ಯಕ್ಷಗಾನದ ಮಾದರಿ ಡಿವಿಡಿ ‘ಇಡಗುಂಜಿಯಲ್ಲಿ ಶ್ರೀರಾಮ ನಿಜ ನಿರ್ಯಾಣ’ ಇನ್ನೂ ಇವೆ, ದರ್ಶನ ಯಾವಾಗ ?


ಯಕ್ಷಗಾನಕ್ಕೆ ಅವರೇ ಮಾದರಿ. ಅವರೇನೇ ಮಾಡಿದರೂ ಅಲ್ಲೊಂದು ಶಿಸ್ತು, ಸೊಬಗು ಇರುತ್ತದೆ ಎಂಬ ಮಾತು ಕೆರೆಮನೆಯವರ ಬಗ್ಗೆ ಆಗಾಗ ಕೇಳಿ ಬರುತ್ತದೆ. ಡಿವಿಡಿ ತಯಾರಿಕೆ ವಿಚಾರದಲ್ಲೂ ಇದು ನಿಜವಾಗಿದೆ.

ಇಡಗುಂಜಿಯ ಆರಾಧ್ಯ ದೇವ ಶ್ರೀಮಹಾಗಣಪತಿ ಸನ್ನಿಧಾನದಲ್ಲಿ (ತೇರಿನ ದಿನ) ‘ಸೀತಾ ವಿಯೋಗ’ದ ರಾಮನ ಪಾತ್ರ ಮಾಡಿದ್ದ ಶಂಭು ಹೆಗಡೆಯವರು ಅಲ್ಲಿಯೇ ಕೊನೆಯುಸಿರೆಳೆದಿದ್ದು ಗೊತ್ತಿದೆ. ಆ ಆಟದ ಡಿವಿಡಿಯನ್ನು ಅವರ ಮಗ ಶಿವಾನಂದ ಹೆಗಡೆ ಹೊರ ತಂದಿದ್ದಾರೆ. ಅದು ಇತ್ತೀಚೆಗೆ ಗುಣವಂತೆಯಲ್ಲಿ ನಡೆದ ಕೆರೆಮನೆ ಮೇಳದ ಅಮೃತ ಮಹೋತ್ಸವದಲ್ಲಿ ಬಿಡುಗಡೆ ಆಗಿದೆ. ‘ಇಡಗುಂಜಿಯಲ್ಲಿ ಶ್ರೀರಾಮ ನಿಜ ನಿರ್ಯಾಣ’ ಹೆಸರಿನಲ್ಲಿ ಈ ಡಿವಿಡಿ ಸಿದ್ಧಗೊಂಡಿದೆ.

ಯಕ್ಷಗಾನದ ಅದೆಷ್ಟೋ ಸಿ.ಡಿ/ ಡಿವಿಡಿಗಳು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿವೆ. ಅವೆಲ್ಲವುಕ್ಕಿಂತ ಭಿನ್ನ ಎಂಬುದೇ ಈ ಡಿವಿಡಿಯ ವಿಶೇಷತೆ. ಡಾಕ್ಯುಮೆಂಟರಿ ಮಾಡುವುದರಲ್ಲಿ ಕೆರೆಮನೆಯವರು ಎತ್ತಿದ ಕೈ. ಅದಕ್ಕೆ ಕಾರಣ ಅವರ ಒಡನಾಟ, ಅನುಭವ. ಡಾ. ಶಿವರಾಮ ಕಾರಂತರಂತೆ ವಿಶಾಲ ನೆಲೆಯಲ್ಲಿ ಚಿಂತನೆ ಮಾಡಿದವರು ಕೆರೆಮನೆಯವರು. ಸ್ವತಃ ಕಲಾವಿದರಾಗಿ ಯಕ್ಷಗಾನವನ್ನು ತಳಸ್ಪರ್ಷಿಯಾಗಿ ಮೈಗೂಡಿಸಿಕೊಂಡು ಅದನ್ನು ದೇಶದ ಇತರ ಕಲಾ ಪ್ರಕಾರಗಳೊಂದಿಗೆ ಅಳೆದು ನೋಡಿದವರು ಕೆರೆಮನೆ ಬಂಧುಗಳು. ಅವರು ‍ಯಾರದೋ ಒತ್ತಡ, ಭಿಡೆಯಕ್ಕೆ ಮಣಿಯುವವರೂ ಅಲ್ಲ. ಹಾಗಾಗಿ ಅವರ ಯಾವ ಪ್ರಸಂಗಗಳ ‘ಬೆಳ್ಳಿತಟ್ಟೆ’ಗಳೂ (ಸಿ.ಡಿ) ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಅಚ್ಚುಕಟ್ಟುತನ, ವೃತ್ತಿಪರತೆಯಿಲ್ಲದ ಡಿವಿಡಿಗಳು ಬೇಡ ಎಂಬುದೇ ಶಂಭು ಹೆಗಡೆಯವರ ನಿಲುವಾಗಿತ್ತು.

ಸೈದ್ಧಾಂತಿಕವಾಗಿ ಈ ವಾದ ಒಪ್ಪುವಂಥದ್ದು. ಆದರೆ ಮಹಾಬಲ ಹೆಗಡೆ, ಶಂಭು ಹೆಗಡೆ ಜೋಡಿಯ ಸಿ.ಡಿಗಳು ಇಲ್ಲದಿರುವುದು ಐತಿಹಾಸಿಕ ಪ್ರಮಾದ. ಸಿ.ಡಿ ಯುಗ ಆರಂಭಗೊಂಡಾಗ ಮಹಾಬಲ - ಶಂಭು ಹೆಗಡೆ ಇನ್ನೂ ವೇಷ ಮಾಡುತ್ತಿದ್ದರು. ಮನಸ್ಸು ಮಾಡಿದ್ದರೆ ಅಂದಿನ ಪ್ರದರ್ಶನಗಳನ್ನು ಸರಿಯಾಗಿ ವೀಡಿಯೊ ಮಾಡಿ ದಾಖಲಿಸಬಹುದಿತ್ತು. ಆ ಕೆಲಸ ಆಗಲೇ ಇಲ್ಲ. ಮಾದರಿಯಾಗಿ ಉಳಿಸುವುದಕ್ಕಾದರೂ ಸ್ಟುಡಿಯೋದಲ್ಲಿಯೇ ಇದಕ್ಕಾಗಿ ಶೂಟಿಂಗ್ ಮಾಡಬಹುದಿತ್ತು. ಅದೂ ಕೈಗೂಡಿಲ್ಲ. ಈ ಮೇರು ಕಲಾವಿದರನ್ನು ಒಡಂಬಡಿಸುವ ಯತ್ನ ಸಫಲವಾಗಲಿಲ್ಲವೆಂದು ಕಾಣುತ್ತದೆ.

ಈ ಕೊರತೆಯನ್ನು ಗುಲಗಂಜಿಯಷ್ಟು ನೀಗಿಸುವ ರೀತಿಯಲ್ಲಿ ಇರುವುದು ಸೀತಾ ವಿಯೋಗದ ಡಿವಿಡಿ. ಇದರಲ್ಲಿ ಮಹಾಬಲ ಹೆಗಡೆ ಇಲ್ಲ. ಶಂಭು ಹೆಗಡೆಯವರ ಕಡೆಯ ವೇಷವೆಂಬ ದೃಷ್ಟಿಯಿಂದ ಮಹತ್ವ. ಮುಖ್ಯವಾಗಿ ಇದು ಡಿವಿಡಿ ಉದ್ದೇಶಕ್ಕೆ ಚಿತ್ರೀಕರಣಗೊಂಡದ್ದಲ್ಲ. ಆದರೆ ಆಡಿಯೊ, ವೀಡಿಯೊ ಗುಣಾತ್ಮಕವಾಗಿದೆ.
ಉತ್ತಮ ಡಾಕ್ಯುಮೆಂಟರಿ
ಡಾಕ್ಯುಮೆಂಟರಿ ರೂಪದಲ್ಲಿಯೇ ಶಿವಾನಂದ ಹೆಗಡೆ ಇದನ್ನು ಸಿದ್ಧ ಪಡಿಸಿದ್ದಾರೆ. ಡಿವಿಡಿಯ ಕವರ್ ಪೇಜ್ ಕಲಾತ್ಮಕವಾಗಿದೆ. ಇದರ ರಚನೆ ಅಪಾರ ಅವರದ್ದು. ‘ಭೀಮಸೇನ ಜೋಷಿ, ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನ್ಸೂರರಂತೆಯೇ ಶಂಭು ಹೆಗಡೆ ಕೂಡ ಕನ್ನಡದ ಒಬ್ಬ ಶ್ರೇಷ್ಠ ಕಲಾವಿದ’ ಎಂಬ ಡಾ.ಯು.ಆರ್. ಅನಂತಮೂರ್ತಿಯವರ ನುಡಿ ಅಚ್ಚಾಗಿರುವುದು ಇದರ ಘನತೆ ಹೆಚ್ಚಿಸಿದೆ. ಕ್ಲಾಸಿಕಲ್ ಕ್ಷೇತ್ರದ ಡಿವಿಡಿ ದೊರೆಯುವ ಪ್ರತಿಷ್ಠಿತ ಮಳಿಗೆಗಳಲ್ಲಿ ಇದನ್ನಿಟ್ಟರೆ ಕಣ್ಸೆಳೆಯುವಷ್ಟು, ಎತ್ತಿಕೊಳ್ಳುವಷ್ಟು ಆಕರ್ಷಣೀಯವಾಗಿದೆ.

ಆರಂಭದಲ್ಲಿ ಶಂಭು ಹೆಗಡೆಯವರ ಕೋರಿಯೋಗ್ರಫಿ ಗುರು ಡಾ. ಮಾಯಾರಾವ್ ಮಾತಾಡಿದ್ದಾರೆ. ನಂತರ ಡಾ. ಅನಂತಮೂರ್ತಿ ಅವರದ್ದು. ಅನಂತಮೂರ್ತಿಗಳು ಯಕ್ಷಗಾನವನ್ನು ನೋಡುವ ದೃಷ್ಟಿಕೋನವು ನಮಗೊಂದು ಬಗೆಯ ಹೊಸ ಹೊಳಹು ಕೊಡುತ್ತದೆ. ಬಳಿಕ ಶಂಭು ಹೆಗಡೆಯವರನ್ನು ಹತ್ತಿರದಿಂದ ಕಂಡಿರುವ ಯಕ್ಷಗಾನದವರೇ ಆದ ಡಾ.ಎಂ. ಪ್ರಭಾಕರ ಜೋಶಿ, ಶಂಭು ಹೆಗಡೆ ಒಬ್ಬ ಕಲಾವಿದ-ಸಂಘಟಕ-ಚಿಂತಕರಾಗಿ ಎಷ್ಟು ಎತ್ತರದಲ್ಲಿದ್ದರು ಎಂಬುದನ್ನು ವಿವರಿಸಿದ್ದಾರೆ. ಮಾತಿನ ಬರದಲ್ಲಿ ‘ಮೊದಲು ಸಾಲಿಗ್ರಾಮ ಮೇಳದಲ್ಲಿ ಕೆಲ ಪದ್ಯದ ಸಾಲ್ವನ ವೇಷ ಹಾಕಿದ್ದ ಶಂಭು ಹೆಗಡೆ, ಇಡಗುಂಜಿಯಲ್ಲಿ ಶ್ರೀರಾಮ ನಿರ್ಯಾಣದ ರಾಮನ ಪಾತ್ರ ಮಾಡುವಷ್ಟು...’ ಎಂಬಂತೆ ಹೇಳಿ ಬಿಟ್ಟಿದ್ದಾರೆ. ಕೊನೆಯ ಪ್ರದರ್ಶನದಲ್ಲಿ ಶಂಭು ಹೆಗಡೆಯವರು ಮಾಡಿದ್ದು ಸೀತಾ ವಿಯೋಗದ (ಲವಕುಶ) ರಾಮನ ಪಾತ್ರ. ನಿರ್ಯಾಣದ್ದಲ್ಲ. ಇದೊಂದು ವಾಕ್ಯ ಕಟಾವಾಗದೇ (ಎಡಿಟ್) ಉಳಿದುಕೊಂಡಿದೆ.

ಇದಾದ ಮೇಲೆ ಸೀತಾ ವಿಯೋಗದ ಪ್ರದರ್ಶನವನ್ನು ಡಿವಿಡಿಗೆ ಅಳವಡಿಸಲಾಗಿದೆ. ಶತ್ರುಘ್ನನ (ಶಿವಾನಂದ ಹೆಗಡೆ) ಸನ್ನಿವೇಶ ಜಾಸ್ತಿ ಇಲ್ಲ. ಶಂಭು ಹೆಗಡೆಯವರಿಗೆ ನುಡಿನಮನ ಎಂಬ ದೃಷ್ಟಿಯಿಂದ ಹೀಗೆ ಮಾಡಲಾಗಿದೆ. ರಾಮನ ಪಾತ್ರ ತೋರಿಸಲು ಒತ್ತು ಕೊಡಲಾಗಿದೆ. ‘ಏಳಿ ಪೋಗುವ ನಾವು ಮುನಿಪನಿದ್ದೆಡೆಗೆ...’ ಪದ್ಯದ ವರೆಗೆ. ನಮಗೆಲ್ಲ ತಿಳಿದಿರುವ ಹಾಗೆ ನೆಬ್ಬೂರು ಭಾಗವತರದ್ದೇ ಹಿಮ್ಮೇಳ. ಈ ಡಿವಿಡಿ ಯಕ್ಷಗಾನಾಸಕ್ತರ ಸಂಗ್ರಹದಲ್ಲಿ ಇರಲೇಬೇಕಾದುದು. ಮನಸ್ಸಿಗೆ ಬಂದಂತೆ ಸಿ.ಡಿ ಮಾಡುವವರೂ ಇದನ್ನೊಮ್ಮೆ ಸಂಯಮದಿಂದ ನೋಡುವುದು ಒಳಿತು. ಸದ್ಯ ಉತ್ತುಂಗದಲ್ಲಿರುವ, ಭರವಸೆ ಹುಟ್ಟಿಸಿರುವ ಕಲಾವಿದರೂ ಇದರಿಂದ ಕಲಿತುಕೊಳ್ಳಬೇಕಾದುದು ಬಹಳ ಇದೆ. ಅಂಥವರ ಕೈಕಾಲು ಗಟ್ಟಿ ಇರುವಾಗಲೇ ಇಂಥಹುದೊಂದು ದಾಖಲೆ ಮಾಡಿಕೊಳ್ಳುವುದಕ್ಕೆ ಯೋಚಿಸಿದರೆ ಶಾಶ್ವತವಾಗಿ ಉಳಿಯುತ್ತದೆ. ಮುಖ್ಯವಾಗಿ ಯಕ್ಷಗಾನದ ಪ್ರೋತ್ಸಾಹಕರು, ಕಲಾತ್ಮಕ ಧೊರಣೆ ಇರುವವರು ಈ ಬಗ್ಗೆ ಆಲೋಚನೆ ಮಾಡಬೇಕು.
ಕಪಾಟಿನಲ್ಲಿದ್ದರೇನು ಪ್ರಯೋಜನ ?
ಇನ್ನೊಂದು ಮಹತ್ವದ ಸಂಗತಿಯೆಂದರೆ, ಕೆರೆಮನೆಯವರ ಶ್ರೇಷ್ಠ ಕೃತಿಗಳ ಡಿವಿಡಿಗಳು (ಕಲಾತ್ಮಕವಾದವು) ಇಲ್ಲವೆನ್ನುವುದು ನಿಜ. ಆದರೆ ಮಹಾಬಲ ಹೆಗಡೆಯವರನ್ನೂ ಒಳಗೊಂಡಂತೆ ಇಡಗುಂಜಿ ಮೇಳದ ಸುವರ್ಣ ಯುಗದ ನೇರ ಪ್ರದರ್ಶನಗಳು (ಲೈವ್ ಶೋ) ಬಹುತೇಕ ಚಿತ್ರೀಕರಣಗೊಂಡಿವೆ. ಶಿವಾನಂ ಹೆಗಡೆ ಖುದ್ದು ಅದನ್ನು ಮಾಡಿಸಿ ಜೋಪಾನವಾಗಿಟ್ಟಿದ್ದಾರೆ ಎಂಬ ಸುದ್ದಿ ಪ್ರಚಲಿತದಲ್ಲಿದೆ. ಅದು ಸತ್ಯವೆಂಬ ವಿಶ್ವಾಸ ನನ್ನದ್ದೂ ಕೂಡ. ಅದನ್ನೆಲ್ಲ ಶಿವಾನಂದ ಹೀಗೆ ಡಿವಿಡಿ ರೂಪಕ್ಕೆ ಇಳಿಸುತ್ತಾರೋ ಇಲ್ಲವೋ ಗೊತ್ತಿಲ್ಲ.
ಆದರೆ ಅವೆಲ್ಲ ಕೆರೆಮನೆ ಮೇಳದ ಸ್ವತ್ತಾಗಿ ಕಪಾಟಿನಲ್ಲೇ ಇದ್ದರೆ ಏನು ಪ್ರಯೋಜನ ? ಹಾಗಾದರೆ ಮುಂದಿನ ತಲೆಮಾರು ಒತ್ತಟ್ಟಿಗಿರಲಿ, ಈಗಿನವರಿಗೂ ‘ಕೆರೆಮನೆ ಘರಾಣೆ’ ಬೆಳೆದು ಬಂದ ವೈಭವದ ಪರಿಯನ್ನು ಕಾಣುವ ಅವಕಾಶ ತಪ್ಪಿ ಹೋಗುತ್ತದೆ. ಹಾಗೆ ಮಾಡಿದರೆ ಶಿವಾನಂದ ಹೆಗಡೆ ಅದಕ್ಕೆ ನೇರ ಹೊಣೆಯಾಗುತ್ತಾರೆ. ಯಾಕೆಂದರೆ ಈಗ ಉತ್ತರ ಕೊಡುವ ಜವಾಬ್ದಾರಿ ಸ್ಥಾನದಲ್ಲಿ ಇರುವವರು ಅವರು. ಪ್ರಶ್ನಿಸುವ ಸ್ವಾತಂತ್ರ್ಯ ನಮಗೆ ಧಾರಾಳವಾಗಿ ಇದೆ.

ನಾವೆಲ್ಲ ಶಿವಾನಂದ ಹೆಗಡೆ ಅವರಲ್ಲಿ ಇದೆಯೆಂದು ಭಾವಿಸಿರುವ ಕೆರೆಮನೆಯವರ ಯಕ್ಷಗಾನಗಳ ವೀಡಿಯೊ ಪ್ರತಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬೇಕೆಂದು ನಾನು ಸಲಹೆ ಕೊಡುವುದಿಲ್ಲ. ಕಡೇ ಪಕ್ಷ ಅವನ್ನೆಲ್ಲ ಡಾಕ್ಯುಮೆಂಟರಿ ರೂಪದಲ್ಲಿಯೇ ಗುಣವಂತೆ ಕಲಾಕೇಂದ್ರದಲ್ಲಿಯೇ ಹಾಕಿ ತೋರಿಸಲಿ. ಪ್ರತಿ ವರ್ಷ ಇದಕ್ಕಾಗಿ ವಿಶೇಷ ದಿನಗಳನ್ನು ನಿಕ್ಕಿ ಮಾಡಲಿ. ಇದರಿಂದ ಅಭಿಮಾನಿಗಳು, ಕಲಾವಿದರು, ಕ್ಷೇತ್ರಕ್ಕೆ ಬರಲಿರುವ ಹೊಸ ಪ್ರತಿಭೆಗಳಿಗೂ ಅನುಕೂಲವಾಗುತ್ತದೆ. ಅಧ್ಯಯನಾಸಕ್ತರಿಗೂ ಅನುವು ಮಾಡಿ ಕೊಡಬೇಕು. ಇಲ್ಲದಿದ್ದರೆ ಯಕ್ಷಲೋಕ ಬೆರಗಾಗುವಂತೆ ಇಡಗುಂಜಿ ಮೇಳದ ಅಮೃತ ಮಹೋತ್ಸವ ಸಂಘಟಿಸಿದ ಶಿವಾನಂದ ಹೆಗಡೆಯವರನ್ನು ತನ್ನಲ್ಲಿರುವುದನ್ನು ಯಾರಿಗೂ ಹೇಳದ, ಯಾರಿಗೂ ಕೊಡಲೂಬಾರದು ಎಂಬ ನಂಬಿಕೆಯ ‘ಗಿಡಮೂಲಿಕೆ ವೈದ್ಯ’ನಂತೆ ನೋಡಬೇಕಾದ ಸಂದರ್ಭ ಬಂದೀತು.
(‘ಇಡಗುಂಜಿಯಲ್ಲಿ ಶ್ರೀರಾಮ ನಿಜ ನಿರ್ಯಾಣಡಿವಿಡಿ ಬೇಕಾದವರು ಶಿವಾನಂದ ಹೆಗಡೆ ಅವರನ್ನು ಸಂಪರ್ಕಿಸಿ : ೯೪೪೮೧೮೯೧೪೦ ಫೋಟೊ ಕೃಪೆ - ಜೀಕೆ ಹೆಗಡೆ)

ಎತ್ತಿದ ಕೈಯ ಕೂಸು, ಅದಕ್ಕೀಗ ರಜತಾರೋಹಣ

‘ಯಾವ ಪಾತ್ರೆಯಲ್ಲಿ ಎಂತಹ ಎಣ್ಣೆ ಕುದಿಯುತ್ತಿದೆಯೆಂದು ಹೇಳಲಾಗದು. ಹಾಗೆಯೇ ಯಾರ ಅಂತರಂಗದಲ್ಲಿ ಅದಿನ್ನೆಂತಹ ಬೇಗುದಿ ಇದೆಯೆಂದೂ ಊಹಿಸಲಾಗದು’ ಇದು ರವೀಜಿ ಬೆಳೆಗೆರೆಯವರ ‘ಬಾಟಂ ಐಟಂ’ ಕಾಲಂ ಒಂದರಲ್ಲಿ ಬಂದ ವಿಚಾರ. ತಾತ್ಪರ್ಯ ಇಷ್ಟೇ. ಇನ್ನೊಬ್ಬರ ಬಗ್ಗೆ ಆಡಿಕೊಳ್ಳುವಾಗ, ಅಣಕಿಸುವಾಗ ತುಸು ಯೋಚಿಸುವುದು ಒಳಿತು. ಹೊರನೋಟಕ್ಕೆ ಚೆನ್ನಾಗಿ ಕಾಣುವವನನ್ನು ‘ಅವನಿಗೇನೋ ಪೊಗದಸ್ತಾಗಿದ್ದಾನೆ’ ಎನ್ನುವುದು ತಪ್ಪಾದೀತು. ಹೇಗೆ ಹೇಗೋ ಇರುವವನನ್ನು ಹಗುರವಾಗಿ ನಡೆಸಿಕೊಳ್ಳುವುದೂ ರಿಸ್ಕು.

ಯಕ್ಷಗಾನದ ಕಣ್ಣಿಮನೆ ಅವರನ್ನು ನೋಡಿದಾಗಲೆಲ್ಲ ಈ ಸಾಲುಗಳು ಸರಕ್ಕನೆ ಕೈಹಿಡಿದೆಳೆಯುತ್ತಿದ್ದವು. ಕಣ್ಣಿಮನೆ ಗಣಪತಿ ಭಟ್ ಓರ್ವ ಉತ್ತಮ ಕಲಾವಿದ ಎನ್ನುವುದಕ್ಕಿಂತ, ಕಣ್ಣಿ ಹಾಗಂತೆ, ಹೀಗಂತೆ ಎಂಬ ಅಂತೆಕಂತೆಗಳ ಸರೋವರವೇ ಅವರ ಕುರಿತು ಹುಟ್ಟಿಕೊಂಡಿವೆ. ಸಾಲಿಗ್ರಾಮ ಮೇಳದಲ್ಲಿ ಯಾರಾದರೂ ವೇಷ ಮಾಡಲಿಲ್ಲವೆಂದರೆ, ಅದು ಕಣ್ಣಿಯೇ ಇರಬೇಕು. ಅಂವ ಇವತ್ತು ಜಾಸ್ತಿ ಇಳಿಸಿರಬೇಕು ಎಂಬ ಸಮರ್ಥನೆ ಬೇರೆ. ಹೊನ್ನಾವರ ಬಸ್‌ಸ್ಟ್ಯಾಂಡ್‌ನಲ್ಲಿ ಯಾವನೋ ಒಬ್ಬ ತೂರಾಡುತ್ತಿದ್ದನಂತೆ ಅಂದರೆ, ಅದೂ ಕಣ್ಣಿಮಾಣಿಯೇ ಎಂಬಷ್ಟರ ಮಟ್ಟಿಗೆ ಕಣ್ಣಿಯ ಚಾರಿತ್ರ್ಯ ವಧೆಗೈಯ್ಯುವ ಕ್ರಿಯೆ ಯಕ್ಷಗಾನ ವಲಯದಲ್ಲಿ ಜೀವನದಿಯಂತೆ ಹರಿಯುತ್ತಿದೆ.

ಕಣ್ಣಿ ಬಗೆಗೆ ಹೀಗೆಲ್ಲ ಅಂದುಕೊಂಡಿದ್ದೇ ಸರ್ವಾಪರಾಧ. ಅವರೊಬ್ಬ ‘ಸುಬುಗ ಸುಬ್ರಾಯ’ ಎನ್ನಲು ಹೊರಟಿಲ್ಲ. ವೈಯಕ್ತಿಕ ಬದುಕಿನ ನೋವು ಅವರನ್ನು ಮನುಷ್ಯ ಸಹಜವಾದ ವ್ಯಸನಕ್ಕೆ ನೂಕಿದ್ದು ನಿಜ. ಅದರಿಂದ ಹೊರ ಬರುವ ಪ್ರಯತ್ನದಲ್ಲಿ ಸೋಲುತ್ತಿದ್ದುದೂ ಹೌದು. ನಾಲಿಗೆ ತುದಿಯಲ್ಲಿ ಕಣ್ಣಿಯ ‘ನಿಂದಾ ಸ್ತುತಿ’ ಅಂಟಿಸಿಕೊಂಡು ದಿಗ್ವಿಜಯಕ್ಕೆ ಹೊರಟವರು ಈ ನೆಲೆಯಲ್ಲಿ ಯೋಚಿಸಿಯೇ ಇರಲಿಲ್ಲವೆಂದು ಕಾಣುತ್ತದೆ.

ಅದಿರಲಿ, ಅಂಥವರ ದೃಷ್ಟಿಯಲ್ಲಿ ಹೀಗಿರುವ ಕಣ್ಣಿ ನಿಜಾರ್ಥದಲ್ಲಿ ಹೃದಯವಂತ. ಪಾಪದ ಪರದೇಶಿ. ಒಂದು ರೀತಿ ‘ಎತ್ತಿದ ಕೈಯ ಕೂಸು’ ಇದ್ದ ಹಾಗೆ. ಯಾರೊಂದಿಗೂ ರಂಪಾಟ, ಕಿರುಚಾಟವಿಲ್ಲ. ಎಲ್ಲರೊಂದಿಗೂ ನಗುತ್ತಲೇ ಮಾತಾಡುವ ಸ್ನೇಹಜೀವಿ. ಹಿಂದಿನಿಂದ ಬೈದುಕೊಂಡು ಹೋಗುವವರಲ್ಲೂ ವಿರೋಧ ಕಟ್ಟಿಕೊಂಡವರಲ್ಲ. ಅವನದ್ದು ಅದ್ಭುತ ಲಯ ಮಾರಾಯಾ..., ಎಂದು ಹೇಳಿ ಆಟದ ಟೆಂಟ್‌ನಿಂದ ಹೊರಬಿದ್ದ ಕೂಡಲೇ ಅಪಪ್ರಚಾರಕ್ಕೆ ತೊಡಗುವವರ
ಬಗ್ಗೆಯೂ ತಲೆ ಕೆಡಿಸಿಕೊಂಡವರಲ್ಲ.

ಪ್ರಾಯಶಃ ಇದೇ ಕಣ್ಣಿಯ ವ್ಯಕ್ತಿತ್ವದ ದೌರ್ಬಲ್ಯವಾಗಿತ್ತು ಎಂಬುದು ನನ್ನೆಣಿಕೆ. ರಂಗಕ್ಕೆ ಎಂದೂ ಅಪಚಾರವೆಸಗದ ಅವರು, ನಿಜ ಜೀವನವು ಪ್ರವಾಹದ ಅಲೆಯಲ್ಲಿ ತೊಯ್ದಾಡುತ್ತಿದ್ದರೂ ಅದನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲಿಲ್ಲ. ಹಿತೈಷಿಗಳು ಬಾಯಿ ಬಿಡಿಸುವ ಯತ್ನ ಮಾಡಿದರೂ ಮನಸ್ಸು ಬಿಚ್ಚಿ ಮಾತಾಡಲಿಲ್ಲ. ಕಡೆ ಕಡೆಗೆ ಅಂತಹವರಿಗೆ ದೂರದಿಂದಲೇ ಕರ ಜೋಡಿಸಿ ಜಾಗ ಖಾಲಿ ಮಾಡುತ್ತಿದ್ದುದೂ ಉಂಟು. ಹೀಗಾಗಿ ಕಣ್ಣಿಯನ್ನು ಬಹುವಾಗಿ ಪ್ರೀತಿಸಿ ಆದರಿಸುವವರೂ ಒಂದು ಹಂತದಲ್ಲಿ ಭರವಸೆ ಕಳೆದುಕೊಳ್ಳುವಂತಾಗಿತ್ತು.
ಹೊಸ ಅಧ್ಯಾಯ
ಆದರೆ
, ಎಲ್ಲದಕ್ಕೂ ಒಂದು ಕಾಲಘಟ್ಟ ಎಂಬುದು ಇರುತ್ತದೆ. ಬದಲಾವಣೆ ಗಾಳಿ ಎಲ್ಲಿಂದಲೋ ಬಂದು ಬರಸೆಳೆದು ಅಪ್ಪಿಕೊಂಡು ಬಿಡುತ್ತದೆ. ಕಣ್ಣಿಯ ಬದುಕಿನಲ್ಲೂ ಅಂಥದೊಂದು ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಾಗಿದೆ ಎನ್ನುವುದೇ ಈಗ ಖುಷಿ ಕೊಡುವ ಸಂಗತಿ.

ಈ ಸಾರ್ಥಕ ಕಾರ್ಯಕ್ಕೆ ಕೈಹಾಕಿದವರು ಕಣ್ಣಿಯವರ ಪರಮಾಪ್ತ ಹಿತೈಷಿ ಮನೋಜಕುಮಾರ ಭಟ್. ಜತೆಯಾಗಿ ನಿಂತವರು ಪ್ರಶಾಂತ ವರ್ಧನ, ಕಲಾವಿದರಾದ ಯಲಗುಪ್ಪ (ಕಣ್ಣಿಯ ಭಾವ), ರಮೇಶ ಭಂಡಾರಿ. ಇನ್ನೂ ಹಲವರು ಕೈಜೋಡಿಸಿದ್ದಾರೆ. ಕಣ್ಣಿಯನ್ನು ಮನೆಗೆ ಕರೆಸಿಕೊಂಡು ಅಂತರಾಳದಲ್ಲಿ ಹುದುಗಿ ಹೆಪ್ಪುಗಟ್ಟಿದ್ದ ಕಣ್ಣೀರನ್ನು ಬಸಿಯಗೊಡಲು ಔದಾರ್ಯ ತೋರಿದವರು ಮನೋಜ ಭಟ್. ಕಣ್ಣಿಯೇ ತಪ್ಪಿಸಿಕೊಂಡು ಹೋದರೂ ಅವರು ಬೆನ್ನು ಬಿದ್ದು ಸಾಂತ್ವನ ಹೇಳಿದ್ದಾರೆ. ಮೇಳದ ತಿರುಗಾಟದಲ್ಲಿ ಕಣ್ಣಿ ದೂರವಿದ್ದರೂ ತಮ್ಮ ಕಣ್ಗಾವಲಿನಿಂದ ಆಚೆ ಸರಿಯದಂತೆ ಕಾಳಜಿ ವಹಿಸಿದರು. ಅಷ್ಟೇ ಅಲ್ಲ, ವಾಸ್ತವವನ್ನು ಅರುಹಿ ಸಮಾಜದಲ್ಲಿ ಈ ಕಲಾವಿದನ ಬಗ್ಗೆ ಸದಭಿಪ್ರಾಯ ಮೂಡಿಸುವ ಹೊಣೆಯನ್ನೂ ಹೊತ್ತರು.

ಕಣ್ಣಿಗಾಗಿ ಇಷ್ಟೆಲ್ಲ ಶ್ರಮ ಹಾಕಿದ ಮನೋಜ ಭಟ್, ‘ಹದಗಾಲ’ವನ್ನು ನಿಶ್ಚಯಿಸಿ ಕಣ್ಣಿಮನೆ ಅಭಿನಂದನೆ ಕಾರ್ಯಕ್ರಮವನ್ನೂ ಸಂಘಟಿಸಿದರು. ‘ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ನಾಟ್ಯ ಮಯೂರ’ವು ಫೆಬ್ರವರಿ ೨೧ ರಂದು ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ನಡೆಯಿತು. ವೈಭವದಿಂದಲೇ ಜರುಗಿದ ಈ ಸಮಾರಂಭಕ್ಕಾಗಿ ಮನೋಜ ಭಟ್, ಮೂರ್‍ನಾಲ್ಕು ತಿಂಗಳಿಂದ ಪರಿಶ್ರಮ ಪಟ್ಟಿದ್ದಾರೆ. ಅವರದೇ ಸಂಯೋಜನೆ, ವ್ಯವಸ್ಥಾಪಕತ್ವದಲ್ಲಿ ಪ್ರದರ್ಶನಗೊಂಡ ‘ವಿಶ್ವಾಮಿತ್ರ ಮೇನಕೆ’, ‘ಅಭಿಮನ್ಯು ಕಾಳಗ’ ಆಖ್ಯಾನಗಳು ಯಶಸ್ವಿಯಾಗಿವೆ. ಕೊಂಡದಕುಳಿ, ಯಲಗುಪ್ಪ, ಥಂಡಿ, ತೋಟಿ, ಭಂಡಾರಿ, ಶಂಕರ ಭಾಗ್ವತ್, ಕೊಳಗಿ, ಮಂದರ್ತಿ (ಚೆಂಡೆ) ಅವರಂಥವರು ಕಣ್ಣಿಯ ರಜತಾರೋಹಣಕ್ಕೆ ಒದಗಿ ಬಂದರು. ವಿದ್ವಾನ್ ಉಮಾಕಾಂತ ಭಟ್ಟರು ದ್ರೋಣನ ವೇಷ ಹಾಕಿದ್ದು ಈ ಸಂಭ್ರಮಕ್ಕೆ ವೈದಿಕ ಗೌರವದ ಸೇಸೆಯೇ ಸರಿ.

ಕಚೇರಿ ಕೆಲಸದ ನಡುವೆ ಬಿಡುವು ಇಲ್ಲದ್ದರಿಂದ ಈ ಕಾರ್ಯಕ್ರಮ ನೋಡಲು ಸಾಧ್ಯವಾಗಲಿಲ್ಲ. ಆದರೆ, ಇದರ ಪೂರ್ಣ ಯಶಸ್ಸಿಗಾಗಿ ಹಂಬಲಿಸಿದವ. ರಾತ್ರಿ ೮.೩೦ ರ ಬಳಿಕ ಸ್ವಲ್ಪ ಹೊತ್ತು ಆಟ ನೋಡಲಷ್ಟೇ ಅವಕಾಶವಾಯಿತು. ರಂಗದಲ್ಲಿ ಉಮಾಕಾಂತ ಭಟ್ಟರು (ದ್ರೋಣ) ಥಂಡಿ ಭಾವನ (ಕೌರವ) ಸಂಭಾಷಣೆ ನಡೆದಿತ್ತು. ನಂತರ ರಮೇಶ ಭಂಡಾರಿಯವರ ದುಶ್ಶಾಸನನ ಮಾತಿನ ಮಳೆ. ಅಂದಿನ ಸಭೆ, ವಾತಾವರಣ ಅವಲೋಕಿಸುತ್ತಿದ್ದಂತೆ ಪ್ರಸಂಗದ ಕೊನೆಯ ಭಾಗ ಹತ್ತಿರವಾಗಿತ್ತು. ಅಲ್ಲಿ ಕಣ್ಣಿಯನ್ನು ಕಂಡಾಗ ಮನಸ್ಸಿಗೆ ಏನೋ ಒಂದು ಬಗೆಯ ತೃಪ್ತಿ. ಕಣ್ಣಿಗಿದು ಹೊಸ ಜನ್ಮ ಎನ್ನಿಸಿತು.
ಸಮಾರಂಭದಲ್ಲಿ ಕಣ್ಣಿ ಭಟ್ಟರಿಗೆ ಬಂಗಾರದ ಸರ ಹಾಕಲಾಗಿದೆ. ಇದು ಮನೋಜ ಭಟ್ಟರ ಉತ್ಸಾಹದ ದ್ಯೋತಕ. ಕಣ್ಣಿಯ ಭವಿಷ್ಯ ಅಪ್ಪಟ ಚಿನ್ನವಾಗಲಿ ಎಂಬುದರ ಸಂಕೇತ ಈ ಹಾರ. ಇದಕ್ಕೆ ಪೂರಕವಾಗಿ ತಾವಿನ್ನು ಹೊಸ ಮನುಷ್ಯನಾಗುವ ವಿಶ್ವಾಸದ ವಾಗ್ದಾನವನ್ನು ಕಣ್ಣಿ ನೀಡಿದ್ದಾರೆಂದು ಕೇಳಿ ಸಮಾಧಾನವಾಯಿತು.
ಮುಂದೇನು ?
ಇಷ್ಟೆಲ್ಲ
ಬರೆದಿದ್ದು ಕಣ್ಣಿಯನ್ನು ಹತ್ತಿರದಿಂದ ನೋಡಿದ ಸಹೃದಯ ಬಂಧುವಾಗಿ. ಕಪಟವರಿಯದ ಅವರ ವ್ಯಕ್ತಿತ್ವಕ್ಕೆ ಮಾರು ಹೋಗಿ. ಕಣ್ಣಿಯ ನೃತ್ಯದ ನಾವೀನ್ಯ, ಪುಂಡು ವೇಷದ ಮೆರೆಯುವಿಕೆ ಯಾವುದನ್ನೂ ಇಲ್ಲಿ ಹೇಳುವ ಅಗತ್ಯ ಕಾಣಲಿಲ್ಲ. ಅದು ಯಕ್ಷಗಾನದವರಿಗೆ ಗೊತ್ತು. ಈ ಕ್ಷಣಕ್ಕೆ ನಿಂತು ಯೋಚಿಸಿದರೂ ಕಣ್ಣಿಯ ಭವಿತವ್ಯ ಉಜ್ವಲವಾಗಿದೆ. ರಾಜವೇಷ (ಕಿರೀಟ) ಅವರಿಗೆ ಒಪ್ಪುವುದಿಲ್ಲವೆಂಬುದನ್ನು ಬದಿಗಿಡೋಣ. ತಮ್ಮ ದೇಹ ವಿನ್ಯಾಸಕ್ಕೆ ಹೊಂದುವ ವೇಷಭೂಷಣ, ಮುಖ್ಯವಾಗಿ ಸರಿಯಾದ ಕಿರೀಟ ಆಯ್ದುಕೊಂಡರೆ ಅದೂ ಆದೀತು. ಆಗ ಕಣ್ಣಿ ರಂಗದ ಪೋರನಷ್ಟೇ ಅಲ್ಲ. ‘ರಂಗಸ್ಥಳದ ರಾಜ’ನೂ ಆಗಬಲ್ಲರು. ಮುಖವರ್ಣಿಕೆ, ಮೀಸೆ ಹಚ್ಚುವಿಕೆಯಲ್ಲೂ ಶ್ರದ್ಧೆ ಬೇಕು. ಕುಣಿತವೂ ಪಾತ್ರದ ಸಾಲು, ಸ್ವಭಾವಾನುಗುಣವಾಗಿ ಇರಬೇಕು.

ಕೆರೆಮನೆ ಮಹಾಬಲ ಹೆಗಡೆಯವರೂ ಮೊದಲು ಸಿಕ್ಕಾಪಟ್ಟೆ ಕುಣಿಯುತ್ತಿದ್ದರಂತೆ. ಚಪ್ಪಾಳೆ ಬೀಳುವುದು ಮಾಮೂಲು. ಆದರೆ, ಕಾರಂತರ ಒಡನಾಟ ಹೆಗಡೆಯವರ ಚಿಂತನೆಯನ್ನೇ ಬದಲಿಸಿತು. ಅವರು ಯಕ್ಷಗಾನದ ಮಹಾಬಲರಾದರು. ಅದಕ್ಕೆ ಸತತ ಓದು, ಅಧ್ಯಯನದ ಕೃಷಿಯಿತ್ತು. ಹಾಗಾಗಿ ಅವರದೇ ಆದ ಅನೇಕ ಪಾತ್ರಗಳನ್ನು ಕಡೆದು ನಿಲ್ಲಿಸಿದ್ದಾರೆ. ಮಹಾಬಲರನ್ನು ಅನುಸರಿಸಿದವರು ಆ ಪ್ರತಿಮೆಗಳನ್ನು ಅಲುಗಾಡಿಸುವುದಿರಲಿ, ಹತ್ತಿರ ಹೋಗಿ ಗಟ್ಟಿಯಾಗಿ ಸ್ಪರ್ಷಿಸುವ ಧೈರ್ಯವನ್ನೂ ಮಾಡಿಲ್ಲ. ಪ್ರತಿಮೆಗೆ ಪ್ರದಕ್ಷಿಣೆ ಹಾಕುವಷ್ಟರಲ್ಲೇ ಬಸವಳಿಯುತ್ತಿದ್ದಾರೆ.

ವಿಷಯ ಎಲ್ಲಿಗೋ ಹೋಯಿತು. ಕಣ್ಣಿಯನ್ನು ಮಹಾಬಲರಿಗೆ ಹೋಲಿಸುವ ಉದ್ದೇಶವಿಲ್ಲ. ಶ್ರೇಷ್ಠ ಕಲಾವಿದ ಮಹಾಬಲ ಹೆಗಡೆಯವರು ಎಳೆಯ ಪ್ರಾಯದಲ್ಲಿ ದಣಿವರಿಯದ ಕುಣಿತದಿಂದ ಪ್ರಸಿದ್ಧಿಯಲ್ಲಿದ್ದರಂತೆ. ಕಣ್ಣಿಯೂ ಈಗ ಅಂತಹುದೊಂದು ಉತ್ತುಂಗದಲ್ಲಿದ್ದಾರೆ. ಹೀಗಾಗಿ ಬರಹ ಅತ್ತ ಹೊರಳಿತು. ಪ್ರಾಯಶಃ ಕಣ್ಣಿಗೂ ಕಾರಂತರಂತಹವರ ಸಾಂಗತ್ಯ ಸಿಕ್ಕಿದರೆ ಒಳ್ಳೆಯದು ಎನಿಸುತ್ತದೆ. ಏನೋ ಪರಿವರ್ತನೆಯಾದೀತೆನ್ನುವ ಆಸೆ. ಬೆನ್ನಿಗೇ ಈಗ ಅಂಥವರು ಯಾರಿದ್ದಾರೆ ಎಂಬ ಪ್ರಶ್ನೆಯೂ ಕಾಡುತ್ತದೆ. ಎಲ್ಲದಕ್ಕೂ ಕಾಲವೇ ಉತ್ತರಿಸಬೇಕು.

ಕಳೆದ ಐವತ್ತು ಐವತ್ತೈದು ವರ್ಷದಿಂದ ಯಕ್ಷಗಾನದಲ್ಲಿ ಸ್ಟಾರ್ ಪಟ್ಟ ಉಳಿಸಿಕೊಂಡು ಬಂದವರು ನಮ್ಮ ಚಿಟ್ಟಾಣಿ ಅಜ್ಜ. ಅವರು ಬರುತ್ತಾರೆಂದರೆ ಈಗಲೂ ರೋಮಾಂಚನ. ಸುಮ್ಮನೇ ರಂಗಸ್ಥಳದಲ್ಲಿ ನಡೆದುಕೊಂಡು ಹೋದರೂ ಆ ಸೊಬಗನ್ನು ನೋಡುವುದೇ ಚೆಂದ. ಅದು ನಮ್ಮ ಭಾಗ್ಯ. ಸದ್ಯ ಕಣ್ಣಿಯೂ ತಾರಾಮೌಲ್ಯದಲ್ಲಿ ಮೊದಲ ಸಾಲಿನಲ್ಲಿರುವ ಕಲಾವಿದ. ಅದನ್ನು ಉಳಿಸಿಕೊಳ್ಳುವುದು ಕಣ್ಣಿಯ ಕೈಯಲ್ಲೇ ಇದೆ. ಏನೇ ಅಡ್ಡಿ, ಆತಂಕ ಎದುರಾದರೂ ಅವುಡುಗಚ್ಚಿಕೊಂಡು ವೈಯಕ್ತಿಕ ಬದುಕನ್ನು ಹಳಿಗೆ ಆನಿಸಿ ಸಾಗುವುದನ್ನೂ ಅರ್ಥ ಮಾಡಿಕೊಳ್ಳಬೇಕಿದೆ. ಸುಖ, ದುಃಖಕ್ಕೆ ಮನೋಜ ಭಟ್ಟರ ಬಳಗ ಬೆನ್ನಿಗೆ ಇದ್ದೇ ಇರುತ್ತದೆ. ಅಭಿಮಾನಿಗಳ ಸಮೂಹವೂ ಇದೆ. ಈ ಪರಿಯ ರಕ್ಷಾ ವಲಯವಿರುವಾಗ ಕಣ್ಣಿ ಒಂಟಿಯಾಗಲಾರರು. ಒಬ್ಬರೇ ದುಗುಡದ ಕೋಟೆ ಹೊಗುವ ಸಂದರ್ಭವೂ ಬರಲಾರದು.

ಕಣ್ಣಿಗಾಗಿ ನಿಷ್ಕಲ್ಮಶ ಮನದಿಂದ ‘ಕಟಪಟೆ’ ಮಾಡುವವರದೊಂದು ಆಗ್ರಹವೂ ಇದೆ. ಅದನ್ನು ಪ್ರೀತಿಪೂರ್ವಕ ಆಜ್ಞೆಯೆಂದೇ ಭಾವಿಸಬಹುದು. ಕಣ್ಣಿ ತಾನು, ತನ್ನವರೊಂದಿಗೆ ಗೌರವದಿಂದ ಬಾಳಬೇಕು. ರಂಗದಲ್ಲಿ ಮೇರು ಎನ್ನುವಷ್ಟು ಎತ್ತರಕ್ಕೆ ಬೆಳೆಯಬೇಕು. ಮುಂದಿನ ಕಲಾಜೀವನದ ಮಹತ್ವ, ಹೊಣೆಗಾರಿಕೆ ಅರಿಯಬೇಕು. ಹಾಗಾದರೆ ಬೆಳ್ಳಿ ಹಬ್ಬದ ಸಂಭ್ರಮಕ್ಕೆ ವ್ಯಯಿಸಿದ ಬೆವರ ಹನಿ ಹನಿಗೂ ಬೆಲೆ ಬಂದಂತಾಗುತ್ತದೆ.

ಕೆರೆಮನೆ ಮೇಳಕ್ಕೆ ೭೫, ಶಿವರಾಮ ಹೆಗಡೆ ಜನ್ಮ ಶತಮಾನೋತ್ಸವ, ಯಕ್ಷ ತೇರಿಗೆ ಅಮೃತಕಳಶ

ದು ಸೂರ್ಯೋದಯದ ಮಯ. ಶರಾವತಿ ನದಿ ದಂಡೆಯಲ್ಲಿ ನಿಂತು ಕಿಸೆಗೆ ಕೈಹಾಕಿದರೆ ಒಂದು ಪಾವಲಿಯೂ ಇಲ್ಲ. ಕಾಲದಲ್ಲಿ ಹೊಳೆ ದಾಟಲು ದೋಣಿಯವನಿಗೆ ಒಂದಾಣೆ ಕೊಡಬೇಕಿತ್ತು.

ವ್ಯಕ್ತಿ ಚಿಂತಿಸಲಿಲ್ಲ. ನೇರ ದುರ್ಗಾಕೇರಿಯ (ಹೊನ್ನಾವರ) ಕಾಸಿಂ ಸಾಯ್‌ಬನ ಬೀಡಿ ಅಂಗಡಿಗೆ ತೆರಳಿ ಬಾಗಿಲು ತಟ್ಟಿದ. ವಿಷಯ ತಿಳಿಸಿದಾಗ ಕಾಸಿಂ ದುಡ್ಡು ತೆಗೆದಿಟ್ಟ. ಸಾಮಾನ್ಯರಾಗಿದ್ದರೆ ಅದನ್ನು ಎತ್ತಿಕೊಂಡು ಹೊರಡುತ್ತಿದ್ದರು.

ಆದರೆ
ಹಣದ ಅಗತ್ಯವಿದ್ದವ ಅಪ್ಪಟ ಸ್ವಾಭಿಮಾನಿ. ಬ್ಯಾಡ್ವೋ ಸೈಬ. ಒಂದಾಣೆಯಷ್ಟು ಬೀಡಿ ಕಟ್ಟಿ ಕೊಡ್ತೇನೆ ಎಂದ. ಬೀಡಿ-ಗೀಡಿ ಏನೂ ಬ್ಯಾಡ ಮಾಣಿ, ರೊಕ್ಕ ತಗಂಡು ಹೋಗೆಂದು ಕಾಸಿಂ ಜಬರ್‌ದಸ್ತ್ ಮಾಡಿದ. ಈ ಮನುಷ್ಯ ಬಿಡಬೇಕಲ್ಲ... ಹಠಮಾರಿಯೂ ಹೌದು. ಬೀಡಿ ಸುತ್ತುವುದಕ್ಕೇ ಕುಳಿತ. ಹತ್ತು ಜಾಸ್ತಿಯೇ ಬೀಡಿ ಕಟ್ಟಿದ. ನಂತರ ದುಡ್ಡು ತೆಗೆದುಕೊಂಡು ದೋಣಿ ಏರಿದ.

ಹೀಗೆ ತಾಪತ್ರಯ ಪಟ್ಟುಕೊಂಡೂ ತನ್ನತನ ಉಳಿಸಿಕೊಂಡವರು ಯಕ್ಷಗಾನದ ‘ಲೆಜೆಂಡ್’ ಕೆರೆಮನೆ ಶಿವರಾಮ ಹೆಗಡೆ. ಶಿವರಾಮ ಹೆಗಡೆ ನೆನಪಾದಾಗ ಸ್ವಾತಂತ್ರ್ಯ ಪೂರ್ವದ ಈ ಘಟನೆಯನ್ನು ಉತ್ತರ ಕನ್ನಡದ ಹಳಬರು ಈಗಲೂ ಮೆಲುಕು ಹಾಕುತ್ತಾರೆ. ಜತೆಗೇ ಅವಂಗೆ ಸಿಕ್ಕಾಪಟ್ಟೆ ‘ಶರ್ಕೆ’ (ಹಠ) ಇತ್ತು. ಎಂತಹ ಮೇಳ ಕಟ್ಟಿದ. ರಾಷ್ಟ್ರಪ್ರಶಸ್ತಿಗೂ ಭಾಜನನಾದ ಎಂದು ಸೇರಿಸುತ್ತಾರೆ.

ಕೆರೆಮನೆ ಶಿವರಾಮ ಹೆಗಡೆ ಅಂದರೇ ಹಾಗೆ. ಬದುಕನ್ನು ಸವಾಲಾಗಿ ಸ್ವೀಕರಿಸಿದ ಅವರೆಂದೂ ಇನ್ನೊಬ್ಬರ ಋಣಕ್ಕೆ ಬಿದ್ದವರಲ್ಲ. ಎಳೆಯ ಪ್ರಾಯದಲ್ಲೇ ಅವರೊಬ್ಬ ಛಲಗಾರ. ಬೀಡಿ ಕಟ್ಟಿ ದೋಣಿ ದಾಟಿದಂತಹುದೇ ಹಲವು ದೃಷ್ಟಾಂತಗಳು ಅವರ ಬಗ್ಗೆ ಇವೆ.

ಶಿವರಾಮ ಹೆಗಡೆ ಬದುಕುಳಿದಿದ್ದರೆ ಅವರ ನೂರರ ವಯಸ್ಸಿನ ಒಡ್ಡೋಲಗವನ್ನು ಯಕ್ಷಲೋಕ ಕಾಣಬಹುದಿತ್ತು. ಆ ಭಾಗ್ಯವಿಲ್ಲದಿದ್ದರೂ ಹೆಗಡೆಯವರ ಕೀರ್ತಿಸೌಧದಂತಿರುವ ‘ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ’ಯೀಗ ೭೫ ವಸಂತ ಪೂರೈಸಿದೆ. ಮೇಳವನ್ನು ಎತ್ತರಕ್ಕೆ ಬೆಳೆಸಿದವರು ಶಿವರಾಮರ ಪುತ್ರ ಕೆರೆಮನೆ ಶಂಭು ಹೆಗಡೆ. ದುರಾದೃಷ್ಟವೆಂದರೆ ಈ ಹರುಷದ ಹದಗಾಲದಲ್ಲಿ ಅವರೂ ಇಲ್ಲ. ಮಂಡಳಿಯ ವರಬಲದಂತಿದ್ದ ಮಹಾಬಲ ಹೆಗಡೆಯವರೂ ಈ ಲೋಕದಲ್ಲಿಲ್ಲ.

ನಿಜಕ್ಕೂ ಯಕ್ಷಗಾನದ ತೇರಿನಂತಹ ಕೆರೆಮನೆಯ ಇಡಗುಂಜಿ ಮೇಳಕ್ಕೆ ಇದೊಂದು ಬಗೆಯ ಸೂತಕದ ಕಾಲ. ವರ್ಷದ ಅವಧಿಯಲ್ಲಿ ಶಂಭು-ಮಹಾಬಲ ಹೆಗಡೆ ಅಗಲಿದ ದುಃಖದಲ್ಲಿ ಮಂಡಳಿಯಿದೆ. ನೋವು, ನಲಿವುಗಳನ್ನು ಕಂಡುಂಡೇ ಮೇಳವು ಯಾಣದ ಭೈರವೇಶ್ವರ ಶಿಖರದಷ್ಟು ಅಚಲವಾಗಿ ನಿಂತಿದೆ. ಸಾಂಸ್ಕೃತಿಕ ಜವಾಬ್ದಾರಿ ಹೊತ್ತುಕೊಂಡ ಕಲಾತಂಡವೊಂದು ಕರ್ತವ್ಯ ಮರೆಯುವಂತಿಲ್ಲ. ಹೀಗಾಗಿ ಅಮೃತ ಮಹೋತ್ಸವಕ್ಕೆ ಅಣಿಯಾಗಿದೆ. ಇದು ಹೊಸ ಹುಡುಕಾಟ, ಮಥನದ ನಿರೀಕ್ಷೆಯದು. ಅದಕ್ಕಾಗಿ ಈ ಅಕ್ಷರಾರೋಹಣ ಔಚಿತ್ಯವೆನಿಸಿತು.
ಆದರ್ಶದ ಹಾದಿ
ಆದರ್ಶ, ಮೌಲ್ಯ, ಕಲಾತ್ಮಕ ಧೋರಣೆ, ಸುಧಾರಣೆಯ ವಿಷಯದಲ್ಲಿ ಕೆರೆಮನೆ ಮೇಳವೇ ಮಾದರಿ. ಅದು ಇಂದಿಗೂ ಉಳಿದಿದ್ದರೆ ಶಿವರಾಮ ಹೆಗಡೆ ಹಾಕಿದ ಅಡಿಪಾಯ, ಶಂಭು ಹೆಗಡೆಯವರ ಶ್ರಮವೇ ಕಾರಣ. ‘ಕೆರೆಮನೆ ಮೇಳದ ಚೌಕಿಯಲ್ಲಿ (ಗ್ರೀನ್ ರೂಮ್) ಹೆಣ್ಣು ಮಕ್ಕಳು ಯಾವ ತೊಂದರೆಯಿಲ್ಲದೆ ಮಲಗಿಕೊಳ್ಳಬಹುದು’ ಎನ್ನುವ ಮಾತೊಂದಿದೆ. ಇದು ಉತ್ಪ್ರೇಕ್ಷೆಯದ್ದೇನೂ ಅಲ್ಲ. ಮೇಳ ಮರ್ಯಾದಸ್ಥರದ್ದು ಎನ್ನಲು ಅನುಭವಿಗಳು ಕೊಟ್ಟ ಪ್ರಶಸ್ತಿ ಇದೆನ್ನಲಡ್ಡಿಯಿಲ್ಲ. ಅಂದರೆ ಆಟಕ್ಕೆ ಹೋದ ಚಿಕ್ಕ ಮಕ್ಕಳ ತಾಯಂದಿರು ಹಾಲುಣಿಸಲು, ಅನಾರೋಗ್ಯಕ್ಕೆ ತುತ್ತಾದವರು ಚೌಕಿಗೆ ಹೋಗಿ ವಿಶ್ರಾಂತಿ ಮಾಡಿದ ನಿದರ್ಶನಗಳಿವೆ.

ದೂರದರ್ಶನದಲ್ಲಿ ಮೊದಲ ಬಾರಿ ಪ್ರದರ್ಶನ, ವಿದೇಶ ಯಾತ್ರೆ ಸೇರಿದಂತೆ ಹಲವು ಪ್ರಥಮಗಳಿಗೆ ಕಾರಣವಾಗಿದ್ದು ಕೆರೆಮನೆ ಮೇಳ. ಮೇಳ ಜನ್ಮವೆತ್ತಲು ಶಿವರಾಮರ ಹಠದ ಸ್ವಾಭಾವವೇ ಪ್ರೇರಣೆ. ಅವರು ವೇಷಧಾರಿಯಾಗಿ ಬೆಳಕಿಗೆ ಬರುತ್ತಿದ್ದಾಗ ವಿಶೇಷವಾಗಿ ಉತ್ತರ ಕನ್ನಡದಲ್ಲಿ ಯಕ್ಷಗಾನಕ್ಕೊಂದು ವ್ಯವಸ್ಥಿತ ಸಂರಚನೆಯೇ ಇರಲಿಲ್ಲ. ಒಮ್ಮೆ ಮುರ್ಡೇಶ್ವರದಲ್ಲಿ ಹತ್ತಾರು ಆಟ ಆಡಲು ಹೋಗಿದ್ದರಂತೆ. ಅವರನ್ನು ಕರೆದುಕೊಂಡು ಹೋಗಿದ್ದ ಸ್ತ್ರೀವೇಷಧಾರಿ ಮೂರ್‍ನಾಲ್ಕು ಪ್ರದರ್ಶನವಾಗುತ್ತಿದ್ದಂತೆ, ಹೆಚ್ಚಿನ ವೇತನದ ಆಸೆಗೆ ಬಿದ್ದು, ಗುಂಡಬಾಳಕ್ಕೆ ಹೊರಟರಂತೆ. ಇದನ್ನೊಂದು ಆಭಾಸ, ಅಪಮಾನವೆಂದೇ ಭಾವಿಸಿದ ಹೆಗಡೆ ಅಂದೇ ಸ್ವಂತ ಮೇಳಕ್ಕೆ ಅಡಿಗಲ್ಲು ಹಾಕಿದರು. ಆ ಕಾಲದ ಶ್ರೇಷ್ಠ ಭಾಗವತ ವೆಂಕಟರಮಣ ಯಾಜಿ ಜೀವದ ಗೆಳೆಯನಂತೆ ಬೆನ್ನಿಗೆ ನಿಂತರು.

ಶಿವರಾಮ ಹೆಗಡೆ ಕಾಲದಲ್ಲಿ ಮೇಳದ ಬಹುದೊಡ್ಡ ಸಾಧನೆಯೆಂದರೆ ಸುಸಂಸ್ಕೃತರು, ವಿದ್ವಾಂಸರು, ಯಕ್ಷಗಾನೇತರ ಕ್ಷೇತ್ರದ ಸಹೃದಯರನ್ನು ಈ ಕಲೆಯೆಡೆಗೆ ಎಳೆತಂದಿದ್ದು. ಈ ಮೂಲಕ ಯಕ್ಷಗಾನಕ್ಕೊಂದು ಗೌರವದ ಕವಚ ತೊಡಿಸಿದ್ದು. ಶಂಭು ಹೆಗಡೆ ಇದನ್ನು ವಿಸ್ತರಿಸುತ್ತ ಹೋದರು. ಕಲಾವಿದ, ಯಜಮಾನ, ಹೊಸತನದ ಆವಿಷ್ಕಾರದ ಸೃಜನಶೀಲರಾಗಿ ಬಡಗು ತಿಟ್ಟಿನ ಸೊಬಗನ್ನು ಶಿಸ್ತುಬದ್ಧಗೊಳಿಸಿದರು. ಮಹಾಬಲ ಹೆಗಡೆ, ಗಜಾನನ ಹೆಗಡೆ, ನೆಬ್ಬೂರು ಭಾಗವತರೊಂದಿಗಿನ ಶಂಭು ಹೆಗಡೆಯವರ ಮೇಳ ಸುವರ್ಣ ಯುಗ ಕಂಡಿದೆ. ಯಕ್ಷಗಾನದ ಅಗ್ರೇಸರನಾಗಿ ಮೇಳವನ್ನು ಮುನ್ನಡೆಸಿದ ಶಂಭು ಹೆಗಡೆ, ಗುಣವಂತೆಯಲ್ಲಿ 'ದಿ. ಶಿವರಾಮ ಹೆಗಡೆ ರಂಗಮಂದಿರ' ಕಟ್ಟಿದ್ದಾರೆ. ಯಕ್ಷಗಾನ ಶಾಲೆಯೂ ಇದೆ. ಈ ಎಲ್ಲದರ ವಾರಸುದಾರಿಕೆಯೀಗ ಶಂಭು ಪುತ್ರ ಶಿವಾನಂದ ಹೆಗಡೆಯ ಹೆಗಲೇರಿದೆ.

ಇಡಗುಂಜಿ
ಮೇಳದ ಬಗ್ಗೆ ಸಂಶೋಧನಾ ಗ್ರಂಥ (ಡಾ. ರಾಮಕೃಷ್ಣ ಜೋಶಿ) ಬಂದಿದೆ. ಶಂಭು ಹೆಗಡೆಯವರ ಕುರಿತೇ ಡಾ.ಜಿ.ಎಸ್. ಭಟ್ಟರು ಅಧ್ಯಯನ ಗ್ರಂಥ ಬರೆದಿದ್ದಾರೆ. ಮನೆತನದ ಮೂವರು ಮೇರು ಕಲಾವಿದರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸಂದಿದೆ. ಮಂಡಳಿ ತನ್ನ ಪ್ರತಿ ಹೆಜ್ಜೆ ಗುರುತನ್ನೂ ದಾಖಲಿಸುತ್ತಿದೆ. ಯಕ್ಷಗಾನದ ಇತಿಹಾಸದಲ್ಲೇ ಇದೊಂದು ಮೈಲುಗಲ್ಲು. ಈ ಸಂಭ್ರಮಕ್ಕೆ ಅಭಿಮಾನ ಪೂರ್ವಕ ಸೇಸೆಯ ಮಳೆಗರೆಯಬಹುದು.
ಹೆಗಲು ಕೊಟ್ಟವರು
ಇಡಗುಂಜಿ ಮೇಳದ ಸಾರಥ್ಯ ವಹಿಸಿದವರು ಕೆರೆಮನೆ ಬಂಧುಗಳು. ಅವರಿಗೆ ಹೆಗಲು ಕೊಟ್ಟವರು ಹಲವರು. ಪ್ರತಿಫಲದ ಅಪೇಕ್ಷೆಯಿಲ್ಲದೆ ಸ್ವಂತ ಮನೆಯಂತೆ ನಡೆದುಕೊಂಡು ಸಹಕರಿಸಿದವರಲ್ಲಿ ಹಣಗಾರು ನಾರಾಯಣ ಹೆಗಡೆ (ನೆಬ್ಬೂರು ಭಾಗವತರು) ಪ್ರಮುಖರು. ಇವರು ಶಿವರಾಮ ಹೆಗಡೆಯವರಿಗೂ ಪದ್ಯ ಹೇಳಿದ್ದಾರೆ. ಮಹಾಬಲ-ಶಂಭು-ಗಜಾನನ ಅವರಿಗೂ ಹಿಮ್ಮೇಳ ಒದಗಿಸಿದ್ದಾರೆ. ನಂತರ ಶಿವಾನಂದ ಹೆಗಡೆ ಹಾಗೂ ಅವರ ಮಕ್ಕಳಾದ ಶ್ರೀಧರ, ಶಶಿಧರರನ್ನೂ ಕುಣಿಸಿದ್ದಾರೆ. ಶಿವರಾಮ ಹೆಗಡೆ ಇದ್ದಾಗಲೇ ಕೆರೆಮನೆಗೆ ಹೋಗಿ ಅಲ್ಲಿಯವರೇ ಆಗಿ ಉಳಿದು, ಈ ಮನೆತನದ ೩ ತಲೆಮಾರನ್ನೂ ಬಲ್ಲವರು. ಮೇಳದ ಹಿರಿಯಣ್ಣನ ಸ್ಥಾನದಲ್ಲಿ ಇವರೊಬ್ಬರೇ ಈಗ ಇದ್ದಾರೆ. ನೆಬ್ಬೂರರ ಅನುಭವ ಈ ಮೇಳದ ನೋವು, ನಲಿವುಗಳೆರಡನ್ನೂ ತೆರೆದಿಡುತ್ತದೆ.

ಸಣ್ಣ ಮಾಣಿಯಾಗಿದ್ದಾಗಲೇ ಸೇರಿಕೊಂಡ ಮೇಳ ಇಷ್ಟು ಎತ್ತರಕ್ಕೆ ಬೆಳೆದಿದೆ ಎಂಬುದೇ ನೆಬ್ಬೂರರಿಗೆ ಹೆಮ್ಮೆ. ಮೇಳದಲ್ಲಿ ೫ ದಶಕ ಕಾಲ ಸೇವೆ ಸಲ್ಲಿಸಿರುವ ನೆಬ್ಬೂರರು, ಶಂಭು ಹೆಗಡೆಯವರ ರಂಗಸ್ಥಳದ ಯಶಸ್ಸಿನ ಪ್ರಧಾನ ಸೂತ್ರಧಾರರು. ಶಂಭು ಹೆಗಡೆ, ನೆಬ್ಬೂರು ಇಲ್ಲದೇ ಪ್ರದರ್ಶನಕ್ಕೆ ಹೋಗಿದ್ದೇ ಕಡಿಮೆ. ಅವರ ಪಾತ್ರಗಳಿಗೆ ನೆಬ್ಬೂರು ನಿನಾದ ಅಷ್ಟು ಅಗತ್ಯವಾಗಿತ್ತು. ಇಬ್ಬರೂ ಸ್ನೇಹಿತರಾಗಿ ಒಂದೇ ತಾಯಿಯ ಮಕ್ಕಳಂತೆ ಇದ್ದವರು. ಅದಕ್ಕಾಗಿ ಶಂಭು ಹೆಗಡೆ ಅವಧಿಯಲ್ಲಿ ಮೇಳಕ್ಕಾಗಿ ಸರ್ವ ಶ್ರಮವನ್ನೂ ಹಾಕಿದವರು ನೆಬ್ಬೂರು. ನೆಬ್ಬೂರರನ್ನು ಪ್ರತ್ಯೇಕಿಸಿ ಕೆರೆಮನೆ ಮೇಳವನ್ನು ನೋಡಲು ಸಾಧ್ಯವೇ ಇಲ್ಲ. ಮಂಡಳಿಯ ಎಲ್ಲ ಕಾಲಘಟ್ಟಕ್ಕೆ ಅವರೊಬ್ಬರೇ ಪ್ರತ್ಯಕ್ಷದರ್ಶಿಯಾಗಿ ಇದ್ದಾರೆ.
ರಾತ್ರಿ ಆಟ, ಹಗಲು ಪ್ರಚಾರ
ಪೂರ್ಣ ಪ್ರಮಾಣದ ವ್ಯವಸಾಯಿ ಸ್ವರೂಪದಲ್ಲಿ ಮೇಳವಿದ್ದಾಗ, ರಾತ್ರಿಯಿಡೀ ಪದ್ಯ ಹೇಳಿದ ಭಾಗವತರು, ಬೆಳಗ್ಗೆ ಸ್ವಲ್ಪ ನಿದ್ರೆ ಮಾಡಿ ಪ್ರಚಾರಕ್ಕೆ ಹೋಗುತ್ತಿದ್ದರಂತೆ. ಮದ್ದಲೆಯ ಮೋಡಿಗಾರ ದುರ್ಗಪ್ಪ ಗುಡಿಗಾರ ಆಗ ಇವರೊಂದಿಗೆ ವಾಹನ ಚಾಲಕರಾಗಿ ತೆರಳುತ್ತಿದ್ದರು. ಅಷ್ಟೇ ಅಲ್ಲ. ಟೆಂಟ್ ಕಟ್ಟುವುದಕ್ಕೆ, ಕುರ್ಚಿ ಹಾಕುವುದಕ್ಕೂ ಈ ಸೂತ್ರದಾರ ನೆರವಾಗಿದ್ದಾರೆ. ಅಡುಗೆ ಭಟ್ಟರಿಗೂ ಸಹಾಯ ಮಾಡಿದ್ದುಂಟು. ಕೊಳಗಿ ಅನಂತ ಹೆಗಡೆ ಹಾಗೂ ಭಾಗವತರು ಈ ಕಾರ್ಯಕ್ಕೆ ಸದಾ ಸಿದ್ಧರಿರುತ್ತಿದ್ದರು.

ಸ್ವತಃ
ಸ್ಥಿತಿವಂತರಲ್ಲದ ಭಾಗವತರು ಮಂಡಳಿ ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿದ್ದಾಗ ಶಿರಸಿಯ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ತಮ್ಮದೇ ಖಾತೆಯಿಂದ ಸಾಲ ತೆಗೆಸಿಕೊಟ್ಟಿದ್ದೂ ಇದೆ. ಬಳಿಕ ಒಂದೇ ವರ್ಷದಲ್ಲಿ ಶಂಭು ಹೆಗಡೆ ಈ ಸಾಲ ತೀರಿಸಿದ್ದರು. ಭಾಗವತರಿಗೆ ಕಾಯಂ ಆಗಿ ಪದ್ಯ ಹೇಳುವಷ್ಟು ಆರೋಗ್ಯ ಈಗ ಇಲ್ಲ. ಮೇಳದ ಸಂಚಾಲಕರು ವಿಶೇಷ ಸಂದರ್ಭಗಳಲ್ಲಿ ಬಯಸಿದರೆ ಅವರು ಎಂದಿನ ಪ್ರೀತಿಯಿಂದಲೇ ಹೋಗಲು ತಯಾರಾಗುತ್ತಾರೆ. ಎಂತಹ ಕಠಿಣ ಸನ್ನಿವೇಶದಲ್ಲೂ ಮಂಡಳಿ ತೊರೆಯುವ, ಅಧಿಕ ಸಂಬಳದ ಆಸೆ ತೋರಿಸಿದ ಇನ್ನೊಂದು ಮೇಳಕ್ಕೆ ಜಿಗಿಯುವ ಆಲೋಚನೆಯನ್ನೂ ಮಾಡಿದವರಲ್ಲ ನೆಬ್ಬೂರು. ಹೆತ್ತ ತಾಯಿ ಮರಣಶಯ್ಯೆಯಲ್ಲಿರುವಾಗಲೇ ಮಂಡಳಿಯೊಂದಿಗೆ ಫ್ರಾನ್ಸ್ ಪ್ರವಾಸಕ್ಕೆ ಹೊರಟು ಕರ್ತವ್ಯ ಪ್ರಜ್ಞೆ ಮೆರೆದವರು. ಅಂತಹ ಭಾಗವತರನ್ನು ಮಾತನಾಡಿಸಿದರೆ, ಅವರ ಕಂಠ ಗದ್ಗದಿತವಾಗುತ್ತದೆ. ಈ ಸಿಂಹಾವಲೋಕನದಲ್ಲಿ ಶಂಭು-ಮಹಾಬಲ ಹೆಗಡೆಯವರಾದರೂ ಇರಬೇಕಿತ್ತು. ಶಿವಾನಂದನ ಪ್ರಯತ್ನಕ್ಕೆ ಫಲ ಸಿಗಲಿ. ಮಂಡಳಿಯ ವೈಭವದ ಮೆರಗು ಇಮ್ಮಡಿಸಲಿ ಎಂದು ಆಶಿಸಿ ಮೌನಕ್ಕೆ ಶರಣಾಗುತ್ತಾರೆ.
ಅಮೃತ ಸಂಭ್ರಮ
ತಿಂಗಳ ೨೫ ರಿಂದ ೨೭ ರ ವರೆಗೆ ಗುಣವಂತೆಯಲ್ಲಿ ಕೆರೆಮನೆ ಶಿವರಾಮ ಹೆಗಡೆ ಜನ್ಮ ಶತಮಾನೋತ್ಸವ, ಮಂಡಳಿಯ ಅಮೃತ ಮಹೋತ್ಸವ ಹಾಗೂ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ, ವಿಚಾರ ಸಂಕಿರಣ ನಡೆಯಲಿದೆ. ಶಂಭು ಹೆಗಡೆಯವರ ಆಳೆತ್ತರದ ಕಂಚಿನ ಪ್ರತಿಮೆಯೂ ಅನಾವರಣಗೊಳ್ಳಲಿದೆ. ಇಡೀ ಸಾಂಸ್ಕೃತಿಕ ವಲಯವನ್ನು ಬೆಸೆಯುವ ಮಹತ್ವದ ಉದ್ದೇಶದ ಈ ಕಾರ್ಯಕ್ರಮದ ರೂವಾರಿ ಕೆರೆಮನೆ ಮೇಳದ ಈಗಿನ ಮುಂದಾಳತ್ವ ವಹಿಸಿಕೊಂಡಿರುವ ಶಿವಾನಂದ ಹೆಗಡೆ.
(ವಿಜಯ ಕರ್ನಾಟಕ ಲವಲವಿಕೆಯಲ್ಲಿ ಈ ಲೇಖನ ಪ್ರಕಟವಾಗಿದೆ. ಚಿತ್ರ ಕ್ರಪೆ : ಶಿವಾನಂದ ಹೆಗಡೆ ಕೆರೆಮನೆ ಹಾಗೂ ಬಾಲು ಮಂದರ್ತಿ)

ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ರಾಜಹಿಂಸೆ

ಇತ್ತೀಚೆಗೆ ಊರಿಗೆ ಹೋಗುವಾಗ ರಾಜ್ಯ ಸಾರಿಗೆ ಇಲಾಖೆಯ ಬಸ್‌ನಲ್ಲಿ ಸೊಳ್ಳೆ, ತಿಗಣೆಗಳಿಂದ ಹಿಂಸೆಯಾಯಿತು. ಹಿಂದೆಯೂ ಈ ಅನುಭವ ಆಗಿತ್ತು. ಅನೇಕ ಸ್ನೇಹಿತರೂ ಈ ಬಗ್ಗೆ ನನ್ನ ಗಮನ ಸೆಳೆದಿದ್ದರು. ಹೀಗಾಗಿ ಊರಿನಿಂದ ವಾಪಸ್ ಬರುತ್ತಿದ್ದಂತೆ, ಈ ವಿಷಯವಿಟ್ಟುಕೊಂಡು, ನಮ್ಮ ಪತ್ರಿಕೆಗಾಗಿ ವಿಶೇಷ ವರದಿ ಬರೆದೆ. ಅದು ಉತ್ತಮ ಚಿತ್ರದೊಂದಿಗೆ (ಕಾರ್ಟೂನ್) ನವೆಂಬರ್ ೩೦ ರಂದು ಪ್ರಕಟವಾಯಿತು. ಬಳಿಕ ಸಾರಿಗೆ ಇಲಾಖೆ, ತಾನು ತಿಗಣೆ ನಿವಾರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿಯೂ ಪ್ರಕಟಣೆ ಕಳುಹಿಸಿತ್ತು. ವೈಯಕ್ತಿಕವಾಗಿ ನನಗೂ ಈ ವರದಿಯ ಬರವಣಿಗೆ ಇಷ್ಟವಾಗಿದೆ. ಹೀಗಾಗಿ ಪತ್ರಿಕೆಯಲ್ಲಿ ಬಂದ ವರದಿಯ ಯಥಾವತ್ತನ್ನು ಬ್ಲಾಗ್‌ಗೆ ಹಾಕಿದ್ದೇನೆ. ನಿಮಗೂ ಇಷ್ಟವಾದರೆ ಒಂದು ಪ್ರತಿಕ್ರಿಯೆ ಹಾಕಿ.

ಕೊಂಡದಕುಳಿ ಅವಳಿ, ಶತಮಾನ ಸಂಭ್ರಮದಲ್ಲಿ

ಭಾನುತನುಜ ಭಳಿರೇ...’ ಎಂದು ಮಟ್ಟೆ ತಾಳದ ಗತ್ತಿನಲ್ಲಿ ಮಾವಿನ ಟೊಂಗೆ ಝಳಪಿಸುತ್ತ ಆ ವಾಲಿ ಬಂದರೆ ರಂಗಸ್ಥಳಕ್ಕೆ ಒಂದು ಕ್ಷಣ ನಡುಕ. ಈ ವೇಷಧಾರಿ, ಎದುರು ಪಾತ್ರಧಾರಿಯ ಅರ್ಧ ಶಕ್ತಿಯನ್ನೂ ಎಳೆದುಕೊಂಡು ಬಿಡುತ್ತಿದ್ದ. ಈ ವಾಲಿಗೆ ಸುಗ್ರೀವನಾಗಿ ಸಮದಂಡಿಯಾಗಿ ನಿಲ್ಲಬಲ್ಲವನು ಒಬ್ಬನೇ ಇದ್ದ - ಅವರ ಅವಳಿ ಸಹೋದರ.

ಹಾಗೆ ವಾಲಿ - ಸುಗ್ರೀವರಾಗಿ ಪ್ರಸಿದ್ಧರಾದವರು ರಾಮ ಹೆಗಡೆ ಕೊಂಡದಕುಳಿ ಮತ್ತು ಲಕ್ಷ್ಮಣ ಹೆಗಡೆ ಕೊಂಡದಕುಳಿ. ಯಕ್ಷಗಾನದ ಏಕೈಕ ‘ಅವಳಿ ಜೋಡಿ’ಯಾಗಿದ್ದ ಈ ಸಹೋದರರು ರಂಗದ ದಂತಕತೆ ಕೆರೆಮನೆ ಶಿವರಾಮ ಹೆಗಡೆ ಸಮಕಾಲೀನರು.

ಹಿಂದಿನ ತಲೆಮಾರಿನವರು ರಾಮ ಹೆಗಡೆ ಎಂದಾಗ ವಾಲಿಯ ಪಾತ್ರದ ಬಗ್ಗೆ ನೆನಪಿನ ಚೀಲ ಬಿಚ್ಚಿಡುತ್ತಾರೆ. ಯಾವಾಗಲೂ ಸುಗ್ರೀವನಾಗಿ ಜತೆಗಿರುತ್ತಿದ್ದವರು ತಮ್ಮ ಲಕ್ಷ್ಮಣ. ಒಮ್ಮೆ ಬೇರೊಬ್ಬ ಕಲಾವಿದ ಸುಗ್ರೀವನ ಪಾತ್ರ ಮಾಡಿ, ರಾಮ ಹೆಗಡೆ ಪ್ರವೇಶವಾಗುತ್ತಿದ್ದಂತೆ ಹೆದರಿ ಎಚ್ಚರ ತಪ್ಪಿ ಬಿದ್ದಿದ್ದರಂತೆ. ಆಟವೂ ನಿಂತು ಹೋಯಿತಂತೆ. ಲಕ್ಷ್ಮಣ ಹೆಗಡೆಯವರ ಹನುಮಂತನ ಪಾತ್ರಕ್ಕೆ ಒಳ್ಳೆಯ ಹೆಸರಿತ್ತು. ಈ ಜೋಡಿಯ ಭರತ-ಧರ್ಮಾಂಗದ, ಭೀಷ್ಮ-ಪರಶುರಾಮ, ಬಲಿ-ವಾಮನ, ರಾವಣ-ಕಾರ್ತವೀರ್ಯನ ಪಾತ್ರಗಳೂ ಜನಪ್ರಿಯವಾಗಿದ್ದವು.

ಯಕ್ಷಗಾನಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಕೆರೆಮನೆ ಶಿವರಾಮ ಹೆಗಡೆ ಆ ಕಾಲದಲ್ಲೇ ಸೀಮೋಲ್ಲಂಘನಗೈದ ಶ್ರೇಷ್ಠ ನಟ. ಶಿವರಾಮ ಹೆಗಡೆ ಅವರಂತೆ ಕೊಂಡದಕುಳಿ ಸಹೋದರರೂ ಸ್ವಂತ ಮೇಳ ಕಟ್ಟಿದ್ದರು. ಅದರ ವ್ಯಾಪ್ತಿ ಉತ್ತರ ಕನ್ನಡಕ್ಕೆ ಸೀಮಿತವಾಗಿತ್ತು. ಪ್ರಾಯಶಃ ಇದೇ ಕಾರಣದಿಂದ ಪ್ರಥಮ ದರ್ಜೆಯ ಕಲಾವಿದರಾಗಿದ್ದ ಕೊಂಡದಕುಳಿಯವರಿಗೆ ಹೆಚ್ಚಿನ ಅವಕಾಶ ದೊರಕಲಿಲ್ಲ. ಶೈಲಿಯ ದೃಷ್ಟಿಯಿಂದ ನೋಡಿದರೆ ಇವರದ್ದು ಅಖಂಡವಾಗಿ ಮುಂದುವರಿದಿಲ್ಲ. ರಾಮ-ಲಕ್ಷ್ಮಣರ ಮಕ್ಕಳು ರಂಗಕ್ಕೆ ಬರಲಿಲ್ಲ. ಮೊಮ್ಮಕ್ಕಳ ಕಾಲಕ್ಕೆ ಇದು ಮತ್ತೆ ಚಲನಶೀಲತೆ ಕಂಡುಕೊಂಡಿದೆ.

ಹೀಗಾಗಿ ರಾಮ-ಲಕ್ಷ್ಮಣರಿಂದ ಬಂದ ಶೈಲಿಯನ್ನು ಸಮಗ್ರವಾಗಿ ಅವಲೋಕಿಸಲು ಸಾಧ್ಯವಿಲ್ಲ. ಅವರು ರಂಗದಲ್ಲಿದ್ದ ಸಂದರ್ಭದ ಯಾವ ಡಾಕ್ಯುಮೆಂಟರಿಯೂ ಲಭ್ಯವಿಲ್ಲ. ವಿಭಿನ್ನ ವೇಷಗಳ ಛಾಯಾಚಿತ್ರಗಳೂ ಇಲ್ಲ. ಆದರೆ ಕೊಂಡದಕುಳಿ ಅವಳಿ ಸಹೋದರರು ಗತ್ತು, ಗಾಂಭೀರ್ಯದ ಪಾತ್ರಗಳಿಗೆ ಜೀವ ತುಂಬಿದ್ದರು. ವೈಯಕ್ತಿಕ ಬದುಕಿನಲ್ಲೂ ಆದರ್ಶದ ಪ್ರತಿರೂಪವಾಗಿದ್ದ ಪ್ರಜ್ಞಾವಂತ ಕಲಾವಿದರಾಗಿದ್ದರು. ರಂಗದ ಗುಣಾತ್ಮಕ ಬೆಳವಣಿಗೆಗೆ ಸಹಕಾರಿಯಾದರೆಂದು ಮುಕ್ತ ಮನಸ್ಸಿನಿಂದ ಹೇಳಬಹುದು.

ರಾಮ ಹೆಗಡೆ ಮೊಮ್ಮಗ, ರಾಮಚಂದ್ರ ಹೆಗಡೆ ಕೊಂಡದಕುಳಿ ಯಕ್ಷಗಾನದಲ್ಲಿ ಯಾವ ಪಾತ್ರವನ್ನೂ ಮಾಡಬಲ್ಲ ಉತ್ಕೃಷ್ಟ ಕಲಾವಿದ. ಲಕ್ಷ್ಮಣ ಹೆಗಡೆ ಮೊಮ್ಮಕ್ಕಳೂ ಹವ್ಯಾಸಿ ವೇಷಧಾರಿ ಗಳಾಗಿ, ತಾಳಮದ್ದಲೆಯ ಅರ್ಥಧಾರಿಗಳಾಗಿ ಯಶ ಕಾಣುತ್ತಿದ್ದಾರೆ. ಆಧುನಿಕ ಸೌಕರ್ಯದ ಗಾಳಿಯೂ ಸೋಂಕದ ಕಾಲದಲ್ಲಿ ಯಕ್ಷಗಾನಕ್ಕಾಗಿ ಜೀವ ತೇಯ್ದ ಅಜ್ಜಂದಿರ ಶ್ರಮ ಮೊಮ್ಮಕ್ಕಳ ಮೂಲಕ ಸಾರ್ಥಕತೆಯೆಡೆಗೆ ಸಾಗುತ್ತಿದೆ.

ಶತಮಾನ ಸಂಭ್ರಮ

ದಿ. ರಾಮ-ಲಕ್ಷ್ಮಣ ಹೆಗಡೆ ಕೊಂಡದಕುಳಿ ಸಹೋದರರ ಜನ್ಮ ಶತಮಾನೋತ್ಸವ ಸಮಾರಂಭವು ಈ ತಿಂಗಳ ೫ ರಂದು ಶನಿವಾರ, ಉಡುಪಿ ರಾಜಾಂಗಣದಲ್ಲಿ ನಡೆಯಲಿದೆ. ರಾಮಚಂದ್ರ ಹೆಗಡೆ ನೇತೃತ್ವದ ಪೂರ್ಣಚಂದ್ರ ಮಂಡಳಿಯ ದಶಮಾನ ಸಂಭ್ರಮವೂ ಇದರೊಂದಿಗೆ ಇದೆ. ಅಜ್ಜಂದಿರ ನೆನಪಿನ ಸ್ಮರಣ ಸಂಚಿಕೆಯೂ ಸಾಂಕೇತಿಕವಾಗಿ ಬಿಡುಗಡೆಯಾಗಲಿದೆ. ಮಧ್ಯಾಹ್ನ ೩ ಕ್ಕೆ ಕಾರ್ಯಕ್ರಮ ಆರಂಭ.
(ವಿಕ ಲವಲವಿಕೆಯಲ್ಲಿ ಪ್ರಕಟವಾದ ಲೇಖನ)

ಹಡಗಿನ ಬಾಗಿಲಿನ ಸ್ವಾಭಿಮಾನಿ ಕಲಾವಿದ

ಕಂದ್ದನ್ನು ಕಂಡ ಹಾಗೆ ಖಡಕ್ ಆಗಿ ಹೇಳುವ ನಿಷ್ಠುರವಾದಿ. ಆತ್ಮಾಭಿಮಾನಕ್ಕೆ ಪೆಟ್ಟು ಕೊಡುವ ಮಾತನ್ನು ಯಾರೇ ಆಡಿದರೂ ಸಹಿಸುವ ಜಾಯಮಾನದವರಲ್ಲ. ಸಹೃದಯಿ. ಭಾವಜೀವಿ. ಎಲ್ಲಕ್ಕಿಂತ ಮುಖ್ಯವಾಗಿ ಕೊಟ್ಟ ಪಾತ್ರವನ್ನು ಅತ್ಯಂತ ಚೊಕ್ಕದಾಗಿ ನಿರ್ವಹಿಸುವ ಪ್ರಾಮಾಣಿಕ.

ಯಕ್ಷಗಾನ ಕಲಾವಿದ ಹಡಿನಬಾಳು ಶ್ರೀಪಾದ ಹೆಗಡೆ ಅವರ ವ್ಯಕ್ತಿತ್ವಕ್ಕೆ ಇದಕ್ಕಿಂತ ಹೊರತಾದ ಚೌಕಟ್ಟು ಕಟ್ಟಲು ಸಾಧ್ಯವಾಗುವುದಿಲ್ಲ. ಉತ್ತರ ಕನ್ನಡದ ಹೊನ್ನಾವರ ತಾಲೂಕಿನಲ್ಲಿ ಬ್ರಿಟೀಷರ ಕಾಲದಲ್ಲಿ ‘ಹಡಗಿನ ಬಾಗಿಲು’ ಎಂದಿದ್ದ ಊರು ವ್ಯತ್ಯಸ್ಥಗೊಂಡು ಹಡಿನಬಾಳು ಆಗಿದೆ. ಈ ಕಡಲ ಕಿನಾರೆಯಿಂದ ಬಂದಿರುವ ಶ್ರೀಪಾದ ಹೆಗಡೆ ಅವರದ್ದು ಯಕ್ಷಗಾನದಲ್ಲಿ ಅಲೆ ಎಬ್ಬಿಸಿದ ಜನಪ್ರಿಯ ಹೆಸರಲ್ಲ. ಆದರೆ, ಅವರು ‘ಜನ ಪ್ರೀತಿ’ ಗಳಿಸಿದ ಕಲಾವಿದ.

ರಂಗಸ್ಥಳದಲ್ಲಿ ಸ್ವರ್ಣ ವರ್ಣ ಲೇಪಿತ ವೇಷಭೂಷಣದಿಂದ ಶೋಭಿಸುವ ಶ್ರೀಪಾದ ಹೆಗಡೆ, ನಿಜ ಜೀವನದಲ್ಲಿ ಬಡತನದ ಬೇಗೆಯಲ್ಲಿ ಬೆಂದಿದ್ದಾರೆ. ಅದನ್ನು ಎಲ್ಲಿಯೂ ಹೇಳಿಕೊಂಡವರೂ ಅಲ್ಲ. ಬದುಕು ಸಾಗಿಸಲು ಯಕ್ಷಗಾನದೊಟ್ಟಿಗೆ ಹೊಲಿಗೆ, ವೀಳ್ಯದ ಎಲೆ ವ್ಯಾಪಾರ, ಕೊಡೆ ರಿಪೇರಿ, ಗಣಪತಿ ಮೂರ್ತಿ ಮಾಡುವ ವೃತ್ತಿಯನ್ನೂ ಅಪ್ಪಿಕೊಂಡಿದ್ದಾರೆ.

ಕಲಾವಿದರಾಗಿ ಶ್ರೀಪಾದ ಹೆಗಡೆ ಗಟ್ಟಿ ಪ್ರತಿಭೆ. ಕೆರೆಮನೆ ಮಹಾಬಲ ಹೆಗಡೆ ಅವರಂತಹ ಮೇರು ನಟರಲ್ಲಿ ವಿದ್ಯಾರ್ಥಿಯಾಗಿ ಅಭ್ಯಾಸ ಮಾಡಿದ್ದಾರೆ. ಮಹಾಬಲ ಹೆಗಡೆ ಪ್ರಭಾವವು ಪ್ರತ್ಯಕ್ಷ, ಪರೋಕ್ಷವಾಗಿ ಅನೇಕ ಕಲಾವಿದರ ಮೇಲೆ ಆಗಿದೆ. ಆದರೆ, ಈಗಲೂ ಮಹಾಬಲರನ್ನು ಮಾತಾಡಿಸಿದರೆ, ‘ಹಡಿನಬಾಳು ಶ್ರೀಪಾದ ನನ್ನ ವಿದ್ಯಾರ್ಥಿ’ ಎಂದು ಮೆಚ್ಚುಗೆಯ ಪ್ರಶಸ್ತಿ ಕೊಡುತ್ತಾರೆ. ಇದು ಹಡಿನಬಾಳರಿಗೆ ಸಲ್ಲುವ ದೊಡ್ಡ ಗೌರವವೇ ಸರಿ. ಮುನ್ನುಗ್ಗುವ, ಓಲೈಸುವ ಸ್ವಭಾವಕ್ಕೆ ಕಟ್ಟು ಬೀಳದಿರುವುದರಿಂದ ಅದೆಷ್ಟೋ ಅವಕಾಶದಿಂದ ವಂಚಿತರಾಗಿದ್ದೂ ನಿಜ.

ಅಜಾನುಬಾಹು ಹಡಿನಬಾಳು ಧೈತ್ಯ, ದಾನವ ವೇಷಗಳಿಗೆ ಹೇಳಿ ಮಾಡಿಸಿದಂತಹ ಕಲಾವಿದ. ಸಾತ್ವಿಕ ಪಾತ್ರಗಳನ್ನೂ ಸಮರ್ಥವಾಗಿಯೇ ತೂಗಿಸುತ್ತಾರೆ. ಕೃಷ್ಣ ಸಂಧಾನದ ಶ್ರೀಪಾದರ ಕೌರವ, ಸುಭದ್ರಾ ಕಲ್ಯಾಣದ ಬಲರಾಮ, ದಮಯಂತಿ ಪುನಃಸ್ವಯಂವರದ ಋತುಪರ್ಣನಂತಹ ಪಾತ್ರಗಳು ಬಹಾಬಲರು ಹಾಕಿ ಕೊಟ್ಟ ನಡೆಯಲ್ಲೇ ಇರುತ್ತವೆ. ಗದಾಯುದ್ಧದ ಭೀಮ, ಕಾರ್ತವೀರ್ಯಾರ್ಜುನದ ರಾವಣ, ಕೀಚಕವಧೆಯ ವಲಲ, ಕರ್ಣಪರ್ವದ ಶಲ್ಯ, ಶರಸೇತು ಬಂಧನದ ಅರ್ಜುನ, ವಾಲಿವಧೆಯ ವಾಲಿಯ ಪಾತ್ರಗಳು ಕಲಾಸಕ್ತರ ಚಿತ್ತಭಿತ್ತಿಯಲ್ಲಿ ಅಚ್ಚೊತ್ತಿವೆ. ಹನುಮಂತ, ಅಶ್ವತ್ಥಾಮ, ರಕ್ತಜಂಘ ಸೇರಿದಂತೆ ಹಲವು ಪಾತ್ರಗಳೂ ಇವರದ್ದೇ ಆದ ರೀತಿಯಲ್ಲಿ ಇವೆ.

ಬಣ್ಣಗಾರಿಕೆ, ಮುಖವರ್ಣಿಕೆಯಲ್ಲೂ ಹಡಿನಬಾಳು ವಿಶೇಷ ಪ್ರಾವೀಣ್ಯ ಹೊಂದಿದ್ದಾರೆ. ಅರ್ಥಗಾರಿಕೆಯಲ್ಲಿ ವೈಚಾರಿಕತೆ ಇದೆ. ಶರಾವತಿಯ ಮತ್ತೊಂದು ದಡದ ಮಾಳ್ಕೋಡು, ಶ್ರೀಪಾದರ ಮೂಲ ಊರು. ಯಕ್ಷಗಾನದ ಮುಕ್ತ ವಿಶ್ವವಿದ್ಯಾಲಯದಂತಿರುವ ಗುಂಡಬಾಳದಲ್ಲೇ ಪ್ರಥಮವಾಗಿ ಗೆಜ್ಜೆ ಕಟ್ಟಿದ್ದಾರೆ. ಮೊದಲ ವೇಷ ಹಾಸ್ಯಗಾರನದ್ದು. ಆಗ ಮಹಾಬಲ ಹೆಗಡೆಯವರೇ ‘ಹಾಸ್ಯ ಮಾಡಿ ಆಯುಷ್ಯ ಹಾಳು ಮಾಡಿಕೊಳ್ಳಬೇಡ’ ಎಂದು ಗದರಿಸಿ ಮನೆಗೆ ಕರೆದು ಹೆಜ್ಜೆ ಕಲಿಸಿದರಂತೆ.

ಹಡಿನಬಾಳರ ಮೇಲೆ ವಿಶ್ವಾಸ ಮೂಡಿದ ದಿನ ಮಹಾಬಲ ಹೆಗಡೆ, ‘ನಾನು ಹೇಳಿದರೆ ನಿನ್ನನ್ನು ಯಾವ ಮೇಳದವರೂ ಸೇರಿಸಿಕೊಳ್ಳುತ್ತಾರೆ. ಹೊರಟು ಬಿಡು’ ಎಂದಾಗ ‘ಹಾಗೆಲ್ಲ ಮೇಳಕ್ಕೆ ಹೋಗಿ ನಿಮ್ಮ ಹೆಸರು ಕೆಡಿಸಲಾರೆ’ನೆಂದು ನಯವಾಗಿ ಒಲ್ಲೆ ಎಂದಿದ್ದನ್ನು ಶ್ರೀಪಾದ ಹೆಗಡೆ ನೆನಪು ಮಾಡಿಕೊಳ್ಳುತ್ತಾರೆ. ನಂತರ ಸ್ವಂತ ಸಾಮರ್ಥ್ಯದಿಂದಲೇ ಬಡಗುತಿಟ್ಟಿನ ಪ್ರಮುಖ ಮೇಳಗಳಲ್ಲಿ ವೇಷ ಮಾಡಿದ್ದಾರೆ. ಈ ವರ್ಷ ಪೆರ್ಡೂರು ಮೇಳಕ್ಕೆ ಸೇರ್ಪಡೆಗೊಂಡು ಪ್ರಧಾನ ವೇಷಧಾರಿಯಾಗಿ ಬಡ್ತಿ ಪಡೆದಿದ್ದಾರೆ. ಅದು ಅವರಿಗೆ ಯಶಸ್ಸು ತರಲೆಂದು ಅಪೇಕ್ಷಿಸೋಣ.
(೨೦೦೯ ರ ಜುಲೈ ೫ ರಂದು ಎಡಿಎ ರಂಗಮಂದಿರದಲ್ಲಿ ಶ್ರೀಪಾದ ಹೆಗಡೆ ಅಭಿನಂದನೆ ಸಂದರ್ಭದಲ್ಲಿ ವಿಕದಲ್ಲಿ ಪ್ರಕಟಗೊಂಡ ಲೇಖನ)

ಮಹಾಬಲರಿಗೆ ಅಕ್ಷರಾಂಜಲಿ...


ಭೈರವೇಶ್ವರ ಶಿಖರದ ಮತ್ತೊಂದು ಮುಕುಟವೂ ಕಳಚಿತು

ಭೈರವೇಶ್ವರ ಶಿಖರದ ಮತ್ತೊಂದು ಮುಕುಟ ಕಳಚಿ ಬಿದ್ದಿದೆ. ಕೆರೆಮನೆ ಮಹಾಬಲ ಹೆಗಡೆ ಭೌತಿಕ ಪ್ರಪಂಚ ತೊರೆಯುವ ಮೂಲಕ ಯಕ್ಷಲೋಕದ ತುರಾಯಿಯೇ ಜಾರಿ ಹೋಗಿದೆ.

ಯಾಣದ ಭೈರವೇಶ್ವರ ಶಿಖರದಂತೆ ಯಕ್ಷಗಾನದಲ್ಲಿ ಇದ್ದವರು ಕೆರೆಮನೆ ಸಹೋದರರಾದ ಮಹಾಬಲ ಹೆಗಡೆ, ಶಂಭು ಹೆಗಡೆ. ಇಡಗುಂಜಿಯ ವಿನಾಯಕ ದೇವರ ಸನ್ನಿಯಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸುತ್ತಿದ್ದಾಗಲೇ ಶಂಭು ಹೆಗಡೆ, ಈ ಲೋಕದ ಯಾತ್ರೆ ಮುಗಿಸಿದ್ದರು. ಈ ದುಃಖ ಮಾಸುವ ಮುನ್ನವೇ ಮಹಾಬಲರೂ ಹೊರಟು ಹೋಗಿರುವುದು ದೊಡ್ಡ ಆಘಾತ.

ಯಕ್ಷರಂಗ ಒಪ್ಪಿ ಅಭಿಮಾನದಿಂದ ಬೀಗಿದಂತೆ ಮಹಾಬಲ ಹೆಗಡೆ ನಿಜಾರ್ಥದಲ್ಲಿ ‘ಯಕ್ಷಗಾನದ ಮಹಾಬಲ’ರೇ ಆಗಿದ್ದರು. ಅದು ಅವರ ಚಿಕ್ಕಪ್ಪ, ಸರ್ವೋತ್ಕೃಷ್ಟ ನಟ ದಿ. ಶಿವರಾಮ ಹೆಗಡೆ ಕಾಲದಲ್ಲೇ ಸಂದ ಬಿರುದಾಗಿತ್ತು. ಮುಮ್ಮೇಳ, ಹಿಮ್ಮೇಳಗಳೆರಡನ್ನೂ ಅರಿತು ರಾಗ, ತಾಳಗಳ ಬಗ್ಗೆ ಖಚಿತ ಜ್ಞಾನವಿದ್ದ ಏಕೈಕ ಕಲಾವಿದ ಮಹಾಬಲ ಹೆಗಡೆ. ಶ್ರುತಿಬದ್ಧವಾಗಿ ಹಾಡಿಕೊಂಡೇ ಅಭಿನಯಿಸಿ ಅರ್ಥ ಹೇಳುವುದು ಅವರಿಗಷ್ಟೆ ಸಿದ್ಧಿಸಿತ್ತು. ಹಿಂದೂಸ್ಥಾನಿಯ ಸಂಪರ್ಕದಿಂದಾಗಿ ಭಾಗವತಿಕೆಯಲ್ಲಿ ರಾಗದ ಖಚಿತತೆ ಬಯಸುತ್ತಿದ್ದರು. ಅದಕ್ಕಾಗಿಯೇ ಅವರಿಗೆ ಎಂತಹ ಭಾಗವತ ಹಾಡಿದರೂ ಸರಿ ಬರುತ್ತಿರಲಿಲ್ಲ. ಕಡು ನಿಷ್ಠುರವಾಗಿಯೇ ನಡೆದುಕೊಳ್ಳುತ್ತಿದ್ದರು.

ಎಳವೆಯಲ್ಲಿ ಮಹಾಬಲ ಕಿಲಾಡಿ ಪೋರ. ಆಲೆಮನೆಯ ಬೆಲ್ಲದ ಕೊಪ್ಪರಿಗೆಯಲ್ಲಿ ಉಚ್ಚೆ ಹೊಯ್ದ ತುಂಟ. ಈ ಮಾಣಿ ಫಟಿಂಗ ಆಗುವುದು ಬೇಡವೆಂದು ಶಿವರಾಮ ಹೆಗಡೆ ರಂಗಕ್ಕೆ ತಂದರಂತೆ. ನಂತರ ಚಿಕ್ಕಪ್ಪನ ನೆರಳಿನಲ್ಲೇ ಬೆಳೆದ ಮಹಾಬಲ, ಸ್ವಂತ ಪರಿಶ್ರಮದಿಂದಲೇ ಎತ್ತರಕ್ಕೆ ಏರಿದರು. ಶಾಲೆ ವಿದ್ಯಾಭ್ಯಾಸ ಕಡಿಮೆಯಾದರೂ ರಂಗದ ಕುರಿತಾದ ಅಧ್ಯಯನದಿಂದ ವೈಚಾರಿಕ ಸಂಪನ್ನರಾದರು. ಇದಕ್ಕೆ ಅವರ ಪಾತ್ರಗಳು ಆಡುತ್ತಿದ್ದ ಮಾತುಗಳೇ (ಅರ್ಥಗಾರಿಕೆ) ಸಾಕ್ಷಿ. ರಂಗಕ್ಕೆ ಒಗ್ಗುವ ಹಾಗೆ ಪ್ರಾದೇಶಿಕ ಪದಗಳ (ಗ್ರಾಮೀಣ/ ಗಾಂವಟಿ ಶಬ್ದ) ಬಳಕೆ ಮಹಾಬಲ ಹೆಗಡೆ ಶೈಲಿ ವೈಶಿಷ್ಟ್ಯ. ಇದನ್ನೇ ಇನ್ನೊಬ್ಬರು ಹೇಳಿದರೆ ಕೇಳಲು ಹಿತವಲ್ಲ.

ಉದಾಹರಣೆಗೆ ಕರ್ಣಪರ್ವದ ಶಲ್ಯನಾಗಿ ಕೃಷ್ಣನೊಂದಿಗೆ ಸಂಭಾಷಿಸುವಾಗ, ‘ಮರ ಹತ್ತುವವರು ಮೀನು ಹಿಡಿಯಬಾರದು. ಮೀನು ಹಿಡಿಯುವವರು ಮರ ಹತ್ತಬಾರದು’ ಎಂದು ಮಹಾಬಲರು ಹೇಳುತ್ತಿದ್ದರು. ಇದು ವೃತ್ತಿ ಮತ್ತು ಪ್ರವೃತ್ತಿಯ ವಿಶ್ಲೇಷಣೆ ಮಾಡುತ್ತ ತಿಳಿಹಾಸ್ಯದಿಂದ ಅವರು ಆಡಿದರೇ ಚೆಂದ. ಗನಗಾಂಪ, ಶುದ್ಧ ಟೊಣಪನಂತಹ ಪದಗಳನ್ನೂ ಬಳಸುತ್ತಿದ್ದರು. ಪರ್ವದ ಭೀಷ್ಮನಾಗಿ ಸಿಟ್ಟಿಗೆದ್ದ ಕೃಷ್ಣನನ್ನು ತಣಿಸುವಾಗ ‘ಸ್ವಲ್ಪ ಏರುಪಾಕ ಆಯಿತೋ ಹ್ಯಾಗೆ’ ಎನ್ನುತ್ತ ಛೇಡಿಸುತ್ತಿದ್ದರು. ಅಂದರೆ ಇಂಥ ಅನೇಕ ಪದಪುಂಜವನ್ನು ಯಕ್ಷಗಾನೀಯವಾಗಿ ಕಟ್ಟಿ ಕೊಡುವುದು ಅವರಿಗೆ ಮಾತ್ರ ಸಾಧ್ಯವಿತ್ತು. ಹೊಂಬಾಣ ದೀವಿಗೆ ಹಿಡಿದು ಅರ್ಧರಾತ್ರಿಯಲ್ಲಿ ತನ್ನ ಆಲಯಕ್ಕೆ ಬಂದ ಸುಯೋಧನನ್ನು ಕಂಡ ಮಹಾಬಲರ ಭೀಷ್ಮ, ಯಾರು ಎಂದು ಪ್ರಶ್ನಿಸಿ ‘ಮೇದಿನಿಪ ಬಾ ಎನುತ ...’ ಪದ್ಯದ ಎತ್ತುಗಡೆಗೆ ತೊಡಗಿದಾಗ ಎದೆ ಝಲ್ಲೆನ್ನುತ್ತಿತ್ತು. ವಿಜಯದ ಭೀಷ್ಮನಾಗಿ ‘ಸುತ್ತಲು ನೋಡುತ ಗಂಗಾ ತರಳನು’ ಎಂದು ದಿಟ್ಟಿಸಿದರೆ ಚಂಡ ಮಾರುತವೇ ಅಪ್ಪಳಿಸಿದಂತಾಗುತ್ತಿತ್ತು. ಸಂಧಾನದ ಕೌರವ, ಸುಭದ್ರಾ ಕಲ್ಯಾಣದ ಬಲರಾಮ, ರಕ್ತರಾತ್ರಿಯ ಅಶ್ವತ್ಥಾಮನಂತಹ ಮಹಾಬಲರ ಪಾತ್ರಗಳು ಮತ್ತೊಬ್ಬರಿಗೆ ಒಲಿದಿಲ್ಲ. ಅವರಿಂದ ಕಲಿತವರು ಅಷ್ಟನ್ನೇ ಮಾಡಿ ತೋರಿಸುವುದಕ್ಕೆ ಸೀಮಿತರಾಗಿದ್ದಾರೆ. ಹೊಸ ಮಾದರಿ ಸೃಷ್ಟಿ ಆಗಿಲ್ಲ.

ಮಹಾಬಲ ಹೆಗಡೆ ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದವರು. ಆದರೆ, ಸಂಜೆ ವೇಳೆ ಮನೆಯಲ್ಲಿ ಕುಳಿತು ಎಲೆಕ್ಟ್ರಾನಿಕ್ ಶ್ರುತಿ ಪೆಟ್ಟಿಗೆ ಇಟ್ಟುಕೊಂಡು ಹಾಡುವುದನ್ನು ಬಿಟ್ಟಿರಲಿಲ್ಲ. ಆಸಕ್ತರು ಹೋಗಿ ಮಾತಾಡಿಸಿದರೆ, ಕೊಂಚ ಹೊತ್ತಿನಲ್ಲಿ ಹಳೆಯ ನೆನಪಿಗೆ ಜಾರಿ ಲಹರಿಗೆ ಬರುತ್ತಿದ್ದರು. ತಮ್ಮಲ್ಲಿರುವ ಅನೇಕ ಸಂಗತಿಯನ್ನು ಮುಂದಿನ ತಲೆಮಾರಿಗೆ ಕೊಡಲು ಆಗಲಿಲ್ಲವೆಂಬ ಕೊರಗು ಅವರನ್ನು ಕಾಡುತ್ತಿತ್ತು. ಮಹಾಬಲ ಹೆಗಡೆ, ಶಂಭು ಹೆಗಡೆ ಜೋಡಿ ಯಕ್ಷಗಾನದಲ್ಲಿ ದಾಖಲಾದ ಅಮೃತ ಗಳಿಗೆ. ಶಂಭು ಹೆಗಡೆ ನಿಧರಾದಾಗಲೂ ತಮ್ಮ ಪುತ್ರ ರಾಮ ಹೆಗಡೆ ಮನೆ, ಅಳಿಕೆಯಲ್ಲಿ ಮಹಾಬಲರು ಇದ್ದರು. ತಮಗಿಂತ ಸುಮಾರು ೧೨ ವರ್ಷ ಕಿರಿಯ ಸಹೋದರ ಇಲ್ಲ ಎನ್ನುವುದನ್ನು ಅವರು ಒಪ್ಪಿಕೊಂಡೇ ಇರಲಿಲ್ಲ. ಈಗ ಅವರೂ ಕಾಲನ ಕರೆಯಾಲಿಸಿ ತೆರಳುವುದರೊಂದಿಗೆ ಶುದ್ಧ ಸೊಗಡಿನ, ಶಿಷ್ಟ ಸೊಬಗಿನ ಯಕ್ಷಗಾನದ ಅಭಿರುಚಿ ಮೂಡಿಸಿದ ಜೋಡಿ ಕಲಾ ಕ್ಷಿತಿಜದಿಂದ ಮರೆಯಾಗಿದೆ.

ಶಂಭು ಹೆಗಡೆ ತೀರಿಕೊಂಡಿದ್ದು ಇಡಗುಂಜಿ ತೇರಿನ ದಿನ ರಥ ಸಪ್ತಮಿಯಂದು. ಮಹಾಬಲ ಹೆಗಡೆ ಏಕಾದಶಿಯ ಶುಭ ಸಂದರ್ಭದಂದು ವೈಕುಂಠದತ್ತ ಪ್ರಯಾಣ ಬೆಳೆಸಿದ್ದಾರೆ. ಇದೂ ಒಂದು ಸುಯೋಗವೆಂದೇ ಭಾವಿಸೋಣ. ಕಲೆಯ ಉನ್ನತ ಮೌಲ್ಯದ ಪ್ರತಿಪಾದಕರಾದ ‘ಮಹಾಬಲ’ರಿಗೆ ಸದ್ಗತಿ ದೊರಯಲೆಂದು ನೆನೆಸುತ್ತ ಈ ಅಕ್ಷರಾಂಜಲಿ.
(ಮಹಾಬಲ ಹೆಗಡೆ ನಿಧನರಾದ ದಿನ ೨೯-೧೦-೨೦೦೯ ರಂದು ವಿಜಯ ಕರ್ನಾಟಕಕ್ಕಾಗಿ ಬರೆದಿದ್ದ ನುಡಿನಮನ)

Last Posts