ನದಿಯೊಂದು ಜಲಪಾತವಾಗಿ ಧುಮ್ಮಿಕ್ಕಿದರೆ ಅದು ರೋಮ ಹರ್ಷಕ ಅನುಭವವೀಯುವ ಅಬ್ಬರ. ಅದೇ ನದಿ ಹಸಿರ ಕಣಿವೆಯ ಕೊರಕಲಿನಲ್ಲಿ ಪ್ರವಹಿಸಿದರೆ ಅದೊಂದು ದೃಶ್ಯ ವೈಭವ. ಯಾವುದೋ ತಿರುವಿನಲ್ಲಿ ತೊರೆಯ ಒಡಲು ಬರಿದಾದರೆ ರಸಭಂಗವಾದಂತೆ.
ರಂಗಸ್ಥಳದಲ್ಲೂ ಹಾಗೆಯೇ. ಪಾತ್ರವೊಂದು ಮೊಳಕೆಯೊಡೆದು ತುರೀಯಾವಸ್ಥೆ ತಲುಪಲು ವಿಭಿನ್ನ ರಸಘಟ್ಟ ಕ್ರಮಿಸಬೇಕಾಗುತ್ತದೆ. ಯಕ್ಷಗಾನದ ‘ಭಸ್ಮಾಸುರ ಮೋಹಿನಿ’ ಆಖ್ಯಾನದ ಮೋಹಿನಿಯ ಪಾತ್ರದ ಪ್ರವೇಶ ಭೋರ್ಗರೆವ ಜಲಪಾತದಂತೆ. ಮೋಹಿನಿ ಶ್ರೀಹರಿಯ ವೇಷಾಂತರ. ಭಸ್ಮಾಸುರನನ್ನು ಮರುಳು ಮಾಡಿ ಕೊಲ್ಲುವುದೇ ಮೋಹಕ ರೂಪಿ ಮೋಹಿನಿಯ ತಂತ್ರ.
ಪ್ರಸಂಗದ ಪೂರ್ವಾರ್ಧದಲ್ಲಿ ಮೋಹಿನಿಯ ಪ್ರವೇಶವಾಗುತ್ತದೆ. ಚೆಲ್ಲು ಚೆಲ್ಲಾಗಿ ಆಡುವುದು, ಸೌಂದರ್ಯಾತಿಶಯದಿಂದ ಬೀಗುವುದೇ ಈಕೆಯ ಸ್ವಭಾವ. ಒಂದರ್ಥದಲ್ಲಿ ಶೃಂಗಾರವೇ ವಿಜೃಂಭಿಸಬೇಕು. ನರ್ತನದಲ್ಲಂತೂ ಮೈಮರೆಸಲೇಬೇಕು. ಯಕ್ಷಗಾನದಲ್ಲಿ ಪುರುಷರೇ ಸ್ತ್ರೀವೇಷ ಮಾಡುವುದು ರೂಢಿ. ಹೀಗಾಗಿ ಮೋಹಿನಿಯಾಗಿ ಮೋಡಿಗೈಯ್ಯಲು ಅಂತಹ ಪ್ರತಿಭಾಸಂಪನ್ನರೇ ಇರಬೇಕಾಗುತ್ತದೆ.
ಮಾರ್ಚ್ ೧೫ ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಹಾಸ್ಯಗಾರ ರಮೇಶ ಭಂಡಾರಿ ಸಹಾಯಾರ್ಥ ಪ್ರದರ್ಶನದಲ್ಲಿ ಈ ಆಖ್ಯಾನವಿತ್ತು. ಮೋಹಿನಿಯಾಗಿ ಅಭಿನಯಿಸಿದವರು ಮೋಹಕ ಸ್ತ್ರೀವೇಷಧಾರಿಯೇ ಆದ ಯಲಗುಪ್ಪ ಸುಬ್ರಹ್ಮಣ್ಯ. ಇವತ್ತಿನ ಸಂದರ್ಭದಲ್ಲಿ ಮೋಹಿನಿಯಂಥ ಪಾತ್ರವನ್ನು ಯಲಗುಪ್ಪ ಮಾತ್ರ ಸಮರ್ಥವಾಗಿ ಅರಳಿಸಬಲ್ಲರು. ಅದಕ್ಕೇ ಅವರು ಅಂದಿನ ಪ್ರದರ್ಶನದ ಕೇಂದ್ರವಾಗಿದ್ದರು. ನಿರೀಕ್ಷೆಯಂತೆ ಮತ್ತೊಮ್ಮೆ ‘ಮನ ಮೋಹಿನಿ’ಯೇ ಆದರು.
ಬಂದಳಾಗ ಮೋಹಿನಿಯು ಆನಂದದಿ, ಎಲ್ಲೆಲ್ಲು ಸೊಬಗಿದೆ... ಸೇರಿ ಎಲ್ಲ ಪದ್ಯಗಳಿಗೂ ಕುಣಿದು ದಣಿದು ಸಮ್ಮೋಹನಗೊಳಿಸಬಲ್ಲವರು ಯಲಗುಪ್ಪ. ಯಕ್ಷಗಾನೀಯ ವಲಯದವರಲ್ಲದವರು ಈ ಕಲಾವಿದನ ಸ್ತ್ರೀವೇಷ ಕಂಡರೆ ಹೆಣ್ಣೆಂದೇ ಭಾವಿಸುತ್ತಾರೆ. ನೈಜ ಸಂಗತಿ ಅರಿತಾಗ ಚಕಿತರಾಗಿ ಹೌದಾ.. ಎಂದು ಉದ್ಗರಿಸಿದ ಎಷ್ಟೋ ನಿದರ್ಶನಗಳಿವೆ. ದಿಗಡದಿಮ್ಮಿಯಂಥ ವೇಷದಷ್ಟೇ ಸಮರ್ಥವಾಗಿ ಭಾವ ಪ್ರಧಾನ ಪಾತ್ರಗಳಲ್ಲೂ ಗೆಲ್ಲುವ ಅರ್ಹತೆ ಯಲಗುಪ್ಪ ಅವರಿಗೆ ಉಂಟು.
ವೃತ್ತಿ ಮೇಳಕ್ಕೆ ಕಾಲಿಟ್ಟ ಹೊಸತರಲ್ಲಿ ಇದೇ ಯಲಗುಪ್ಪ ಮೇಲೆ ಭರವಸೆ ಇಟ್ಟವರು ಕಡಿಮೆ. ಆದರೆ, ಕಠಿಣ ಪರಿಶ್ರಮದಿಂದ ಈ ಹಂತಕ್ಕೆ ಬೆಳೆದರು. ಸುಬ್ರಹ್ಮಣ್ಯ ಅವರಿಗೆ ಲಯದ ಮೇಲಿನ ಅದ್ಭುತ ಹಿಡಿತದ ಸಿದ್ಧಿಯಿದೆ. ಶ್ರುತಿಬದ್ಧವಾಗಿ ಹಾಡಿಕೊಳ್ಳುವ, ಹಿಮ್ಮೇಳವನ್ನು ಹೊಂದಾಣಿಕೆ ಮಾಡಿಕೊಂಡು ಸಾಗುವ ಜಾಣ್ಮೆಯಿದೆ. ಭರತನಾಟ್ಯ, ಹಿಂದೂಸ್ತಾನಿ ಸಂಗೀತದ ಅಭ್ಯಾಸವೂ ಇದೆ. ವಾಚಿಕಾಂಗದಲ್ಲೂ ಮೇಲ್ಮೆಯಿದೆ. ಮೋಹಿನಿ, ಮೇನಕೆಯಂಥ ಪಾತ್ರಗಳಲ್ಲಿ ಶಿಲ್ಪ ಸುಂದರಿಯೇ ಆಗುತ್ತಾರೆ. ಅದಕ್ಕೆ ಸಹವರ್ತಿಯಾಗಿ ಅವರ ದೇಹ ಬಾಗುತ್ತದೆ. ಬಳುಕುತ್ತದೆ. ಹಾವ, ಭಾವ, ಒನಪು, ವೈಯ್ಯಾರದಿಂದ ಸ್ತ್ರೀ ಸಹಜ ಗುಣಲಕ್ಷಣಗಳನ್ನು ಮೈಗೂಡಿಸಿ ಅಭಿನಯಿಸುತ್ತಾರೆ. ಹದಿನಾರರ ಸೊಕ್ಕಿದ ಅಂಗನೆಯಂತೆ ‘ಕೊಮಣೆ’ ಮಾಡೋದೂ ಗೊತ್ತು.
ನಮ್ಮ ಚೋಳ (ಕಂಚಿನ ಶಿಲ್ಪ), ಹೊಯ್ಸಳ ಇತ್ಯಾದಿ ಶಿಲ್ಪ ಕೃತಿಗಳಿಗೆ ಸುರೇಖಾಕೃತಿಯೆನ್ನುತ್ತೇವೆ. ಸೌಂದರ್ಯ ಶಾಸ್ತ್ರದಲ್ಲೂ ಸರ್ವಾಂಗ ಭೂಷಿತ ಸ್ತ್ರೀ ಗೆ ಇದು ಉಪಮೆ. ಸರಳ, ಲಾಲಿತ್ಯಭರಿತ ರೇಖೆ ಇರುವಂಥಾದ್ದು ಈ ತೆರನ ಆಕೃತಿ. ಅದು ಎಲ್ಲಿಯೂ ಛಿದ್ರಗೊಳ್ಳುವುದಿಲ್ಲ. ಈ ಚಿತ್ರವು ಜೀವಂತ ಬಿಂಬವಾಗಿಯೂ (೩ ಡಿ ಇಮೇಜ್/ರೂಪಚಿತ್ರ) ಅನುಭೂತಿಗೆ ಬರುತ್ತದೆ. ಹೀಗಿರುವುದು ಕಾವ್ಯ ಕನ್ನಿಕೆಯೇ ಮೈವೆತ್ತ ಸುರೇಖಾಕೃತಿ. ಹೆಣ್ಣುಗಳಲ್ಲೇ ಈ ಅತಿಶಯ ವಿರಳ. ಯಕ್ಷರಂಗದಲ್ಲಿ ಈ ಸಂಪನ್ನತೆಯ ಸನಿಹ ಇರುವವರು ಯಲಗುಪ್ಪ. ಇದನ್ನು ಸಾಧ್ಯವಾಗಿಸ ಹೊರಟಿರುವುದು ಕಲಾವಿದನ ವಿನೀತ ಹುಡುಕಾಟ, ಕೌಶಲ್ಯ. ಈ ನೆಲೆಯಲ್ಲಿ ಯಲಗುಪ್ಪ ಯಕ್ಷರಂಗದ ‘ಮಾದರಿ ಹೆಣ್ಣಾ’ಗುವ ಹಾದಿಯಲ್ಲಿದ್ದಾರೆ. ಎಂದೆಂದಿಗೂ ಪ್ರಸ್ತುತವಾಗುವ ಭವಿತವ್ಯ ಅವರಿಗಿದೆ.
ಬಡಗಿನ ಪ್ರತಿಭೆ ಯಲಗುಪ್ಪ ಸುಬ್ರಹ್ಮಣ್ಯ ಉಭಯ ತಿಟ್ಟಿನ ಆಕರ್ಷಣೆಯೂ ಹೌದು. ಆದರೆ, ಬಡಗುತಿಟ್ಟಿನಲ್ಲೇ ನೆಲೆ ನಿಂತರೆ ಈ ಕಲಾವಿದ ಅಪೇಕ್ಷೆಯ ಎತ್ತರಕ್ಕೆ ಏರಿ ಬೆಳಗಬಲ್ಲರು. ಇದಕ್ಕಾಗಿ ನಿರಂತರ ಚೆಂದವಾಗಿ ವೇಷ ಮಾಡಿಕೊಳ್ಳಬೇಕು. ಯಕ್ಷಗಾನೀಯ ಆಭರಣ, ವಸನದ ಆಯ್ಕೆಯಲ್ಲಿ ಹೆಚ್ಚು ಶ್ರದ್ಧೆ ವಹಿಸಬೇಕು. ಶಿರೋಭೂಷಣದಿಂದ ಪಾದದ ವರೆಗೂ ವೇಷದ ಒಪ್ಪ, ಓರಣದ ಸೊಬಗು ಮುಕ್ಕಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ನದಿಯ ಚಲನಶೀಲತೆಗೆ ಕುಂದುಂಟಾದಂತೆ, ರಸಜ್ಞರ ಕಣ್ಣಿನ ನೋಟಕ್ಕೆ ಪೊರೆ ಆವರಿಸಿದಂತಾಗುತ್ತದೆ.
(ವಿಜಯ ಕರ್ನಾಟಕ ಸಂಸ್ಕೃತಿ ಸಿಂಚನದಲ್ಲಿ ಪ್ರಕಟವಾದ ಲೇಖನ. ಸ್ವಲ್ಪ ಜಾಸ್ತಿ ವಿಷಯ ಸೇರಿಸಲಾಗಿದೆ)