ಕೊಂಡದಕುಳಿ ಅವಳಿ, ಶತಮಾನ ಸಂಭ್ರಮದಲ್ಲಿ

ಭಾನುತನುಜ ಭಳಿರೇ...’ ಎಂದು ಮಟ್ಟೆ ತಾಳದ ಗತ್ತಿನಲ್ಲಿ ಮಾವಿನ ಟೊಂಗೆ ಝಳಪಿಸುತ್ತ ಆ ವಾಲಿ ಬಂದರೆ ರಂಗಸ್ಥಳಕ್ಕೆ ಒಂದು ಕ್ಷಣ ನಡುಕ. ಈ ವೇಷಧಾರಿ, ಎದುರು ಪಾತ್ರಧಾರಿಯ ಅರ್ಧ ಶಕ್ತಿಯನ್ನೂ ಎಳೆದುಕೊಂಡು ಬಿಡುತ್ತಿದ್ದ. ಈ ವಾಲಿಗೆ ಸುಗ್ರೀವನಾಗಿ ಸಮದಂಡಿಯಾಗಿ ನಿಲ್ಲಬಲ್ಲವನು ಒಬ್ಬನೇ ಇದ್ದ - ಅವರ ಅವಳಿ ಸಹೋದರ.

ಹಾಗೆ ವಾಲಿ - ಸುಗ್ರೀವರಾಗಿ ಪ್ರಸಿದ್ಧರಾದವರು ರಾಮ ಹೆಗಡೆ ಕೊಂಡದಕುಳಿ ಮತ್ತು ಲಕ್ಷ್ಮಣ ಹೆಗಡೆ ಕೊಂಡದಕುಳಿ. ಯಕ್ಷಗಾನದ ಏಕೈಕ ‘ಅವಳಿ ಜೋಡಿ’ಯಾಗಿದ್ದ ಈ ಸಹೋದರರು ರಂಗದ ದಂತಕತೆ ಕೆರೆಮನೆ ಶಿವರಾಮ ಹೆಗಡೆ ಸಮಕಾಲೀನರು.

ಹಿಂದಿನ ತಲೆಮಾರಿನವರು ರಾಮ ಹೆಗಡೆ ಎಂದಾಗ ವಾಲಿಯ ಪಾತ್ರದ ಬಗ್ಗೆ ನೆನಪಿನ ಚೀಲ ಬಿಚ್ಚಿಡುತ್ತಾರೆ. ಯಾವಾಗಲೂ ಸುಗ್ರೀವನಾಗಿ ಜತೆಗಿರುತ್ತಿದ್ದವರು ತಮ್ಮ ಲಕ್ಷ್ಮಣ. ಒಮ್ಮೆ ಬೇರೊಬ್ಬ ಕಲಾವಿದ ಸುಗ್ರೀವನ ಪಾತ್ರ ಮಾಡಿ, ರಾಮ ಹೆಗಡೆ ಪ್ರವೇಶವಾಗುತ್ತಿದ್ದಂತೆ ಹೆದರಿ ಎಚ್ಚರ ತಪ್ಪಿ ಬಿದ್ದಿದ್ದರಂತೆ. ಆಟವೂ ನಿಂತು ಹೋಯಿತಂತೆ. ಲಕ್ಷ್ಮಣ ಹೆಗಡೆಯವರ ಹನುಮಂತನ ಪಾತ್ರಕ್ಕೆ ಒಳ್ಳೆಯ ಹೆಸರಿತ್ತು. ಈ ಜೋಡಿಯ ಭರತ-ಧರ್ಮಾಂಗದ, ಭೀಷ್ಮ-ಪರಶುರಾಮ, ಬಲಿ-ವಾಮನ, ರಾವಣ-ಕಾರ್ತವೀರ್ಯನ ಪಾತ್ರಗಳೂ ಜನಪ್ರಿಯವಾಗಿದ್ದವು.

ಯಕ್ಷಗಾನಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಕೆರೆಮನೆ ಶಿವರಾಮ ಹೆಗಡೆ ಆ ಕಾಲದಲ್ಲೇ ಸೀಮೋಲ್ಲಂಘನಗೈದ ಶ್ರೇಷ್ಠ ನಟ. ಶಿವರಾಮ ಹೆಗಡೆ ಅವರಂತೆ ಕೊಂಡದಕುಳಿ ಸಹೋದರರೂ ಸ್ವಂತ ಮೇಳ ಕಟ್ಟಿದ್ದರು. ಅದರ ವ್ಯಾಪ್ತಿ ಉತ್ತರ ಕನ್ನಡಕ್ಕೆ ಸೀಮಿತವಾಗಿತ್ತು. ಪ್ರಾಯಶಃ ಇದೇ ಕಾರಣದಿಂದ ಪ್ರಥಮ ದರ್ಜೆಯ ಕಲಾವಿದರಾಗಿದ್ದ ಕೊಂಡದಕುಳಿಯವರಿಗೆ ಹೆಚ್ಚಿನ ಅವಕಾಶ ದೊರಕಲಿಲ್ಲ. ಶೈಲಿಯ ದೃಷ್ಟಿಯಿಂದ ನೋಡಿದರೆ ಇವರದ್ದು ಅಖಂಡವಾಗಿ ಮುಂದುವರಿದಿಲ್ಲ. ರಾಮ-ಲಕ್ಷ್ಮಣರ ಮಕ್ಕಳು ರಂಗಕ್ಕೆ ಬರಲಿಲ್ಲ. ಮೊಮ್ಮಕ್ಕಳ ಕಾಲಕ್ಕೆ ಇದು ಮತ್ತೆ ಚಲನಶೀಲತೆ ಕಂಡುಕೊಂಡಿದೆ.

ಹೀಗಾಗಿ ರಾಮ-ಲಕ್ಷ್ಮಣರಿಂದ ಬಂದ ಶೈಲಿಯನ್ನು ಸಮಗ್ರವಾಗಿ ಅವಲೋಕಿಸಲು ಸಾಧ್ಯವಿಲ್ಲ. ಅವರು ರಂಗದಲ್ಲಿದ್ದ ಸಂದರ್ಭದ ಯಾವ ಡಾಕ್ಯುಮೆಂಟರಿಯೂ ಲಭ್ಯವಿಲ್ಲ. ವಿಭಿನ್ನ ವೇಷಗಳ ಛಾಯಾಚಿತ್ರಗಳೂ ಇಲ್ಲ. ಆದರೆ ಕೊಂಡದಕುಳಿ ಅವಳಿ ಸಹೋದರರು ಗತ್ತು, ಗಾಂಭೀರ್ಯದ ಪಾತ್ರಗಳಿಗೆ ಜೀವ ತುಂಬಿದ್ದರು. ವೈಯಕ್ತಿಕ ಬದುಕಿನಲ್ಲೂ ಆದರ್ಶದ ಪ್ರತಿರೂಪವಾಗಿದ್ದ ಪ್ರಜ್ಞಾವಂತ ಕಲಾವಿದರಾಗಿದ್ದರು. ರಂಗದ ಗುಣಾತ್ಮಕ ಬೆಳವಣಿಗೆಗೆ ಸಹಕಾರಿಯಾದರೆಂದು ಮುಕ್ತ ಮನಸ್ಸಿನಿಂದ ಹೇಳಬಹುದು.

ರಾಮ ಹೆಗಡೆ ಮೊಮ್ಮಗ, ರಾಮಚಂದ್ರ ಹೆಗಡೆ ಕೊಂಡದಕುಳಿ ಯಕ್ಷಗಾನದಲ್ಲಿ ಯಾವ ಪಾತ್ರವನ್ನೂ ಮಾಡಬಲ್ಲ ಉತ್ಕೃಷ್ಟ ಕಲಾವಿದ. ಲಕ್ಷ್ಮಣ ಹೆಗಡೆ ಮೊಮ್ಮಕ್ಕಳೂ ಹವ್ಯಾಸಿ ವೇಷಧಾರಿ ಗಳಾಗಿ, ತಾಳಮದ್ದಲೆಯ ಅರ್ಥಧಾರಿಗಳಾಗಿ ಯಶ ಕಾಣುತ್ತಿದ್ದಾರೆ. ಆಧುನಿಕ ಸೌಕರ್ಯದ ಗಾಳಿಯೂ ಸೋಂಕದ ಕಾಲದಲ್ಲಿ ಯಕ್ಷಗಾನಕ್ಕಾಗಿ ಜೀವ ತೇಯ್ದ ಅಜ್ಜಂದಿರ ಶ್ರಮ ಮೊಮ್ಮಕ್ಕಳ ಮೂಲಕ ಸಾರ್ಥಕತೆಯೆಡೆಗೆ ಸಾಗುತ್ತಿದೆ.

ಶತಮಾನ ಸಂಭ್ರಮ

ದಿ. ರಾಮ-ಲಕ್ಷ್ಮಣ ಹೆಗಡೆ ಕೊಂಡದಕುಳಿ ಸಹೋದರರ ಜನ್ಮ ಶತಮಾನೋತ್ಸವ ಸಮಾರಂಭವು ಈ ತಿಂಗಳ ೫ ರಂದು ಶನಿವಾರ, ಉಡುಪಿ ರಾಜಾಂಗಣದಲ್ಲಿ ನಡೆಯಲಿದೆ. ರಾಮಚಂದ್ರ ಹೆಗಡೆ ನೇತೃತ್ವದ ಪೂರ್ಣಚಂದ್ರ ಮಂಡಳಿಯ ದಶಮಾನ ಸಂಭ್ರಮವೂ ಇದರೊಂದಿಗೆ ಇದೆ. ಅಜ್ಜಂದಿರ ನೆನಪಿನ ಸ್ಮರಣ ಸಂಚಿಕೆಯೂ ಸಾಂಕೇತಿಕವಾಗಿ ಬಿಡುಗಡೆಯಾಗಲಿದೆ. ಮಧ್ಯಾಹ್ನ ೩ ಕ್ಕೆ ಕಾರ್ಯಕ್ರಮ ಆರಂಭ.
(ವಿಕ ಲವಲವಿಕೆಯಲ್ಲಿ ಪ್ರಕಟವಾದ ಲೇಖನ)

0 comments:

Post a Comment

Last Posts