
ಆ ವ್ಯಕ್ತಿ ಚಿಂತಿಸಲಿಲ್ಲ. ನೇರ ದುರ್ಗಾಕೇರಿಯ (ಹೊನ್ನಾವರ) ಕಾಸಿಂ ಸಾಯ್ಬನ ಬೀಡಿ ಅಂಗಡಿಗೆ ತೆರಳಿ ಬಾಗಿಲು ತಟ್ಟಿದ. ವಿಷಯ ತಿಳಿಸಿದಾಗ ಕಾಸಿಂ ದುಡ್ಡು ತೆಗೆದಿಟ್ಟ. ಸಾಮಾನ್ಯರಾಗಿದ್ದರೆ ಅದನ್ನು ಎತ್ತಿಕೊಂಡು ಹೊರಡುತ್ತಿದ್ದರು.
ಆದರೆ ಹಣದ ಅಗತ್ಯವಿದ್ದವ ಅಪ್ಪಟ ಸ್ವಾಭಿಮಾನಿ. ಬ್ಯಾಡ್ವೋ ಸೈಬ. ಒಂದಾಣೆಯಷ್ಟು ಬೀಡಿ ಕಟ್ಟಿ ಕೊಡ್ತೇನೆ ಎಂದ. ಬೀಡಿ-ಗೀಡಿ ಏನೂ ಬ್ಯಾಡ ಮಾಣಿ, ರೊಕ್ಕ ತಗಂಡು ಹೋಗೆಂದು ಕಾಸಿಂ ಜಬರ್ದಸ್ತ್ ಮಾಡಿದ. ಈ ಮನುಷ್ಯ ಬಿಡಬೇಕಲ್ಲ... ಹಠಮಾರಿಯೂ ಹೌದು. ಬೀಡಿ ಸುತ್ತುವುದಕ್ಕೇ ಕುಳಿತ. ಹತ್ತು ಜಾಸ್ತಿಯೇ ಬೀಡಿ ಕಟ್ಟಿದ. ನಂತರ ದುಡ್ಡು ತೆಗೆದುಕೊಂಡು ದೋಣಿ ಏರಿದ.
ಹೀಗೆ ತಾಪತ್ರಯ ಪಟ್ಟುಕೊಂಡೂ ತನ್ನತನ ಉಳಿಸಿಕೊಂಡವರು ಯಕ್ಷಗಾನದ ‘ಲೆಜೆಂಡ್’ ಕೆರೆಮನೆ ಶಿವರಾಮ ಹೆಗಡೆ. ಶಿವರಾಮ ಹೆಗಡೆ ನೆನಪಾದಾಗ ಸ್ವಾತಂತ್ರ್ಯ ಪೂರ್ವದ ಈ ಘಟನೆಯನ್ನು ಉತ್ತರ ಕನ್ನಡದ ಹಳಬರು ಈಗಲೂ ಮೆಲುಕು ಹಾಕುತ್ತಾರೆ. ಜತೆಗೇ ಅವಂಗೆ ಸಿಕ್ಕಾಪಟ್ಟೆ ‘ಶರ್ಕೆ’ (ಹಠ) ಇತ್ತು. ಎಂತಹ ಮೇಳ ಕಟ್ಟಿದ. ರಾಷ್ಟ್ರಪ್ರಶಸ್ತಿಗೂ ಭಾಜನನಾದ ಎಂದು ಸೇರಿಸುತ್ತಾರೆ.
ಕೆರೆಮನೆ ಶಿವರಾಮ ಹೆಗಡೆ ಅಂದರೇ ಹಾಗೆ. ಬದುಕನ್ನು ಸವಾಲಾಗಿ ಸ್ವೀಕರಿಸಿದ ಅವರೆಂದೂ ಇನ್ನೊಬ್ಬರ ಋಣಕ್ಕೆ ಬಿದ್ದವರಲ್ಲ. ಎಳೆಯ ಪ್ರಾಯದಲ್ಲೇ ಅವರೊಬ್ಬ ಛಲಗಾರ. ಬೀಡಿ ಕಟ್ಟಿ ದೋಣಿ ದಾಟಿದಂತಹುದೇ ಹಲವು ದೃಷ್ಟಾಂತಗಳು ಅವರ ಬಗ್ಗೆ ಇವೆ.
ಶಿವರಾಮ ಹೆಗಡೆ ಬದುಕುಳಿದಿದ್ದರೆ ಅವರ ನೂರರ ವಯಸ್ಸಿನ ಒಡ್ಡೋಲಗವನ್ನು ಯಕ್ಷಲೋಕ ಕಾಣಬಹುದಿತ್ತು. ಆ ಭಾಗ್ಯವಿಲ್ಲದಿದ್ದರೂ ಹೆಗಡೆಯವರ ಕೀರ್ತಿಸೌಧದಂತಿರುವ ‘ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ’ಯೀಗ ೭೫ ವಸಂತ ಪೂರೈಸಿದೆ. ಮೇಳವನ್ನು ಎತ್ತರಕ್ಕೆ ಬೆಳೆಸಿದವರು ಶಿವರಾಮರ ಪುತ್ರ ಕೆರೆಮನೆ ಶಂಭು ಹೆಗಡೆ. ದುರಾದೃಷ್ಟವೆಂದರೆ ಈ ಹರುಷದ ಹದಗಾಲದಲ್ಲಿ ಅವರೂ ಇಲ್ಲ. ಮಂಡಳಿಯ ವರಬಲದಂತಿದ್ದ ಮಹಾಬಲ ಹೆಗಡೆಯವರೂ ಈ ಲೋಕದಲ್ಲಿಲ್ಲ.
ನಿಜಕ್ಕೂ ಯಕ್ಷಗಾನದ ತೇರಿನಂತಹ ಕೆರೆಮನೆಯ ಇಡಗುಂಜಿ ಮೇಳಕ್ಕೆ ಇದೊಂದು ಬಗೆಯ ಸೂತಕದ ಕಾಲ. ವರ್ಷದ ಅವಧಿಯಲ್ಲಿ ಶಂಭು-ಮಹಾಬಲ ಹೆಗಡೆ ಅಗಲಿದ ದುಃಖದಲ್ಲಿ ಮಂಡಳಿಯಿದೆ. ನೋವು, ನಲಿವುಗಳನ್ನು ಕಂಡುಂಡೇ ಮೇಳವು ಯಾಣದ ಭೈರವೇಶ್ವರ ಶಿಖರದಷ್ಟು ಅಚಲವಾಗಿ ನಿಂತಿದೆ. ಸಾಂಸ್ಕೃತಿಕ ಜವಾಬ್ದಾರಿ ಹೊತ್ತುಕೊಂಡ ಕಲಾತಂಡವೊಂದು ಕರ್ತವ್ಯ ಮರೆಯುವಂತಿಲ್ಲ. ಹೀಗಾಗಿ ಅಮೃತ ಮಹೋತ್ಸವಕ್ಕೆ ಅಣಿಯಾಗಿದೆ. ಇದು ಹೊಸ ಹುಡುಕಾಟ, ಮಥನದ ನಿರೀಕ್ಷೆಯದು. ಅದಕ್ಕಾಗಿ ಈ ಅಕ್ಷರಾರೋಹಣ ಔಚಿತ್ಯವೆನಿಸಿತು.
ಆದರ್ಶದ ಹಾದಿ

ಆದರ್ಶ, ಮೌಲ್ಯ, ಕಲಾತ್ಮಕ ಧೋರಣೆ, ಸುಧಾರಣೆಯ ವಿಷಯದಲ್ಲಿ ಕೆರೆಮನೆ ಮೇಳವೇ ಮಾದರಿ. ಅದು ಇಂದಿಗೂ ಉಳಿದಿದ್ದರೆ ಶಿವರಾಮ ಹೆಗಡೆ ಹಾಕಿದ ಅಡಿಪಾಯ, ಶಂಭು ಹೆಗಡೆಯವರ ಶ್ರಮವೇ ಕಾರಣ. ‘ಕೆರೆಮನೆ ಮೇಳದ ಚೌಕಿಯಲ್ಲಿ (ಗ್ರೀನ್ ರೂಮ್) ಹೆಣ್ಣು ಮಕ್ಕಳು ಯಾವ ತೊಂದರೆಯಿಲ್ಲದೆ ಮಲಗಿಕೊಳ್ಳಬಹುದು’ ಎನ್ನುವ ಮಾತೊಂದಿದೆ. ಇದು ಉತ್ಪ್ರೇಕ್ಷೆಯದ್ದೇನೂ ಅಲ್ಲ. ಮೇಳ ಮರ್ಯಾದಸ್ಥರದ್ದು ಎನ್ನಲು ಅನುಭವಿಗಳು ಕೊಟ್ಟ ಪ್ರಶಸ್ತಿ ಇದೆನ್ನಲಡ್ಡಿಯಿಲ್ಲ. ಅಂದರೆ ಆಟಕ್ಕೆ ಹೋದ ಚಿಕ್ಕ ಮಕ್ಕಳ ತಾಯಂದಿರು ಹಾಲುಣಿಸಲು, ಅನಾರೋಗ್ಯಕ್ಕೆ ತುತ್ತಾದವರು ಚೌಕಿಗೆ ಹೋಗಿ ವಿಶ್ರಾಂತಿ ಮಾಡಿದ ನಿದರ್ಶನಗಳಿವೆ.
ದೂರದರ್ಶನದಲ್ಲಿ ಮೊದಲ ಬಾರಿ ಪ್ರದರ್ಶನ, ವಿದೇಶ ಯಾತ್ರೆ ಸೇರಿದಂತೆ ಹಲವು ಪ್ರಥಮಗಳಿಗೆ ಕಾರಣವಾಗಿದ್ದು ಕೆರೆಮನೆ ಮೇಳ. ಮೇಳ ಜನ್ಮವೆತ್ತಲು ಶಿವರಾಮರ ಹಠದ ಸ್ವಾಭಾವವೇ ಪ್ರೇರಣೆ. ಅವರು ವೇಷಧಾರಿಯಾಗಿ ಬೆಳಕಿಗೆ ಬರುತ್ತಿದ್ದಾಗ ವಿಶೇಷವಾಗಿ ಉತ್ತರ ಕನ್ನಡದಲ್ಲಿ ಯಕ್ಷಗಾನಕ್ಕೊಂದು ವ್ಯವಸ್ಥಿತ ಸಂರಚನೆಯೇ ಇರಲಿಲ್ಲ. ಒಮ್ಮೆ ಮುರ್ಡೇಶ್ವರದಲ್ಲಿ ಹತ್ತಾರು ಆಟ ಆಡಲು ಹೋಗಿದ್ದರಂತೆ. ಅವರನ್ನು ಕರೆದುಕೊಂಡು ಹೋಗಿದ್ದ ಸ್ತ್ರೀವೇಷಧಾರಿ ಮೂರ್ನಾಲ್ಕು ಪ್ರದರ್ಶನವಾಗುತ್ತಿದ್ದಂತೆ, ಹೆಚ್ಚಿನ ವೇತನದ ಆಸೆಗೆ ಬಿದ್ದು, ಗುಂಡಬಾಳಕ್ಕೆ ಹೊರಟರಂತೆ. ಇದನ್ನೊಂದು ಆಭಾಸ, ಅಪಮಾನವೆಂದೇ ಭಾವಿಸಿದ ಹೆಗಡೆ ಅಂದೇ ಸ್ವಂತ ಮೇಳಕ್ಕೆ ಅಡಿಗಲ್ಲು ಹಾಕಿದರು. ಆ ಕಾಲದ ಶ್ರೇಷ್ಠ ಭಾಗವತ ವೆಂಕಟರಮಣ ಯಾಜಿ ಜೀವದ ಗೆಳೆಯನಂತೆ ಬೆನ್ನಿಗೆ ನಿಂತರು.
ಶಿವರಾಮ ಹೆಗಡೆ ಕಾಲದಲ್ಲಿ ಮೇಳದ ಬಹುದೊಡ್ಡ ಸಾಧನೆಯೆಂದರೆ ಸುಸಂಸ್ಕೃತರು, ವಿದ್ವಾಂಸರು, ಯಕ್ಷಗಾನೇತರ ಕ್ಷೇತ್ರದ ಸಹೃದಯರನ್ನು ಈ ಕಲೆಯೆಡೆಗೆ ಎಳೆತಂದಿದ್ದು. ಈ ಮೂಲಕ ಯಕ್ಷಗಾನಕ್ಕೊಂದು ಗೌರವದ ಕವಚ ತೊಡಿಸಿದ್ದು. ಶಂಭು ಹೆಗಡೆ ಇದನ್ನು ವಿಸ್ತರಿಸುತ್ತ ಹೋದರು. ಕಲಾವಿದ, ಯಜಮಾನ, ಹೊಸತನದ ಆವಿಷ್ಕಾರದ ಸೃಜನಶೀಲರಾಗಿ ಬಡಗು ತಿಟ್ಟಿನ ಸೊಬಗನ್ನು ಶಿಸ್ತುಬದ್ಧಗೊಳಿಸಿದರು. ಮಹಾಬಲ ಹೆಗಡೆ, ಗಜಾನನ ಹೆಗಡೆ, ನೆಬ್ಬೂರು ಭಾಗವತರೊಂದಿಗಿನ ಶಂಭು ಹೆಗಡೆಯವರ ಮೇಳ ಸುವರ್ಣ ಯುಗ ಕಂಡಿದೆ. ಯಕ್ಷಗಾನದ ಅಗ್ರೇಸರನಾಗಿ ಮೇಳವನ್ನು ಮುನ್ನಡೆಸಿದ ಶಂಭು ಹೆಗಡೆ, ಗುಣವಂತೆಯಲ್ಲಿ 'ದಿ. ಶಿವರಾಮ ಹೆಗಡೆ ರಂಗಮಂದಿರ' ಕಟ್ಟಿದ್ದಾರೆ. ಯಕ್ಷಗಾನ ಶಾಲೆಯೂ ಇದೆ. ಈ ಎಲ್ಲದರ ವಾರಸುದಾರಿಕೆಯೀಗ ಶಂಭು ಪುತ್ರ ಶಿವಾನಂದ ಹೆಗಡೆಯ ಹೆಗಲೇರಿದೆ.
ಇಡಗುಂಜಿ ಮೇಳದ ಬಗ್ಗೆ ಸಂಶೋಧನಾ ಗ್ರಂಥ (ಡಾ. ರಾಮಕೃಷ್ಣ ಜೋಶಿ) ಬಂದಿದೆ. ಶಂಭು ಹೆಗಡೆಯವರ ಕುರಿತೇ ಡಾ.ಜಿ.ಎಸ್. ಭಟ್ಟರು ಅಧ್ಯಯನ ಗ್ರಂಥ ಬರೆದಿದ್ದಾರೆ. ಮನೆತನದ ಮೂವರು ಮೇರು ಕಲಾವಿದರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸಂದಿದೆ. ಮಂಡಳಿ ತನ್ನ ಪ್ರತಿ ಹೆಜ್ಜೆ ಗುರುತನ್ನೂ ದಾಖಲಿಸುತ್ತಿದೆ. ಯಕ್ಷಗಾನದ ಇತಿಹಾಸದಲ್ಲೇ ಇದೊಂದು ಮೈಲುಗಲ್ಲು. ಈ ಸಂಭ್ರಮಕ್ಕೆ ಅಭಿಮಾನ ಪೂರ್ವಕ ಸೇಸೆಯ ಮಳೆಗರೆಯಬಹುದು.
ಹೆಗಲು ಕೊಟ್ಟವರು
ಇಡಗುಂಜಿ ಮೇಳದ ಸಾರಥ್ಯ ವಹಿಸಿದವರು ಕೆರೆಮನೆ ಬಂಧುಗಳು. ಅವರಿಗೆ ಹೆಗಲು ಕೊಟ್ಟವರು ಹಲವರು. ಪ್ರತಿಫಲದ ಅಪೇಕ್ಷೆಯಿಲ್ಲದೆ ಸ್ವಂತ ಮನೆಯಂತೆ ನಡೆದುಕೊಂಡು ಸಹಕರಿಸಿದವರಲ್ಲಿ ಹಣಗಾರು ನಾರಾಯಣ ಹೆಗಡೆ (ನೆಬ್ಬೂರು ಭಾಗವತರು) ಪ್ರಮುಖರು. ಇವರು ಶಿವರಾಮ ಹೆಗಡೆಯವರಿಗೂ ಪದ್ಯ ಹೇಳಿದ್ದಾರೆ. ಮಹಾಬಲ-ಶಂಭು-ಗಜಾನನ ಅವರಿ
ರಾತ್ರಿ ಆಟ, ಹಗಲು ಪ್ರಚಾರ
ಪೂರ್ಣ ಪ್ರಮಾಣದ ವ್ಯವಸಾಯಿ ಸ್ವರೂಪದಲ್ಲಿ ಮೇಳವಿದ್ದಾಗ, ರಾತ್ರಿಯಿಡೀ ಪದ್ಯ ಹೇಳಿದ ಭಾಗವತರು, ಬೆಳಗ್ಗೆ ಸ್ವಲ್ಪ ನಿದ್ರೆ ಮಾಡಿ ಪ್ರಚಾರಕ್ಕೆ ಹೋಗುತ್ತಿದ್ದರಂತೆ. ಮದ್ದಲೆಯ ಮೋಡಿಗಾರ ದುರ್ಗಪ್ಪ ಗುಡಿಗಾರ ಆಗ ಇವರೊಂದಿಗೆ ವಾಹನ ಚಾಲಕರಾಗಿ ತೆರಳುತ್ತಿದ್ದರು. ಅಷ್ಟೇ ಅಲ್ಲ. ಟೆಂಟ್ ಕಟ್ಟುವುದಕ್ಕೆ, ಕುರ್ಚಿ ಹಾಕುವುದಕ್ಕೂ ಈ ಸೂತ್ರದಾರ ನೆರವಾಗಿದ್ದಾರೆ. ಅಡುಗೆ ಭಟ್ಟರಿಗೂ ಸಹಾಯ ಮಾಡಿದ್ದುಂಟು. ಕೊಳಗಿ ಅನಂತ ಹೆಗಡೆ ಹಾಗೂ ಭಾಗವತರು ಈ ಕಾರ್ಯಕ್ಕೆ ಸದಾ ಸಿದ್ಧರಿರುತ್ತಿದ್ದರು.ಸ್ವತಃ ಸ್ಥಿತಿವಂತರಲ್ಲದ ಭಾಗವತರು ಮಂಡಳಿ ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿದ್ದಾಗ ಶಿರಸಿಯ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ತಮ್ಮದೇ ಖಾತೆಯಿಂದ ಸಾಲ ತೆಗೆಸಿಕೊಟ್ಟಿದ್ದೂ ಇದೆ. ಬಳಿಕ ಒಂದೇ ವರ್ಷದಲ್ಲಿ ಶಂಭು ಹೆಗಡೆ ಈ ಸಾಲ ತೀರಿಸಿದ್ದರು. ಭಾಗವತರಿಗೆ ಕಾಯಂ ಆಗಿ ಪದ್ಯ ಹೇಳುವಷ್ಟು ಆರೋಗ್ಯ ಈಗ ಇಲ್ಲ. ಮೇಳದ ಸಂಚಾಲಕರು ವಿಶೇಷ ಸಂದರ್ಭಗಳಲ್ಲಿ ಬಯಸಿದರೆ ಅವರು ಎಂದಿನ ಪ್ರೀತಿಯಿಂದಲೇ ಹೋಗಲು ತಯಾರಾಗುತ್ತಾರೆ. ಎಂತಹ ಕಠಿಣ ಸನ್ನಿವೇಶದಲ್ಲೂ ಮಂಡಳಿ ತೊರೆಯುವ, ಅಧಿಕ ಸಂಬಳದ ಆಸೆ ತೋರಿಸಿದ ಇನ್ನೊಂದು ಮೇಳಕ್ಕೆ ಜಿಗಿಯುವ ಆಲೋಚನೆಯನ್ನೂ ಮಾಡಿದವರಲ್ಲ ನೆಬ್ಬೂರು. ಹೆತ್ತ ತಾಯಿ ಮರಣಶಯ್ಯೆಯಲ್ಲಿರುವಾಗಲೇ ಮಂಡಳಿಯೊಂದಿಗೆ ಫ್ರಾನ್ಸ್ ಪ್ರವಾಸಕ್ಕೆ ಹೊರಟು ಕರ್ತವ್ಯ ಪ್ರಜ್ಞೆ ಮೆರೆದವರು. ಅಂತಹ ಭಾಗವತರನ್ನು ಮಾತನಾಡಿಸಿದರೆ, ಅವರ ಕಂಠ ಗದ್ಗದಿತವಾಗುತ್ತದೆ. ಈ ಸಿಂಹಾವಲೋಕನದಲ್ಲಿ ಶಂಭು-ಮಹಾಬಲ ಹೆಗಡೆಯವರಾದರೂ ಇರಬೇಕಿತ್ತು. ಶಿವಾನಂದನ ಪ್ರಯತ್ನಕ್ಕೆ ಫಲ ಸಿಗಲಿ. ಮಂಡಳಿಯ ವೈಭವದ ಮೆರಗು ಇಮ್ಮಡಿಸಲಿ ಎಂದು ಆಶಿಸಿ ಮೌನಕ್ಕೆ ಶರಣಾಗುತ್ತಾರೆ.
ಅಮೃತ ಸಂಭ್ರಮ
(ವಿಜಯ ಕರ್ನಾಟಕ ಲವಲವಿಕೆಯಲ್ಲಿ ಈ ಲೇಖನ ಪ್ರಕಟವಾಗಿದೆ. ಚಿತ್ರ ಕ್ರಪೆ : ಶಿವಾನಂದ ಹೆಗಡೆ ಕೆರೆಮನೆ ಹಾಗೂ ಬಾಲು ಮಂದರ್ತಿ)