
ಭೈರವೇಶ್ವರ ಶಿಖರದ ಮತ್ತೊಂದು ಮುಕುಟವೂ ಕಳಚಿತು
ಭೈರವೇಶ್ವರ ಶಿಖರದ ಮತ್ತೊಂದು ಮುಕುಟ ಕಳಚಿ ಬಿದ್ದಿದೆ. ಕೆರೆಮನೆ ಮಹಾಬಲ ಹೆಗಡೆ ಭೌತಿಕ ಪ್ರಪಂಚ ತೊರೆಯುವ ಮೂಲಕ ಯಕ್ಷಲೋಕದ ತುರಾಯಿಯೇ ಜಾರಿ ಹೋಗಿದೆ.
ಯಾಣದ ಭೈರವೇಶ್ವರ ಶಿಖರದಂತೆ ಯಕ್ಷಗಾನದಲ್ಲಿ ಇದ್ದವರು ಕೆರೆಮನೆ ಸಹೋದರರಾದ ಮಹಾಬಲ ಹೆಗಡೆ, ಶಂಭು ಹೆಗಡೆ. ಇಡಗುಂಜಿಯ ವಿನಾಯಕ ದೇವರ ಸನ್ನಿಯಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸುತ್ತಿದ್ದಾಗಲೇ ಶಂಭು ಹೆಗಡೆ, ಈ ಲೋಕದ ಯಾತ್ರೆ ಮುಗಿಸಿದ್ದರು. ಈ ದುಃಖ ಮಾಸುವ ಮುನ್ನವೇ ಮಹಾಬಲರೂ ಹೊರಟು ಹೋಗಿರುವುದು ದೊಡ್ಡ ಆಘಾತ.
ಯಕ್ಷರಂಗ ಒಪ್ಪಿ ಅಭಿಮಾನದಿಂದ ಬೀಗಿದಂತೆ ಮಹಾಬಲ ಹೆಗಡೆ ನಿಜಾರ್ಥದಲ್ಲಿ ‘ಯಕ್ಷಗಾನದ ಮಹಾಬಲ’ರೇ ಆಗಿದ್ದರು. ಅದು ಅವರ ಚಿಕ್ಕಪ್ಪ, ಸರ್ವೋತ್ಕೃಷ್ಟ ನಟ ದಿ. ಶಿವರಾಮ ಹೆಗಡೆ ಕಾಲದಲ್ಲೇ ಸಂದ ಬಿರುದಾಗಿತ್ತು. ಮುಮ್ಮೇಳ, ಹಿಮ್ಮೇಳಗಳೆರಡನ್ನೂ ಅರಿತು ರಾಗ, ತಾಳಗಳ ಬಗ್ಗೆ ಖಚಿತ ಜ್ಞಾನವಿದ್ದ ಏಕೈಕ ಕಲಾವಿದ ಮಹಾಬಲ ಹೆಗಡೆ. ಶ್ರುತಿಬದ್ಧವಾಗಿ ಹಾಡಿಕೊಂಡೇ ಅಭಿನಯಿಸಿ ಅರ್ಥ ಹೇಳುವುದು ಅವರಿಗಷ್ಟೆ ಸಿದ್ಧಿಸಿತ್ತು. ಹಿಂದೂಸ್ಥಾನಿಯ ಸಂಪರ್ಕದಿಂದಾಗಿ ಭಾಗವತಿಕೆಯಲ್ಲಿ ರಾಗದ ಖಚಿತತೆ ಬಯಸುತ್ತಿದ್ದರು. ಅದಕ್ಕಾಗಿಯೇ ಅವರಿಗೆ ಎಂತಹ ಭಾಗವತ ಹಾಡಿದರೂ ಸರಿ ಬರುತ್ತಿರಲಿಲ್ಲ. ಕಡು ನಿಷ್ಠುರವಾಗಿಯೇ ನಡೆದುಕೊಳ್ಳುತ್ತಿದ್ದರು.
ಎಳವೆಯಲ್ಲಿ ಮಹಾಬಲ ಕಿಲಾಡಿ ಪೋರ. ಆಲೆಮನೆಯ ಬೆಲ್ಲದ ಕೊಪ್ಪರಿಗೆಯಲ್ಲಿ ಉಚ್ಚೆ ಹೊಯ್ದ ತುಂಟ. ಈ ಮಾಣಿ ಫಟಿಂಗ ಆಗುವುದು ಬೇಡವೆಂದು ಶಿವರಾಮ ಹೆಗಡೆ ರಂಗಕ್ಕೆ ತಂದರಂತೆ. ನಂತರ ಚಿಕ್ಕಪ್ಪನ ನೆರಳಿನಲ್ಲೇ ಬೆಳೆದ ಮಹಾಬಲ, ಸ್ವಂತ ಪರಿಶ್ರಮದಿಂದಲೇ ಎತ್ತರಕ್ಕೆ ಏರಿದರು. ಶಾಲೆ ವಿದ್ಯಾಭ್ಯಾಸ ಕಡಿಮೆಯಾದರೂ ರಂಗದ ಕುರಿತಾದ ಅಧ್ಯಯನದಿಂದ ವೈಚಾರಿಕ ಸಂಪನ್ನರಾದರು. ಇದಕ್ಕೆ ಅವರ ಪಾತ್ರಗಳು ಆಡುತ್ತಿದ್ದ ಮಾತುಗಳೇ (ಅರ್ಥಗಾರಿಕೆ) ಸಾಕ್ಷಿ. ರಂಗಕ್ಕೆ ಒಗ್ಗುವ ಹಾಗೆ ಪ್ರಾದೇಶಿಕ ಪದಗಳ (ಗ್ರಾಮೀಣ/ ಗಾಂವಟಿ ಶಬ್ದ) ಬಳಕೆ ಮಹಾಬಲ ಹೆಗಡೆ ಶೈಲಿ ವೈಶಿಷ್ಟ್ಯ. ಇದನ್ನೇ ಇನ್ನೊಬ್ಬರು ಹೇಳಿದರೆ ಕೇಳಲು ಹಿತವಲ್ಲ.
ಉದಾಹರಣೆಗೆ ಕರ್ಣಪರ್ವದ ಶಲ್ಯನಾಗಿ ಕೃಷ್ಣನೊಂದಿಗೆ ಸಂಭಾಷಿಸುವಾಗ, ‘ಮರ ಹತ್ತುವವರು ಮೀನು ಹಿಡಿಯಬಾರದು. ಮೀನು ಹಿಡಿಯುವವರು ಮರ ಹತ್ತಬಾರದು’ ಎಂದು ಮಹಾಬಲರು ಹೇಳುತ್ತಿದ್ದರು. ಇದು ವೃತ್ತಿ ಮತ್ತು ಪ್ರವೃತ್ತಿಯ ವಿಶ್ಲೇಷಣೆ ಮಾಡುತ್ತ ತಿಳಿಹಾಸ್ಯದಿಂದ ಅವರು ಆಡಿದರೇ ಚೆಂದ. ಗನಗಾಂಪ, ಶುದ್ಧ ಟೊಣಪನಂತಹ ಪದಗಳನ್ನೂ ಬಳಸುತ್ತಿದ್ದರು. ಪರ್ವದ ಭೀಷ್ಮನಾಗಿ ಸಿಟ್ಟಿಗೆದ್ದ ಕೃಷ್ಣನನ್ನು ತಣಿಸುವಾಗ ‘ಸ್ವಲ್ಪ ಏರುಪಾಕ ಆಯಿತೋ ಹ್ಯಾಗೆ’ ಎನ್ನುತ್ತ ಛೇಡಿಸುತ್ತಿದ್ದರು. ಅಂದರೆ ಇಂಥ ಅನೇಕ ಪದಪುಂಜವನ್ನು ಯಕ್ಷಗಾನೀಯವಾಗಿ ಕಟ್ಟಿ ಕೊಡುವುದು ಅವರಿಗೆ ಮಾತ್ರ ಸಾಧ್ಯವಿತ್ತು. ಹೊಂಬಾಣ ದೀವಿಗೆ ಹಿಡಿದು ಅರ್ಧರಾತ್ರಿಯಲ್ಲಿ ತನ್ನ ಆಲಯಕ್ಕೆ ಬಂದ ಸುಯೋಧನನ್ನು ಕಂಡ ಮಹಾಬಲರ ಭೀಷ್ಮ, ಯಾರು ಎಂದು ಪ್ರಶ್ನಿಸಿ ‘ಮೇದಿನಿಪ ಬಾ ಎನುತ ...’ ಪದ್ಯದ ಎತ್ತುಗಡೆಗೆ ತೊಡಗಿದಾಗ ಎದೆ ಝಲ್ಲೆನ್ನುತ್ತಿತ್ತು. ವಿಜಯದ ಭೀಷ್ಮನಾಗಿ ‘ಸುತ್ತಲು ನೋಡುತ ಗಂಗಾ ತರಳನು’ ಎಂದು ದಿಟ್ಟಿಸಿದರೆ ಚಂಡ ಮಾರುತವೇ ಅಪ್ಪಳಿಸಿದಂತಾಗುತ್ತಿತ್ತು. ಸಂಧಾನದ ಕೌರವ, ಸುಭದ್ರಾ ಕಲ್ಯಾಣದ ಬಲರಾಮ, ರಕ್ತರಾತ್ರಿಯ ಅಶ್ವತ್ಥಾಮನಂತಹ ಮಹಾಬಲರ ಪಾತ್ರಗಳು ಮತ್ತೊಬ್ಬರಿಗೆ ಒಲಿದಿಲ್ಲ. ಅವರಿಂದ ಕಲಿತವರು ಅಷ್ಟನ್ನೇ ಮಾಡಿ ತೋರಿಸುವುದಕ್ಕೆ ಸೀಮಿತರಾಗಿದ್ದಾರೆ. ಹೊಸ ಮಾದರಿ ಸೃಷ್ಟಿ ಆಗಿಲ್ಲ.
ಮಹಾಬಲ ಹೆಗಡೆ ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದವರು. ಆದರೆ, ಸಂಜೆ ವೇಳೆ ಮನೆಯಲ್ಲಿ ಕುಳಿತು ಎಲೆಕ್ಟ್ರಾನಿಕ್ ಶ್ರುತಿ ಪೆಟ್ಟಿಗೆ ಇಟ್ಟುಕೊಂಡು ಹಾಡುವುದನ್ನು ಬಿಟ್ಟಿರಲಿಲ್ಲ. ಆಸಕ್ತರು ಹೋಗಿ ಮಾತಾಡಿಸಿದರೆ, ಕೊಂಚ ಹೊತ್ತಿನಲ್ಲಿ ಹಳೆಯ ನೆನಪಿಗೆ ಜಾರಿ ಲಹರಿಗೆ ಬರುತ್ತಿದ್ದರು. ತಮ್ಮಲ್ಲಿರುವ ಅನೇಕ ಸಂಗತಿಯನ್ನು ಮುಂದಿನ ತಲೆಮಾರಿಗೆ ಕೊಡಲು ಆಗಲಿಲ್ಲವೆಂಬ ಕೊರಗು ಅವರನ್ನು ಕಾಡುತ್ತಿತ್ತು. ಮಹಾಬಲ ಹೆಗಡೆ, ಶಂಭು ಹೆಗಡೆ ಜೋಡಿ ಯಕ್ಷಗಾನದಲ್ಲಿ ದಾಖಲಾದ ಅಮೃತ ಗಳಿಗೆ. ಶಂಭು ಹೆಗಡೆ ನಿಧರಾದಾಗಲೂ ತಮ್ಮ ಪುತ್ರ ರಾಮ ಹೆಗಡೆ ಮನೆ, ಅಳಿಕೆಯಲ್ಲಿ ಮಹಾಬಲರು ಇದ್ದರು. ತಮಗಿಂತ ಸುಮಾರು ೧೨ ವರ್ಷ ಕಿರಿಯ ಸಹೋದರ ಇಲ್ಲ ಎನ್ನುವುದನ್ನು ಅವರು ಒಪ್ಪಿಕೊಂಡೇ ಇರಲಿಲ್ಲ. ಈಗ ಅವರೂ ಕಾಲನ ಕರೆಯಾಲಿಸಿ ತೆರಳುವುದರೊಂದಿಗೆ ಶುದ್ಧ ಸೊಗಡಿನ, ಶಿಷ್ಟ ಸೊಬಗಿನ ಯಕ್ಷಗಾನದ ಅಭಿರುಚಿ ಮೂಡಿಸಿದ ಜೋಡಿ ಕಲಾ ಕ್ಷಿತಿಜದಿಂದ ಮರೆಯಾಗಿದೆ.
ಶಂಭು ಹೆಗಡೆ ತೀರಿಕೊಂಡಿದ್ದು ಇಡಗುಂಜಿ ತೇರಿನ ದಿನ ರಥ ಸಪ್ತಮಿಯಂದು. ಮಹಾಬಲ ಹೆಗಡೆ ಏಕಾದಶಿಯ ಶುಭ ಸಂದರ್ಭದಂದು ವೈಕುಂಠದತ್ತ ಪ್ರಯಾಣ ಬೆಳೆಸಿದ್ದಾರೆ. ಇದೂ ಒಂದು ಸುಯೋಗವೆಂದೇ ಭಾವಿಸೋಣ. ಕಲೆಯ ಉನ್ನತ ಮೌಲ್ಯದ ಪ್ರತಿಪಾದಕರಾದ ‘ಮಹಾಬಲ’ರಿಗೆ ಸದ್ಗತಿ ದೊರಯಲೆಂದು ನೆನೆಸುತ್ತ ಈ ಅಕ್ಷರಾಂಜಲಿ.
(ಮಹಾಬಲ ಹೆಗಡೆ ನಿಧನರಾದ ದಿನ ೨೯-೧೦-೨೦೦೯ ರಂದು ವಿಜಯ ಕರ್ನಾಟಕಕ್ಕಾಗಿ ಬರೆದಿದ್ದ ನುಡಿನಮನ)
0 comments:
Post a Comment