ಶಂಕರನ ಧ್ಯಾನ

ಪ್ರಾಯಶಃ ಚೌತಿ ಹಬ್ಬದ ಸಮಯವಿರಬೇಕು. ನನಗೆ ಶಿರಸಿಯ ಸಾರ್ವಜನಿಕ ಗಣಪತಿ ನೋಡುವ ಸಂಭ್ರಮ. ಅದಕ್ಕೆಂದು ಕರೆದುಕೊಂಡು ಹೋಗಿದ್ದ ಅಪ್ಪಯ್ಯ ಒಂದು ಸುತ್ತು ಹಾಕಿಸಿ ಕೊಪ್ಪಣ್ಣನ ಖಾನಾವಳಿಯಲ್ಲಿ ಕುಳ್ಳಿರಿಸಿ ಟಿಎಸ್ಎಸ್ಗೆ ತೆರಳಿದ್ದರು. ಅಪ್ಪಯ್ಯ ವಾಪಸಾಗುವುದು ತಡವಾಗುತ್ತದೆಂದು ಭಾವಿಸಿ ದೇವಿಕೆರೆ ಏರಿ ಮೇಲೆ ತಿರುಗಾಡ ತೊಡಗಿದೆ.

ಆಗ ನಾನು ನೋಡಿದ್ದು ಸಪೂರ ಮೈಕಟ್ಟಿನ, ಸಾಧಾರಣ ಎತ್ತರದ, ಉದ್ದ ಕೂದಲಿನ ವ್ಯಕ್ತಿ. ಅವರು ನನ್ನನ್ನು ದಾಟಿ ಹೋದ ಮೇಲೆ, ‘ಓಹೋ, ಇವರು ನಮ್ಮಶಂಕರ ಭಾಗವತರುಎಂದು ತಿಳಿಯಿತು. ಓಡಿ ಹೋಗಿ ಮಾತಾಡಿಸೋಣವೆಂದು ಯೋಚಿಸುತ್ತಿರುವಾಗಲೇ ಭಾಗವತರು ಜನರ ಮಧ್ಯದಲ್ಲಿ ಮರೆಯಾದರು. ಮತ್ತೆ ಓಡಾಡುವ ಮನಸ್ಸಾಗದೆ ಖಾನಾವಳಿಗೆ ಹಿಂದಿರುಗಿ ಹೊರಗಡೆಯ ಕಾಲುಮಣೆ ಮೇಲೆ ಕುಳಿತೆ.

ಅಪ್ಪಯ್ಯ ಸೊಸೈಟಿ ಕೆಲಸ ಮುಗಿಸಿ ಬರುವ ವರೆಗೂ ಏನೋ ಚಡಪಡಿಕೆ. ರಂಗಸ್ಥಳದಲ್ಲಿ ಮದ್ದಲೆ ನುಡಿಸುವ ಶಂಕರ ಭಾಗೋತ್ರು ಇಷ್ಟು ಹತ್ತಿರದಲ್ಲಿ ಸಿಕ್ಕಿದ್ರು. ಸಾದಾ ಡ್ರೆಸ್ಸ್ನಲ್ಲೂ ಎಷ್ಟು ಚೆಂದ ಕಾಣ್ತ್ರು. ಹ್ವಾಯ್..., ಎಂದು ಕೈ ಕಲುಕಬೇಕಿತ್ತು ಎಂಬ ಭಾವ ತುಮುಲದಲ್ಲಿ ಒದ್ದಾಡುತ್ತಿದ್ದೆ. ಅಪ್ಪಯ್ಯ ಬಂದು ತಮಾ, ಮನೆಗೆ ಹೋಪನ ಬಸ್ಸ್ ಇದ್ದು... ಎಂದು ಕರೆದಾಗಲೇ ಎಚ್ಚರವಾಯ್ತು. ಶಂಕರ ಭಾಗೋತನ್ನ ನೋಡ್ದೆ. ಇಲ್ಲೇ ಎಲ್ಲೋ ಇದ್ದ. ಹೋಗಿ ಕಾಣುವ ಎಂದು ಅಪ್ಪಯ್ಯನ ಬಳಿ ಹೇಳಿದೆ.

ಅದಕ್ಕೆ ಪೋರನಿಗೆ ಆಟದ ಮೇಳದವರ ಆಕರ್ಷಣೆ ಹೆಚ್ಚಾಯ್ತು ಎಂಬಂತೆ ಅಪ್ಪಯ್ಯ ನೋಡಿದ. ಈಗ ಬೇಡ. ಮುಂದೆ ಯಾವಾಗಾದರೂ ಆಟಕ್ಕೆ ಹೋದಾಗ ಚೌಕಿಮನೆಯಲ್ಲಿ ಕಂಡರಾಯ್ತು. ಸತ್ಕಾರ ಹೋಟೆಲ್ನಲ್ಲಿ ಮಸಾಲೆ ದೋಸೆ ತಿಂದು ಹೊರಡೋಣವೆಂದು ಅನುನಯಿಸಿ ಕೈ ಹಿಡಿದುಕೊಂಡು ಹೊರಟೇ ಬಿಟ್ಟ. ನಾನು ಶಂಕರ ಭಾಗವತರ ನೆನಪಲ್ಲೇ ಹೆಜ್ಜೆ ಹಾಕಿದೆ.

ಘಟನೆ ನಡೆದಾಗ ನನಗೆ ೧೦ ರಿಂದ ೧೨ ವರ್ಷವಿರಬಹುದು. ಅದಾಗಿ ಹದಿನೈದು ವರ್ಷವೇ ಉರುಳಿದೆ. ಅವಧಿಯಲ್ಲಿ ಯಕ್ಷಗಾನ ಪ್ರದರ್ಶನ, ಶಿರಸಿ ಪೇಟೆ, ಮತ್ತೆ ಹಲವೆಡೆ ಶಂಕರ ಭಾಗವತರನ್ನು ನೋಡಿದ್ದೇನೆ. ಬೇಕಾದಷ್ಟು ಮಾತಾಡಿದ್ದೇನೆ. ಪ್ರಮುಖವಾಗಿ ಅವರು ಮದ್ದಲೆ ನುಡಿಸುವ, ಅದರಿಂದ ನಾದ ಹೊಮ್ಮಿಸುವ ಪರಿಯನ್ನು ಕಂಡು (ಕೇಳಿ) ಕ್ಷಣಕ್ಕೂ ಬೆರಗಾಗುತ್ತಿದ್ದೇನೆ.

ಕರಾವಳಿ-ಮಲೆನಾಡಿನವರಿಗೆ ಗೊತ್ತಿದೆ. ಯಕ್ಷಗಾನ, ಕಲಾವಿದರ ಬಗೆಗಿನ ಸೆಳೆತವೇ ಅಂತಹುದು ಎಂದು. ಅದೇ ವಾತಾವರಣದಲ್ಲಿ ಬೆಳದ ನನ್ನಂಥವನಿಗೆ ಇಂತಹ ಅನುಭವವಾಗುವುದು ಸಹಜವೆಂದು ಈಗ ಅರಿವಾಗುತ್ತಿದೆ.

ಅದೇನೇ ಇರಲಿ, ಪ್ರಕೃತ ನಮ್ಮ ಅಭಿಮಾನದ ಬಂಡೆ ಶಂಕರ ಭಾಗವತರು ಯಕ್ಷಗಾನದ ಮದ್ದಲೆ ವಾದಕರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಶಂಕರ ಭಾಗವತರು ಮೂಲತಃ ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಸಿಸ್ತಮುಡಿಯವರು. ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಿ ಅವರೀಗ ಮನೆಮಾತು. ಮದ್ದಲೆಯಲ್ಲಿ ವಿಶೇಷ ಪ್ರಾವೀಣ್ಯ ಸಂಪಾದಿಸಿರುವ ಭಾಗವತರು ಕುರಿತ ಅಧ್ಯಯನ ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಶಾಸ್ತ್ರೀಯತೆ, ಆಧುನಿಕತೆ ಎರಡನ್ನೂ ಕರಗತ ಮಾಡಿಕೊಂಡಿರುವ ಶಂಕರ ಭಾಗವತರು ಯಾವುದೇ ಮೇಳಕ್ಕೆ ದೊಡ್ಡ ಆಸ್ತಿ. ನಾನಂತೂ ಅವರನ್ನು ಯಾವಾಗಲೂ ತಬಲಾ ಮಾಂತ್ರಿಕ ಜಾಕೀರ್ ಹುಸೇನ್ಗೆ ಹೋಲಿಸುವುದರಲ್ಲಿ ಖುಷಿ ಪಡುತ್ತೇನೆ. ತಬಲಾವನ್ನೂ ಅಭ್ಯಾಸ ಮಾಡಿರುವ ಇವರು, ಮದ್ದಲೆ-ತಬಲಾದ ಜುಗಲ್ಬಂದಿ ವೇದಿಕೆಗಳನ್ನೂ ಹಂಚಿಕೊಂಡಿದ್ದಾರೆ.

ಒಂದು ವಿಸ್ಮಯವನ್ನು ಹೇಳಲೇಬೇಕು. ಲೋಕದ ಬೆಳಕು ಕಂಡು ೧೦ ವರ್ಷದ ವರೆಗೂ ಬಾಲಕ ಶಂಕರ ಮಾತೇ ಆಡಿರಲಿಲ್ಲವಂತೆ. ಆದರೆ, ಆಗಲೇ ಮದ್ದಲೆಯೊಂದಿಗೆ ಆಟ ಆಡುತ್ತಿದ್ದನಂತೆ. ಹೆತ್ತವರು ಹರಕೆ ಹೊತ್ತಿದ್ದರ ಫಲವಾಗಿ ಬಾಲಕನ ನಾಲಗೆಯಲ್ಲಿ ಶಬ್ದ ಸಂಚಾರವಾಯಿತಂತೆ.

ಶಂಕರ ಭಾಗವತರು ಕಲಾ ಬದುಕಿನ ಔನ್ನತ್ಯಕ್ಕೆ ಏರಿದ್ದಾರೆ. ಸಂದರ್ಭದಲ್ಲಿ ಅವರನ್ನು ಅಭಿನಂದಿಸಲು ರಾಜಧಾನಿಯ ಅಭಿಮಾನಿಗಳು ಸಜ್ಜಾಗಿದ್ದಾರೆ. ಇದೇ ಭಾನುವಾರ (ಏಪ್ರಿಲ್ ೧೯) ಮಧ್ಯಾಹ್ನ ಪುರಭವನದಲ್ಲಿನಾದ ವೈಭವ - ೫೫ಶೀರ್ಷಿಕೆಯಡಿ ಭಾಗವತರನ್ನು ಸಂಮಾನಿಸಲಾಗುತ್ತಿದೆ. ಯಕ್ಷಗಾನ ಪ್ರದರ್ಶನಗಳೂ ನಡೆಯಲಿವೆ. ಭಾಗವತರು ಏಕಕಾಲದಲ್ಲಿ ರಿಂದ ಮದ್ದಲೆ ನುಡಿಸುವ ಉತ್ಸಾಹದಲ್ಲಿ ಇದ್ದಾರೆ.

ಹೀಗಾಗಿ ಇದು ಶಂಕರನ ಧ್ಯಾನದ ಕಾಲ. ಶಂಕರ ಭಾಗೋತರ ಮೇಲಿನ ಪ್ರೀತಿ, ಅಭಿಮಾನಕ್ಕಾಗಿ ಬರೆಹ. ಜತೆಗೆ ಅವರು ಮದ್ದಲೆ ವಿಭಾಗದಲ್ಲಿ ಗೌರೀಶಂಕರದ ಎತ್ತರಕ್ಕೆ ಏರಲಿ ಎಂಬ ಹಾರೈಕೆ.

2 comments:

ಯಕ್ಷಗಾನ ರಂಗದ ಅನರ್ಘ್ಯರತ್ನ ಗಳಲ್ಲೊಂದಾದ ಶಂಭಾರ ಸರಳ ವ್ಯಕ್ತಿತ್ವ,ಕಲೆಯ ಶ್ರೀಮಂತಿಕೆಯನ್ನ ಪರಿಚಯಿಸಿರುವ ನಿಮಗೆ ಧನ್ಯವಾದಗಳು.
ಯಕ್ಷಗಾನವನ್ನ ಕೇವಲ ಹವ್ಯಾಸವಲ್ಲದೇ ಅಧ್ಯಯನ ಕ್ಷೇತ್ರವನ್ನಾಗಿ ಹಾಗೂ ಬರವಣಿಗೆಯನ್ನ ವೃತ್ತಿಯಾಗಿ ಆರಿಸಿಕೊಂಡಿರುವ ನಿಮ್ಮಿಂದ ಬರೆಯಲ್ಪಟ್ಟ ಇಂತಹ ಹಲವಾರು ಲೇಖನಗಳು ನಮ್ಮಿಂದ ಓದುವಂತಾಗಲಿ.
ಹಾಗೂ ನಾಧವೈಭವ ೫೫ ಅದ್ಬುತ ಯಶಸ್ಸು ಕಾಣಲಿ.
”ಯಕ್ಷಗಾನಂ ಗೆಲ್ಗೆ”

 

Post a Comment

Last Posts