕಲ್ಯಾಣದ ಬಲರಾಮ, ದಮಯಂತಿ ಪುನಃಸ್ವಯಂವರದ ಋತುಪರ್ಣನಂತಹ ಪಾತ್ರಗಳು ಬಹಾಬಲರು ಹಾಕಿ ಕೊಟ್ಟ ನಡೆಯಲ್ಲೇ ಇರುತ್ತವೆ. ಗದಾಯುದ್ಧದ ಭೀಮ, ಕಾರ್ತವೀರ್ಯಾರ್ಜುನದ ರಾವಣ, ಕೀಚಕವಧೆಯ ವಲಲ, ಕರ್ಣಪರ್ವದ ಶಲ್ಯ, ಶರಸೇತು ಬಂಧನದ ಅರ್ಜುನ, ವಾಲಿವಧೆಯ ವಾಲಿಯ ಪಾತ್ರಗಳು ಕಲಾಸಕ್ತರ ಚಿತ್ತಭಿತ್ತಿಯಲ್ಲಿ ಅಚ್ಚೊತ್ತಿವೆ. ಹನುಮಂತ, ಅಶ್ವತ್ಥಾಮ, ರಕ್ತಜಂಘ ಸೇರಿದಂತೆ ಹಲವು ಪಾತ್ರಗಳೂ ಇವರದ್ದೇ ಆದ ರೀತಿಯಲ್ಲಿ ಇವೆ.

ಬಣ್ಣಗಾರಿಕೆ, ಮುಖವರ್ಣಿಕೆಯಲ್ಲೂ ಹಡಿನಬಾಳು ವಿಶೇಷ ಪ್ರಾವೀಣ್ಯ ಹೊಂದಿದ್ದಾರೆ. ಅರ್ಥಗಾರಿಕೆಯಲ್ಲಿ ವೈಚಾರಿಕತೆ ಇದೆ. ಶರಾವತಿಯ ಮತ್ತೊಂದು ದಡದ ಮಾಳ್ಕೋಡು, ಶ್ರೀಪಾದರ ಮೂಲ ಊರು. ಯಕ್ಷಗಾನದ ಮುಕ್ತ ವಿಶ್ವವಿದ್ಯಾಲಯದಂತಿರುವ ಗುಂಡಬಾಳದಲ್ಲೇ ಪ್ರಥಮವಾಗಿ ಗೆಜ್ಜೆ ಕಟ್ಟಿದ್ದಾರೆ. ಮೊದಲ ವೇಷ ಹಾಸ್ಯಗಾರನದ್ದು. ಆಗ ಮಹಾಬಲ ಹೆಗಡೆಯವರೇ ‘ಹಾಸ್ಯ ಮಾಡಿ ಆಯುಷ್ಯ ಹಾಳು ಮಾಡಿಕೊಳ್ಳಬೇಡ’ ಎಂದು ಗದರಿಸಿ ಮನೆಗೆ ಕರೆದು ಹೆಜ್ಜೆ ಕಲಿಸಿದರಂತೆ.

ಹಡಿನಬಾಳರ ಮೇಲೆ ವಿಶ್ವಾಸ ಮೂಡಿದ ದಿನ ಮಹಾಬಲ ಹೆಗಡೆ, ‘ನಾನು ಹೇಳಿದರೆ ನಿನ್ನನ್ನು ಯಾವ ಮೇಳದವರೂ ಸೇರಿಸಿಕೊಳ್ಳುತ್ತಾರೆ. ಹೊರಟು ಬಿಡು’ ಎಂದಾಗ ‘ಹಾಗೆಲ್ಲ ಮೇಳಕ್ಕೆ ಹೋಗಿ ನಿಮ್ಮ ಹೆಸರು ಕೆಡಿಸಲಾರೆ’ನೆಂದು ನಯವಾಗಿ ಒಲ್ಲೆ ಎಂದಿದ್ದನ್ನು ಶ್ರೀಪಾದ ಹೆಗಡೆ ನೆನಪು ಮಾಡಿಕೊಳ್ಳುತ್ತಾರೆ. ನಂತರ ಸ್ವಂತ ಸಾಮರ್ಥ್ಯದಿಂದಲೇ ಬಡಗುತಿಟ್ಟಿನ ಪ್ರಮುಖ ಮೇಳಗಳಲ್ಲಿ ವೇಷ ಮಾಡಿದ್ದಾರೆ. ಈ ವರ್ಷ ಪೆರ್ಡೂರು ಮೇಳಕ್ಕೆ ಸೇರ್ಪಡೆಗೊಂಡು ಪ್ರಧಾನ ವೇಷಧಾರಿಯಾಗಿ ಬಡ್ತಿ ಪಡೆದಿದ್ದಾರೆ. ಅದು ಅವರಿಗೆ ಯಶಸ್ಸು ತರಲೆಂದು ಅಪೇಕ್ಷಿಸೋಣ.
(೨೦೦೯ ರ ಜುಲೈ ೫ ರಂದು ಎಡಿಎ ರಂಗಮಂದಿರದಲ್ಲಿ ಶ್ರೀಪಾದ ಹೆಗಡೆ ಅಭಿನಂದನೆ ಸಂದರ್ಭದಲ್ಲಿ ವಿಕದಲ್ಲಿ ಪ್ರಕಟಗೊಂಡ ಲೇಖನ)

0 comments:

Post a Comment

Last Posts