ಎತ್ತಿದ ಕೈಯ ಕೂಸು, ಅದಕ್ಕೀಗ ರಜತಾರೋಹಣ

‘ಯಾವ ಪಾತ್ರೆಯಲ್ಲಿ ಎಂತಹ ಎಣ್ಣೆ ಕುದಿಯುತ್ತಿದೆಯೆಂದು ಹೇಳಲಾಗದು. ಹಾಗೆಯೇ ಯಾರ ಅಂತರಂಗದಲ್ಲಿ ಅದಿನ್ನೆಂತಹ ಬೇಗುದಿ ಇದೆಯೆಂದೂ ಊಹಿಸಲಾಗದು’ ಇದು ರವೀಜಿ ಬೆಳೆಗೆರೆಯವರ ‘ಬಾಟಂ ಐಟಂ’ ಕಾಲಂ ಒಂದರಲ್ಲಿ ಬಂದ ವಿಚಾರ. ತಾತ್ಪರ್ಯ ಇಷ್ಟೇ. ಇನ್ನೊಬ್ಬರ ಬಗ್ಗೆ ಆಡಿಕೊಳ್ಳುವಾಗ, ಅಣಕಿಸುವಾಗ ತುಸು ಯೋಚಿಸುವುದು ಒಳಿತು. ಹೊರನೋಟಕ್ಕೆ ಚೆನ್ನಾಗಿ ಕಾಣುವವನನ್ನು ‘ಅವನಿಗೇನೋ ಪೊಗದಸ್ತಾಗಿದ್ದಾನೆ’ ಎನ್ನುವುದು ತಪ್ಪಾದೀತು. ಹೇಗೆ ಹೇಗೋ ಇರುವವನನ್ನು ಹಗುರವಾಗಿ ನಡೆಸಿಕೊಳ್ಳುವುದೂ ರಿಸ್ಕು.

ಯಕ್ಷಗಾನದ ಕಣ್ಣಿಮನೆ ಅವರನ್ನು ನೋಡಿದಾಗಲೆಲ್ಲ ಈ ಸಾಲುಗಳು ಸರಕ್ಕನೆ ಕೈಹಿಡಿದೆಳೆಯುತ್ತಿದ್ದವು. ಕಣ್ಣಿಮನೆ ಗಣಪತಿ ಭಟ್ ಓರ್ವ ಉತ್ತಮ ಕಲಾವಿದ ಎನ್ನುವುದಕ್ಕಿಂತ, ಕಣ್ಣಿ ಹಾಗಂತೆ, ಹೀಗಂತೆ ಎಂಬ ಅಂತೆಕಂತೆಗಳ ಸರೋವರವೇ ಅವರ ಕುರಿತು ಹುಟ್ಟಿಕೊಂಡಿವೆ. ಸಾಲಿಗ್ರಾಮ ಮೇಳದಲ್ಲಿ ಯಾರಾದರೂ ವೇಷ ಮಾಡಲಿಲ್ಲವೆಂದರೆ, ಅದು ಕಣ್ಣಿಯೇ ಇರಬೇಕು. ಅಂವ ಇವತ್ತು ಜಾಸ್ತಿ ಇಳಿಸಿರಬೇಕು ಎಂಬ ಸಮರ್ಥನೆ ಬೇರೆ. ಹೊನ್ನಾವರ ಬಸ್‌ಸ್ಟ್ಯಾಂಡ್‌ನಲ್ಲಿ ಯಾವನೋ ಒಬ್ಬ ತೂರಾಡುತ್ತಿದ್ದನಂತೆ ಅಂದರೆ, ಅದೂ ಕಣ್ಣಿಮಾಣಿಯೇ ಎಂಬಷ್ಟರ ಮಟ್ಟಿಗೆ ಕಣ್ಣಿಯ ಚಾರಿತ್ರ್ಯ ವಧೆಗೈಯ್ಯುವ ಕ್ರಿಯೆ ಯಕ್ಷಗಾನ ವಲಯದಲ್ಲಿ ಜೀವನದಿಯಂತೆ ಹರಿಯುತ್ತಿದೆ.

ಕಣ್ಣಿ ಬಗೆಗೆ ಹೀಗೆಲ್ಲ ಅಂದುಕೊಂಡಿದ್ದೇ ಸರ್ವಾಪರಾಧ. ಅವರೊಬ್ಬ ‘ಸುಬುಗ ಸುಬ್ರಾಯ’ ಎನ್ನಲು ಹೊರಟಿಲ್ಲ. ವೈಯಕ್ತಿಕ ಬದುಕಿನ ನೋವು ಅವರನ್ನು ಮನುಷ್ಯ ಸಹಜವಾದ ವ್ಯಸನಕ್ಕೆ ನೂಕಿದ್ದು ನಿಜ. ಅದರಿಂದ ಹೊರ ಬರುವ ಪ್ರಯತ್ನದಲ್ಲಿ ಸೋಲುತ್ತಿದ್ದುದೂ ಹೌದು. ನಾಲಿಗೆ ತುದಿಯಲ್ಲಿ ಕಣ್ಣಿಯ ‘ನಿಂದಾ ಸ್ತುತಿ’ ಅಂಟಿಸಿಕೊಂಡು ದಿಗ್ವಿಜಯಕ್ಕೆ ಹೊರಟವರು ಈ ನೆಲೆಯಲ್ಲಿ ಯೋಚಿಸಿಯೇ ಇರಲಿಲ್ಲವೆಂದು ಕಾಣುತ್ತದೆ.

ಅದಿರಲಿ, ಅಂಥವರ ದೃಷ್ಟಿಯಲ್ಲಿ ಹೀಗಿರುವ ಕಣ್ಣಿ ನಿಜಾರ್ಥದಲ್ಲಿ ಹೃದಯವಂತ. ಪಾಪದ ಪರದೇಶಿ. ಒಂದು ರೀತಿ ‘ಎತ್ತಿದ ಕೈಯ ಕೂಸು’ ಇದ್ದ ಹಾಗೆ. ಯಾರೊಂದಿಗೂ ರಂಪಾಟ, ಕಿರುಚಾಟವಿಲ್ಲ. ಎಲ್ಲರೊಂದಿಗೂ ನಗುತ್ತಲೇ ಮಾತಾಡುವ ಸ್ನೇಹಜೀವಿ. ಹಿಂದಿನಿಂದ ಬೈದುಕೊಂಡು ಹೋಗುವವರಲ್ಲೂ ವಿರೋಧ ಕಟ್ಟಿಕೊಂಡವರಲ್ಲ. ಅವನದ್ದು ಅದ್ಭುತ ಲಯ ಮಾರಾಯಾ..., ಎಂದು ಹೇಳಿ ಆಟದ ಟೆಂಟ್‌ನಿಂದ ಹೊರಬಿದ್ದ ಕೂಡಲೇ ಅಪಪ್ರಚಾರಕ್ಕೆ ತೊಡಗುವವರ
ಬಗ್ಗೆಯೂ ತಲೆ ಕೆಡಿಸಿಕೊಂಡವರಲ್ಲ.

ಪ್ರಾಯಶಃ ಇದೇ ಕಣ್ಣಿಯ ವ್ಯಕ್ತಿತ್ವದ ದೌರ್ಬಲ್ಯವಾಗಿತ್ತು ಎಂಬುದು ನನ್ನೆಣಿಕೆ. ರಂಗಕ್ಕೆ ಎಂದೂ ಅಪಚಾರವೆಸಗದ ಅವರು, ನಿಜ ಜೀವನವು ಪ್ರವಾಹದ ಅಲೆಯಲ್ಲಿ ತೊಯ್ದಾಡುತ್ತಿದ್ದರೂ ಅದನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲಿಲ್ಲ. ಹಿತೈಷಿಗಳು ಬಾಯಿ ಬಿಡಿಸುವ ಯತ್ನ ಮಾಡಿದರೂ ಮನಸ್ಸು ಬಿಚ್ಚಿ ಮಾತಾಡಲಿಲ್ಲ. ಕಡೆ ಕಡೆಗೆ ಅಂತಹವರಿಗೆ ದೂರದಿಂದಲೇ ಕರ ಜೋಡಿಸಿ ಜಾಗ ಖಾಲಿ ಮಾಡುತ್ತಿದ್ದುದೂ ಉಂಟು. ಹೀಗಾಗಿ ಕಣ್ಣಿಯನ್ನು ಬಹುವಾಗಿ ಪ್ರೀತಿಸಿ ಆದರಿಸುವವರೂ ಒಂದು ಹಂತದಲ್ಲಿ ಭರವಸೆ ಕಳೆದುಕೊಳ್ಳುವಂತಾಗಿತ್ತು.
ಹೊಸ ಅಧ್ಯಾಯ
ಆದರೆ
, ಎಲ್ಲದಕ್ಕೂ ಒಂದು ಕಾಲಘಟ್ಟ ಎಂಬುದು ಇರುತ್ತದೆ. ಬದಲಾವಣೆ ಗಾಳಿ ಎಲ್ಲಿಂದಲೋ ಬಂದು ಬರಸೆಳೆದು ಅಪ್ಪಿಕೊಂಡು ಬಿಡುತ್ತದೆ. ಕಣ್ಣಿಯ ಬದುಕಿನಲ್ಲೂ ಅಂಥದೊಂದು ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಾಗಿದೆ ಎನ್ನುವುದೇ ಈಗ ಖುಷಿ ಕೊಡುವ ಸಂಗತಿ.

ಈ ಸಾರ್ಥಕ ಕಾರ್ಯಕ್ಕೆ ಕೈಹಾಕಿದವರು ಕಣ್ಣಿಯವರ ಪರಮಾಪ್ತ ಹಿತೈಷಿ ಮನೋಜಕುಮಾರ ಭಟ್. ಜತೆಯಾಗಿ ನಿಂತವರು ಪ್ರಶಾಂತ ವರ್ಧನ, ಕಲಾವಿದರಾದ ಯಲಗುಪ್ಪ (ಕಣ್ಣಿಯ ಭಾವ), ರಮೇಶ ಭಂಡಾರಿ. ಇನ್ನೂ ಹಲವರು ಕೈಜೋಡಿಸಿದ್ದಾರೆ. ಕಣ್ಣಿಯನ್ನು ಮನೆಗೆ ಕರೆಸಿಕೊಂಡು ಅಂತರಾಳದಲ್ಲಿ ಹುದುಗಿ ಹೆಪ್ಪುಗಟ್ಟಿದ್ದ ಕಣ್ಣೀರನ್ನು ಬಸಿಯಗೊಡಲು ಔದಾರ್ಯ ತೋರಿದವರು ಮನೋಜ ಭಟ್. ಕಣ್ಣಿಯೇ ತಪ್ಪಿಸಿಕೊಂಡು ಹೋದರೂ ಅವರು ಬೆನ್ನು ಬಿದ್ದು ಸಾಂತ್ವನ ಹೇಳಿದ್ದಾರೆ. ಮೇಳದ ತಿರುಗಾಟದಲ್ಲಿ ಕಣ್ಣಿ ದೂರವಿದ್ದರೂ ತಮ್ಮ ಕಣ್ಗಾವಲಿನಿಂದ ಆಚೆ ಸರಿಯದಂತೆ ಕಾಳಜಿ ವಹಿಸಿದರು. ಅಷ್ಟೇ ಅಲ್ಲ, ವಾಸ್ತವವನ್ನು ಅರುಹಿ ಸಮಾಜದಲ್ಲಿ ಈ ಕಲಾವಿದನ ಬಗ್ಗೆ ಸದಭಿಪ್ರಾಯ ಮೂಡಿಸುವ ಹೊಣೆಯನ್ನೂ ಹೊತ್ತರು.

ಕಣ್ಣಿಗಾಗಿ ಇಷ್ಟೆಲ್ಲ ಶ್ರಮ ಹಾಕಿದ ಮನೋಜ ಭಟ್, ‘ಹದಗಾಲ’ವನ್ನು ನಿಶ್ಚಯಿಸಿ ಕಣ್ಣಿಮನೆ ಅಭಿನಂದನೆ ಕಾರ್ಯಕ್ರಮವನ್ನೂ ಸಂಘಟಿಸಿದರು. ‘ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ನಾಟ್ಯ ಮಯೂರ’ವು ಫೆಬ್ರವರಿ ೨೧ ರಂದು ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ನಡೆಯಿತು. ವೈಭವದಿಂದಲೇ ಜರುಗಿದ ಈ ಸಮಾರಂಭಕ್ಕಾಗಿ ಮನೋಜ ಭಟ್, ಮೂರ್‍ನಾಲ್ಕು ತಿಂಗಳಿಂದ ಪರಿಶ್ರಮ ಪಟ್ಟಿದ್ದಾರೆ. ಅವರದೇ ಸಂಯೋಜನೆ, ವ್ಯವಸ್ಥಾಪಕತ್ವದಲ್ಲಿ ಪ್ರದರ್ಶನಗೊಂಡ ‘ವಿಶ್ವಾಮಿತ್ರ ಮೇನಕೆ’, ‘ಅಭಿಮನ್ಯು ಕಾಳಗ’ ಆಖ್ಯಾನಗಳು ಯಶಸ್ವಿಯಾಗಿವೆ. ಕೊಂಡದಕುಳಿ, ಯಲಗುಪ್ಪ, ಥಂಡಿ, ತೋಟಿ, ಭಂಡಾರಿ, ಶಂಕರ ಭಾಗ್ವತ್, ಕೊಳಗಿ, ಮಂದರ್ತಿ (ಚೆಂಡೆ) ಅವರಂಥವರು ಕಣ್ಣಿಯ ರಜತಾರೋಹಣಕ್ಕೆ ಒದಗಿ ಬಂದರು. ವಿದ್ವಾನ್ ಉಮಾಕಾಂತ ಭಟ್ಟರು ದ್ರೋಣನ ವೇಷ ಹಾಕಿದ್ದು ಈ ಸಂಭ್ರಮಕ್ಕೆ ವೈದಿಕ ಗೌರವದ ಸೇಸೆಯೇ ಸರಿ.

ಕಚೇರಿ ಕೆಲಸದ ನಡುವೆ ಬಿಡುವು ಇಲ್ಲದ್ದರಿಂದ ಈ ಕಾರ್ಯಕ್ರಮ ನೋಡಲು ಸಾಧ್ಯವಾಗಲಿಲ್ಲ. ಆದರೆ, ಇದರ ಪೂರ್ಣ ಯಶಸ್ಸಿಗಾಗಿ ಹಂಬಲಿಸಿದವ. ರಾತ್ರಿ ೮.೩೦ ರ ಬಳಿಕ ಸ್ವಲ್ಪ ಹೊತ್ತು ಆಟ ನೋಡಲಷ್ಟೇ ಅವಕಾಶವಾಯಿತು. ರಂಗದಲ್ಲಿ ಉಮಾಕಾಂತ ಭಟ್ಟರು (ದ್ರೋಣ) ಥಂಡಿ ಭಾವನ (ಕೌರವ) ಸಂಭಾಷಣೆ ನಡೆದಿತ್ತು. ನಂತರ ರಮೇಶ ಭಂಡಾರಿಯವರ ದುಶ್ಶಾಸನನ ಮಾತಿನ ಮಳೆ. ಅಂದಿನ ಸಭೆ, ವಾತಾವರಣ ಅವಲೋಕಿಸುತ್ತಿದ್ದಂತೆ ಪ್ರಸಂಗದ ಕೊನೆಯ ಭಾಗ ಹತ್ತಿರವಾಗಿತ್ತು. ಅಲ್ಲಿ ಕಣ್ಣಿಯನ್ನು ಕಂಡಾಗ ಮನಸ್ಸಿಗೆ ಏನೋ ಒಂದು ಬಗೆಯ ತೃಪ್ತಿ. ಕಣ್ಣಿಗಿದು ಹೊಸ ಜನ್ಮ ಎನ್ನಿಸಿತು.
ಸಮಾರಂಭದಲ್ಲಿ ಕಣ್ಣಿ ಭಟ್ಟರಿಗೆ ಬಂಗಾರದ ಸರ ಹಾಕಲಾಗಿದೆ. ಇದು ಮನೋಜ ಭಟ್ಟರ ಉತ್ಸಾಹದ ದ್ಯೋತಕ. ಕಣ್ಣಿಯ ಭವಿಷ್ಯ ಅಪ್ಪಟ ಚಿನ್ನವಾಗಲಿ ಎಂಬುದರ ಸಂಕೇತ ಈ ಹಾರ. ಇದಕ್ಕೆ ಪೂರಕವಾಗಿ ತಾವಿನ್ನು ಹೊಸ ಮನುಷ್ಯನಾಗುವ ವಿಶ್ವಾಸದ ವಾಗ್ದಾನವನ್ನು ಕಣ್ಣಿ ನೀಡಿದ್ದಾರೆಂದು ಕೇಳಿ ಸಮಾಧಾನವಾಯಿತು.
ಮುಂದೇನು ?
ಇಷ್ಟೆಲ್ಲ
ಬರೆದಿದ್ದು ಕಣ್ಣಿಯನ್ನು ಹತ್ತಿರದಿಂದ ನೋಡಿದ ಸಹೃದಯ ಬಂಧುವಾಗಿ. ಕಪಟವರಿಯದ ಅವರ ವ್ಯಕ್ತಿತ್ವಕ್ಕೆ ಮಾರು ಹೋಗಿ. ಕಣ್ಣಿಯ ನೃತ್ಯದ ನಾವೀನ್ಯ, ಪುಂಡು ವೇಷದ ಮೆರೆಯುವಿಕೆ ಯಾವುದನ್ನೂ ಇಲ್ಲಿ ಹೇಳುವ ಅಗತ್ಯ ಕಾಣಲಿಲ್ಲ. ಅದು ಯಕ್ಷಗಾನದವರಿಗೆ ಗೊತ್ತು. ಈ ಕ್ಷಣಕ್ಕೆ ನಿಂತು ಯೋಚಿಸಿದರೂ ಕಣ್ಣಿಯ ಭವಿತವ್ಯ ಉಜ್ವಲವಾಗಿದೆ. ರಾಜವೇಷ (ಕಿರೀಟ) ಅವರಿಗೆ ಒಪ್ಪುವುದಿಲ್ಲವೆಂಬುದನ್ನು ಬದಿಗಿಡೋಣ. ತಮ್ಮ ದೇಹ ವಿನ್ಯಾಸಕ್ಕೆ ಹೊಂದುವ ವೇಷಭೂಷಣ, ಮುಖ್ಯವಾಗಿ ಸರಿಯಾದ ಕಿರೀಟ ಆಯ್ದುಕೊಂಡರೆ ಅದೂ ಆದೀತು. ಆಗ ಕಣ್ಣಿ ರಂಗದ ಪೋರನಷ್ಟೇ ಅಲ್ಲ. ‘ರಂಗಸ್ಥಳದ ರಾಜ’ನೂ ಆಗಬಲ್ಲರು. ಮುಖವರ್ಣಿಕೆ, ಮೀಸೆ ಹಚ್ಚುವಿಕೆಯಲ್ಲೂ ಶ್ರದ್ಧೆ ಬೇಕು. ಕುಣಿತವೂ ಪಾತ್ರದ ಸಾಲು, ಸ್ವಭಾವಾನುಗುಣವಾಗಿ ಇರಬೇಕು.

ಕೆರೆಮನೆ ಮಹಾಬಲ ಹೆಗಡೆಯವರೂ ಮೊದಲು ಸಿಕ್ಕಾಪಟ್ಟೆ ಕುಣಿಯುತ್ತಿದ್ದರಂತೆ. ಚಪ್ಪಾಳೆ ಬೀಳುವುದು ಮಾಮೂಲು. ಆದರೆ, ಕಾರಂತರ ಒಡನಾಟ ಹೆಗಡೆಯವರ ಚಿಂತನೆಯನ್ನೇ ಬದಲಿಸಿತು. ಅವರು ಯಕ್ಷಗಾನದ ಮಹಾಬಲರಾದರು. ಅದಕ್ಕೆ ಸತತ ಓದು, ಅಧ್ಯಯನದ ಕೃಷಿಯಿತ್ತು. ಹಾಗಾಗಿ ಅವರದೇ ಆದ ಅನೇಕ ಪಾತ್ರಗಳನ್ನು ಕಡೆದು ನಿಲ್ಲಿಸಿದ್ದಾರೆ. ಮಹಾಬಲರನ್ನು ಅನುಸರಿಸಿದವರು ಆ ಪ್ರತಿಮೆಗಳನ್ನು ಅಲುಗಾಡಿಸುವುದಿರಲಿ, ಹತ್ತಿರ ಹೋಗಿ ಗಟ್ಟಿಯಾಗಿ ಸ್ಪರ್ಷಿಸುವ ಧೈರ್ಯವನ್ನೂ ಮಾಡಿಲ್ಲ. ಪ್ರತಿಮೆಗೆ ಪ್ರದಕ್ಷಿಣೆ ಹಾಕುವಷ್ಟರಲ್ಲೇ ಬಸವಳಿಯುತ್ತಿದ್ದಾರೆ.

ವಿಷಯ ಎಲ್ಲಿಗೋ ಹೋಯಿತು. ಕಣ್ಣಿಯನ್ನು ಮಹಾಬಲರಿಗೆ ಹೋಲಿಸುವ ಉದ್ದೇಶವಿಲ್ಲ. ಶ್ರೇಷ್ಠ ಕಲಾವಿದ ಮಹಾಬಲ ಹೆಗಡೆಯವರು ಎಳೆಯ ಪ್ರಾಯದಲ್ಲಿ ದಣಿವರಿಯದ ಕುಣಿತದಿಂದ ಪ್ರಸಿದ್ಧಿಯಲ್ಲಿದ್ದರಂತೆ. ಕಣ್ಣಿಯೂ ಈಗ ಅಂತಹುದೊಂದು ಉತ್ತುಂಗದಲ್ಲಿದ್ದಾರೆ. ಹೀಗಾಗಿ ಬರಹ ಅತ್ತ ಹೊರಳಿತು. ಪ್ರಾಯಶಃ ಕಣ್ಣಿಗೂ ಕಾರಂತರಂತಹವರ ಸಾಂಗತ್ಯ ಸಿಕ್ಕಿದರೆ ಒಳ್ಳೆಯದು ಎನಿಸುತ್ತದೆ. ಏನೋ ಪರಿವರ್ತನೆಯಾದೀತೆನ್ನುವ ಆಸೆ. ಬೆನ್ನಿಗೇ ಈಗ ಅಂಥವರು ಯಾರಿದ್ದಾರೆ ಎಂಬ ಪ್ರಶ್ನೆಯೂ ಕಾಡುತ್ತದೆ. ಎಲ್ಲದಕ್ಕೂ ಕಾಲವೇ ಉತ್ತರಿಸಬೇಕು.

ಕಳೆದ ಐವತ್ತು ಐವತ್ತೈದು ವರ್ಷದಿಂದ ಯಕ್ಷಗಾನದಲ್ಲಿ ಸ್ಟಾರ್ ಪಟ್ಟ ಉಳಿಸಿಕೊಂಡು ಬಂದವರು ನಮ್ಮ ಚಿಟ್ಟಾಣಿ ಅಜ್ಜ. ಅವರು ಬರುತ್ತಾರೆಂದರೆ ಈಗಲೂ ರೋಮಾಂಚನ. ಸುಮ್ಮನೇ ರಂಗಸ್ಥಳದಲ್ಲಿ ನಡೆದುಕೊಂಡು ಹೋದರೂ ಆ ಸೊಬಗನ್ನು ನೋಡುವುದೇ ಚೆಂದ. ಅದು ನಮ್ಮ ಭಾಗ್ಯ. ಸದ್ಯ ಕಣ್ಣಿಯೂ ತಾರಾಮೌಲ್ಯದಲ್ಲಿ ಮೊದಲ ಸಾಲಿನಲ್ಲಿರುವ ಕಲಾವಿದ. ಅದನ್ನು ಉಳಿಸಿಕೊಳ್ಳುವುದು ಕಣ್ಣಿಯ ಕೈಯಲ್ಲೇ ಇದೆ. ಏನೇ ಅಡ್ಡಿ, ಆತಂಕ ಎದುರಾದರೂ ಅವುಡುಗಚ್ಚಿಕೊಂಡು ವೈಯಕ್ತಿಕ ಬದುಕನ್ನು ಹಳಿಗೆ ಆನಿಸಿ ಸಾಗುವುದನ್ನೂ ಅರ್ಥ ಮಾಡಿಕೊಳ್ಳಬೇಕಿದೆ. ಸುಖ, ದುಃಖಕ್ಕೆ ಮನೋಜ ಭಟ್ಟರ ಬಳಗ ಬೆನ್ನಿಗೆ ಇದ್ದೇ ಇರುತ್ತದೆ. ಅಭಿಮಾನಿಗಳ ಸಮೂಹವೂ ಇದೆ. ಈ ಪರಿಯ ರಕ್ಷಾ ವಲಯವಿರುವಾಗ ಕಣ್ಣಿ ಒಂಟಿಯಾಗಲಾರರು. ಒಬ್ಬರೇ ದುಗುಡದ ಕೋಟೆ ಹೊಗುವ ಸಂದರ್ಭವೂ ಬರಲಾರದು.

ಕಣ್ಣಿಗಾಗಿ ನಿಷ್ಕಲ್ಮಶ ಮನದಿಂದ ‘ಕಟಪಟೆ’ ಮಾಡುವವರದೊಂದು ಆಗ್ರಹವೂ ಇದೆ. ಅದನ್ನು ಪ್ರೀತಿಪೂರ್ವಕ ಆಜ್ಞೆಯೆಂದೇ ಭಾವಿಸಬಹುದು. ಕಣ್ಣಿ ತಾನು, ತನ್ನವರೊಂದಿಗೆ ಗೌರವದಿಂದ ಬಾಳಬೇಕು. ರಂಗದಲ್ಲಿ ಮೇರು ಎನ್ನುವಷ್ಟು ಎತ್ತರಕ್ಕೆ ಬೆಳೆಯಬೇಕು. ಮುಂದಿನ ಕಲಾಜೀವನದ ಮಹತ್ವ, ಹೊಣೆಗಾರಿಕೆ ಅರಿಯಬೇಕು. ಹಾಗಾದರೆ ಬೆಳ್ಳಿ ಹಬ್ಬದ ಸಂಭ್ರಮಕ್ಕೆ ವ್ಯಯಿಸಿದ ಬೆವರ ಹನಿ ಹನಿಗೂ ಬೆಲೆ ಬಂದಂತಾಗುತ್ತದೆ.

Last Posts