ಯಕ್ಷಗಾನದ ಮಾದರಿ ಡಿವಿಡಿ ‘ಇಡಗುಂಜಿಯಲ್ಲಿ ಶ್ರೀರಾಮ ನಿಜ ನಿರ್ಯಾಣ’ ಇನ್ನೂ ಇವೆ, ದರ್ಶನ ಯಾವಾಗ ?


ಯಕ್ಷಗಾನಕ್ಕೆ ಅವರೇ ಮಾದರಿ. ಅವರೇನೇ ಮಾಡಿದರೂ ಅಲ್ಲೊಂದು ಶಿಸ್ತು, ಸೊಬಗು ಇರುತ್ತದೆ ಎಂಬ ಮಾತು ಕೆರೆಮನೆಯವರ ಬಗ್ಗೆ ಆಗಾಗ ಕೇಳಿ ಬರುತ್ತದೆ. ಡಿವಿಡಿ ತಯಾರಿಕೆ ವಿಚಾರದಲ್ಲೂ ಇದು ನಿಜವಾಗಿದೆ.

ಇಡಗುಂಜಿಯ ಆರಾಧ್ಯ ದೇವ ಶ್ರೀಮಹಾಗಣಪತಿ ಸನ್ನಿಧಾನದಲ್ಲಿ (ತೇರಿನ ದಿನ) ‘ಸೀತಾ ವಿಯೋಗ’ದ ರಾಮನ ಪಾತ್ರ ಮಾಡಿದ್ದ ಶಂಭು ಹೆಗಡೆಯವರು ಅಲ್ಲಿಯೇ ಕೊನೆಯುಸಿರೆಳೆದಿದ್ದು ಗೊತ್ತಿದೆ. ಆ ಆಟದ ಡಿವಿಡಿಯನ್ನು ಅವರ ಮಗ ಶಿವಾನಂದ ಹೆಗಡೆ ಹೊರ ತಂದಿದ್ದಾರೆ. ಅದು ಇತ್ತೀಚೆಗೆ ಗುಣವಂತೆಯಲ್ಲಿ ನಡೆದ ಕೆರೆಮನೆ ಮೇಳದ ಅಮೃತ ಮಹೋತ್ಸವದಲ್ಲಿ ಬಿಡುಗಡೆ ಆಗಿದೆ. ‘ಇಡಗುಂಜಿಯಲ್ಲಿ ಶ್ರೀರಾಮ ನಿಜ ನಿರ್ಯಾಣ’ ಹೆಸರಿನಲ್ಲಿ ಈ ಡಿವಿಡಿ ಸಿದ್ಧಗೊಂಡಿದೆ.

ಯಕ್ಷಗಾನದ ಅದೆಷ್ಟೋ ಸಿ.ಡಿ/ ಡಿವಿಡಿಗಳು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿವೆ. ಅವೆಲ್ಲವುಕ್ಕಿಂತ ಭಿನ್ನ ಎಂಬುದೇ ಈ ಡಿವಿಡಿಯ ವಿಶೇಷತೆ. ಡಾಕ್ಯುಮೆಂಟರಿ ಮಾಡುವುದರಲ್ಲಿ ಕೆರೆಮನೆಯವರು ಎತ್ತಿದ ಕೈ. ಅದಕ್ಕೆ ಕಾರಣ ಅವರ ಒಡನಾಟ, ಅನುಭವ. ಡಾ. ಶಿವರಾಮ ಕಾರಂತರಂತೆ ವಿಶಾಲ ನೆಲೆಯಲ್ಲಿ ಚಿಂತನೆ ಮಾಡಿದವರು ಕೆರೆಮನೆಯವರು. ಸ್ವತಃ ಕಲಾವಿದರಾಗಿ ಯಕ್ಷಗಾನವನ್ನು ತಳಸ್ಪರ್ಷಿಯಾಗಿ ಮೈಗೂಡಿಸಿಕೊಂಡು ಅದನ್ನು ದೇಶದ ಇತರ ಕಲಾ ಪ್ರಕಾರಗಳೊಂದಿಗೆ ಅಳೆದು ನೋಡಿದವರು ಕೆರೆಮನೆ ಬಂಧುಗಳು. ಅವರು ‍ಯಾರದೋ ಒತ್ತಡ, ಭಿಡೆಯಕ್ಕೆ ಮಣಿಯುವವರೂ ಅಲ್ಲ. ಹಾಗಾಗಿ ಅವರ ಯಾವ ಪ್ರಸಂಗಗಳ ‘ಬೆಳ್ಳಿತಟ್ಟೆ’ಗಳೂ (ಸಿ.ಡಿ) ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಅಚ್ಚುಕಟ್ಟುತನ, ವೃತ್ತಿಪರತೆಯಿಲ್ಲದ ಡಿವಿಡಿಗಳು ಬೇಡ ಎಂಬುದೇ ಶಂಭು ಹೆಗಡೆಯವರ ನಿಲುವಾಗಿತ್ತು.

ಸೈದ್ಧಾಂತಿಕವಾಗಿ ಈ ವಾದ ಒಪ್ಪುವಂಥದ್ದು. ಆದರೆ ಮಹಾಬಲ ಹೆಗಡೆ, ಶಂಭು ಹೆಗಡೆ ಜೋಡಿಯ ಸಿ.ಡಿಗಳು ಇಲ್ಲದಿರುವುದು ಐತಿಹಾಸಿಕ ಪ್ರಮಾದ. ಸಿ.ಡಿ ಯುಗ ಆರಂಭಗೊಂಡಾಗ ಮಹಾಬಲ - ಶಂಭು ಹೆಗಡೆ ಇನ್ನೂ ವೇಷ ಮಾಡುತ್ತಿದ್ದರು. ಮನಸ್ಸು ಮಾಡಿದ್ದರೆ ಅಂದಿನ ಪ್ರದರ್ಶನಗಳನ್ನು ಸರಿಯಾಗಿ ವೀಡಿಯೊ ಮಾಡಿ ದಾಖಲಿಸಬಹುದಿತ್ತು. ಆ ಕೆಲಸ ಆಗಲೇ ಇಲ್ಲ. ಮಾದರಿಯಾಗಿ ಉಳಿಸುವುದಕ್ಕಾದರೂ ಸ್ಟುಡಿಯೋದಲ್ಲಿಯೇ ಇದಕ್ಕಾಗಿ ಶೂಟಿಂಗ್ ಮಾಡಬಹುದಿತ್ತು. ಅದೂ ಕೈಗೂಡಿಲ್ಲ. ಈ ಮೇರು ಕಲಾವಿದರನ್ನು ಒಡಂಬಡಿಸುವ ಯತ್ನ ಸಫಲವಾಗಲಿಲ್ಲವೆಂದು ಕಾಣುತ್ತದೆ.

ಈ ಕೊರತೆಯನ್ನು ಗುಲಗಂಜಿಯಷ್ಟು ನೀಗಿಸುವ ರೀತಿಯಲ್ಲಿ ಇರುವುದು ಸೀತಾ ವಿಯೋಗದ ಡಿವಿಡಿ. ಇದರಲ್ಲಿ ಮಹಾಬಲ ಹೆಗಡೆ ಇಲ್ಲ. ಶಂಭು ಹೆಗಡೆಯವರ ಕಡೆಯ ವೇಷವೆಂಬ ದೃಷ್ಟಿಯಿಂದ ಮಹತ್ವ. ಮುಖ್ಯವಾಗಿ ಇದು ಡಿವಿಡಿ ಉದ್ದೇಶಕ್ಕೆ ಚಿತ್ರೀಕರಣಗೊಂಡದ್ದಲ್ಲ. ಆದರೆ ಆಡಿಯೊ, ವೀಡಿಯೊ ಗುಣಾತ್ಮಕವಾಗಿದೆ.
ಉತ್ತಮ ಡಾಕ್ಯುಮೆಂಟರಿ
ಡಾಕ್ಯುಮೆಂಟರಿ ರೂಪದಲ್ಲಿಯೇ ಶಿವಾನಂದ ಹೆಗಡೆ ಇದನ್ನು ಸಿದ್ಧ ಪಡಿಸಿದ್ದಾರೆ. ಡಿವಿಡಿಯ ಕವರ್ ಪೇಜ್ ಕಲಾತ್ಮಕವಾಗಿದೆ. ಇದರ ರಚನೆ ಅಪಾರ ಅವರದ್ದು. ‘ಭೀಮಸೇನ ಜೋಷಿ, ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನ್ಸೂರರಂತೆಯೇ ಶಂಭು ಹೆಗಡೆ ಕೂಡ ಕನ್ನಡದ ಒಬ್ಬ ಶ್ರೇಷ್ಠ ಕಲಾವಿದ’ ಎಂಬ ಡಾ.ಯು.ಆರ್. ಅನಂತಮೂರ್ತಿಯವರ ನುಡಿ ಅಚ್ಚಾಗಿರುವುದು ಇದರ ಘನತೆ ಹೆಚ್ಚಿಸಿದೆ. ಕ್ಲಾಸಿಕಲ್ ಕ್ಷೇತ್ರದ ಡಿವಿಡಿ ದೊರೆಯುವ ಪ್ರತಿಷ್ಠಿತ ಮಳಿಗೆಗಳಲ್ಲಿ ಇದನ್ನಿಟ್ಟರೆ ಕಣ್ಸೆಳೆಯುವಷ್ಟು, ಎತ್ತಿಕೊಳ್ಳುವಷ್ಟು ಆಕರ್ಷಣೀಯವಾಗಿದೆ.

ಆರಂಭದಲ್ಲಿ ಶಂಭು ಹೆಗಡೆಯವರ ಕೋರಿಯೋಗ್ರಫಿ ಗುರು ಡಾ. ಮಾಯಾರಾವ್ ಮಾತಾಡಿದ್ದಾರೆ. ನಂತರ ಡಾ. ಅನಂತಮೂರ್ತಿ ಅವರದ್ದು. ಅನಂತಮೂರ್ತಿಗಳು ಯಕ್ಷಗಾನವನ್ನು ನೋಡುವ ದೃಷ್ಟಿಕೋನವು ನಮಗೊಂದು ಬಗೆಯ ಹೊಸ ಹೊಳಹು ಕೊಡುತ್ತದೆ. ಬಳಿಕ ಶಂಭು ಹೆಗಡೆಯವರನ್ನು ಹತ್ತಿರದಿಂದ ಕಂಡಿರುವ ಯಕ್ಷಗಾನದವರೇ ಆದ ಡಾ.ಎಂ. ಪ್ರಭಾಕರ ಜೋಶಿ, ಶಂಭು ಹೆಗಡೆ ಒಬ್ಬ ಕಲಾವಿದ-ಸಂಘಟಕ-ಚಿಂತಕರಾಗಿ ಎಷ್ಟು ಎತ್ತರದಲ್ಲಿದ್ದರು ಎಂಬುದನ್ನು ವಿವರಿಸಿದ್ದಾರೆ. ಮಾತಿನ ಬರದಲ್ಲಿ ‘ಮೊದಲು ಸಾಲಿಗ್ರಾಮ ಮೇಳದಲ್ಲಿ ಕೆಲ ಪದ್ಯದ ಸಾಲ್ವನ ವೇಷ ಹಾಕಿದ್ದ ಶಂಭು ಹೆಗಡೆ, ಇಡಗುಂಜಿಯಲ್ಲಿ ಶ್ರೀರಾಮ ನಿರ್ಯಾಣದ ರಾಮನ ಪಾತ್ರ ಮಾಡುವಷ್ಟು...’ ಎಂಬಂತೆ ಹೇಳಿ ಬಿಟ್ಟಿದ್ದಾರೆ. ಕೊನೆಯ ಪ್ರದರ್ಶನದಲ್ಲಿ ಶಂಭು ಹೆಗಡೆಯವರು ಮಾಡಿದ್ದು ಸೀತಾ ವಿಯೋಗದ (ಲವಕುಶ) ರಾಮನ ಪಾತ್ರ. ನಿರ್ಯಾಣದ್ದಲ್ಲ. ಇದೊಂದು ವಾಕ್ಯ ಕಟಾವಾಗದೇ (ಎಡಿಟ್) ಉಳಿದುಕೊಂಡಿದೆ.

ಇದಾದ ಮೇಲೆ ಸೀತಾ ವಿಯೋಗದ ಪ್ರದರ್ಶನವನ್ನು ಡಿವಿಡಿಗೆ ಅಳವಡಿಸಲಾಗಿದೆ. ಶತ್ರುಘ್ನನ (ಶಿವಾನಂದ ಹೆಗಡೆ) ಸನ್ನಿವೇಶ ಜಾಸ್ತಿ ಇಲ್ಲ. ಶಂಭು ಹೆಗಡೆಯವರಿಗೆ ನುಡಿನಮನ ಎಂಬ ದೃಷ್ಟಿಯಿಂದ ಹೀಗೆ ಮಾಡಲಾಗಿದೆ. ರಾಮನ ಪಾತ್ರ ತೋರಿಸಲು ಒತ್ತು ಕೊಡಲಾಗಿದೆ. ‘ಏಳಿ ಪೋಗುವ ನಾವು ಮುನಿಪನಿದ್ದೆಡೆಗೆ...’ ಪದ್ಯದ ವರೆಗೆ. ನಮಗೆಲ್ಲ ತಿಳಿದಿರುವ ಹಾಗೆ ನೆಬ್ಬೂರು ಭಾಗವತರದ್ದೇ ಹಿಮ್ಮೇಳ. ಈ ಡಿವಿಡಿ ಯಕ್ಷಗಾನಾಸಕ್ತರ ಸಂಗ್ರಹದಲ್ಲಿ ಇರಲೇಬೇಕಾದುದು. ಮನಸ್ಸಿಗೆ ಬಂದಂತೆ ಸಿ.ಡಿ ಮಾಡುವವರೂ ಇದನ್ನೊಮ್ಮೆ ಸಂಯಮದಿಂದ ನೋಡುವುದು ಒಳಿತು. ಸದ್ಯ ಉತ್ತುಂಗದಲ್ಲಿರುವ, ಭರವಸೆ ಹುಟ್ಟಿಸಿರುವ ಕಲಾವಿದರೂ ಇದರಿಂದ ಕಲಿತುಕೊಳ್ಳಬೇಕಾದುದು ಬಹಳ ಇದೆ. ಅಂಥವರ ಕೈಕಾಲು ಗಟ್ಟಿ ಇರುವಾಗಲೇ ಇಂಥಹುದೊಂದು ದಾಖಲೆ ಮಾಡಿಕೊಳ್ಳುವುದಕ್ಕೆ ಯೋಚಿಸಿದರೆ ಶಾಶ್ವತವಾಗಿ ಉಳಿಯುತ್ತದೆ. ಮುಖ್ಯವಾಗಿ ಯಕ್ಷಗಾನದ ಪ್ರೋತ್ಸಾಹಕರು, ಕಲಾತ್ಮಕ ಧೊರಣೆ ಇರುವವರು ಈ ಬಗ್ಗೆ ಆಲೋಚನೆ ಮಾಡಬೇಕು.
ಕಪಾಟಿನಲ್ಲಿದ್ದರೇನು ಪ್ರಯೋಜನ ?
ಇನ್ನೊಂದು ಮಹತ್ವದ ಸಂಗತಿಯೆಂದರೆ, ಕೆರೆಮನೆಯವರ ಶ್ರೇಷ್ಠ ಕೃತಿಗಳ ಡಿವಿಡಿಗಳು (ಕಲಾತ್ಮಕವಾದವು) ಇಲ್ಲವೆನ್ನುವುದು ನಿಜ. ಆದರೆ ಮಹಾಬಲ ಹೆಗಡೆಯವರನ್ನೂ ಒಳಗೊಂಡಂತೆ ಇಡಗುಂಜಿ ಮೇಳದ ಸುವರ್ಣ ಯುಗದ ನೇರ ಪ್ರದರ್ಶನಗಳು (ಲೈವ್ ಶೋ) ಬಹುತೇಕ ಚಿತ್ರೀಕರಣಗೊಂಡಿವೆ. ಶಿವಾನಂ ಹೆಗಡೆ ಖುದ್ದು ಅದನ್ನು ಮಾಡಿಸಿ ಜೋಪಾನವಾಗಿಟ್ಟಿದ್ದಾರೆ ಎಂಬ ಸುದ್ದಿ ಪ್ರಚಲಿತದಲ್ಲಿದೆ. ಅದು ಸತ್ಯವೆಂಬ ವಿಶ್ವಾಸ ನನ್ನದ್ದೂ ಕೂಡ. ಅದನ್ನೆಲ್ಲ ಶಿವಾನಂದ ಹೀಗೆ ಡಿವಿಡಿ ರೂಪಕ್ಕೆ ಇಳಿಸುತ್ತಾರೋ ಇಲ್ಲವೋ ಗೊತ್ತಿಲ್ಲ.
ಆದರೆ ಅವೆಲ್ಲ ಕೆರೆಮನೆ ಮೇಳದ ಸ್ವತ್ತಾಗಿ ಕಪಾಟಿನಲ್ಲೇ ಇದ್ದರೆ ಏನು ಪ್ರಯೋಜನ ? ಹಾಗಾದರೆ ಮುಂದಿನ ತಲೆಮಾರು ಒತ್ತಟ್ಟಿಗಿರಲಿ, ಈಗಿನವರಿಗೂ ‘ಕೆರೆಮನೆ ಘರಾಣೆ’ ಬೆಳೆದು ಬಂದ ವೈಭವದ ಪರಿಯನ್ನು ಕಾಣುವ ಅವಕಾಶ ತಪ್ಪಿ ಹೋಗುತ್ತದೆ. ಹಾಗೆ ಮಾಡಿದರೆ ಶಿವಾನಂದ ಹೆಗಡೆ ಅದಕ್ಕೆ ನೇರ ಹೊಣೆಯಾಗುತ್ತಾರೆ. ಯಾಕೆಂದರೆ ಈಗ ಉತ್ತರ ಕೊಡುವ ಜವಾಬ್ದಾರಿ ಸ್ಥಾನದಲ್ಲಿ ಇರುವವರು ಅವರು. ಪ್ರಶ್ನಿಸುವ ಸ್ವಾತಂತ್ರ್ಯ ನಮಗೆ ಧಾರಾಳವಾಗಿ ಇದೆ.

ನಾವೆಲ್ಲ ಶಿವಾನಂದ ಹೆಗಡೆ ಅವರಲ್ಲಿ ಇದೆಯೆಂದು ಭಾವಿಸಿರುವ ಕೆರೆಮನೆಯವರ ಯಕ್ಷಗಾನಗಳ ವೀಡಿಯೊ ಪ್ರತಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬೇಕೆಂದು ನಾನು ಸಲಹೆ ಕೊಡುವುದಿಲ್ಲ. ಕಡೇ ಪಕ್ಷ ಅವನ್ನೆಲ್ಲ ಡಾಕ್ಯುಮೆಂಟರಿ ರೂಪದಲ್ಲಿಯೇ ಗುಣವಂತೆ ಕಲಾಕೇಂದ್ರದಲ್ಲಿಯೇ ಹಾಕಿ ತೋರಿಸಲಿ. ಪ್ರತಿ ವರ್ಷ ಇದಕ್ಕಾಗಿ ವಿಶೇಷ ದಿನಗಳನ್ನು ನಿಕ್ಕಿ ಮಾಡಲಿ. ಇದರಿಂದ ಅಭಿಮಾನಿಗಳು, ಕಲಾವಿದರು, ಕ್ಷೇತ್ರಕ್ಕೆ ಬರಲಿರುವ ಹೊಸ ಪ್ರತಿಭೆಗಳಿಗೂ ಅನುಕೂಲವಾಗುತ್ತದೆ. ಅಧ್ಯಯನಾಸಕ್ತರಿಗೂ ಅನುವು ಮಾಡಿ ಕೊಡಬೇಕು. ಇಲ್ಲದಿದ್ದರೆ ಯಕ್ಷಲೋಕ ಬೆರಗಾಗುವಂತೆ ಇಡಗುಂಜಿ ಮೇಳದ ಅಮೃತ ಮಹೋತ್ಸವ ಸಂಘಟಿಸಿದ ಶಿವಾನಂದ ಹೆಗಡೆಯವರನ್ನು ತನ್ನಲ್ಲಿರುವುದನ್ನು ಯಾರಿಗೂ ಹೇಳದ, ಯಾರಿಗೂ ಕೊಡಲೂಬಾರದು ಎಂಬ ನಂಬಿಕೆಯ ‘ಗಿಡಮೂಲಿಕೆ ವೈದ್ಯ’ನಂತೆ ನೋಡಬೇಕಾದ ಸಂದರ್ಭ ಬಂದೀತು.
(‘ಇಡಗುಂಜಿಯಲ್ಲಿ ಶ್ರೀರಾಮ ನಿಜ ನಿರ್ಯಾಣಡಿವಿಡಿ ಬೇಕಾದವರು ಶಿವಾನಂದ ಹೆಗಡೆ ಅವರನ್ನು ಸಂಪರ್ಕಿಸಿ : ೯೪೪೮೧೮೯೧೪೦ ಫೋಟೊ ಕೃಪೆ - ಜೀಕೆ ಹೆಗಡೆ)

1 comments:

ಕೊನೆಯ ಘಳಿಗೆಯಲ್ಲಿ ಆದ ಪ್ರಸಂಗ ಬದಲಾವಣೆ, ಸ್ವತ: ಶಂಭು ಹೆಗಡೆಯವರೇ ಆ ಪ್ರದರ್ಶನದ ದಾಖಲೀಕರಣ ಮಾಡಿಸಿದ್ದು, ನಿರ್ಯಾಣ (?) ನಡೆದ ಸ್ಥಳ ಇಡಗುಂಜಿ, ಮತ್ತು ಕೊನೆಯಲ್ಲಿ ಸಿ ಡಿ ಯಲ್ಲಿ ದಾಖಲಾದ ಪ್ರಸಂಗದ ಹೆಸರು (’ಶ್ರೀರಾಮ ನಿಜ(?) ನಿರ್ಯಾಣ’) - ಇವೆಲ್ಲ ಕೇವಲ ಕಾಕತಾಳೀಯವೇ ? ಕಲಾಭಿಮಾನಿಗಳು ದಡ್ಡರಲ್ಲ ಎಂಬುದು ನನ್ನ ಅನಿಸಿಕೆ.

 

Post a Comment

Last Posts