ಸಾವಿರ ಮಂಟಪ ಕಟ್ಟಿದ ಪ್ರಭಾಕರ


ಹೆಣ್ಣಿನ ಸೂಕ್ಷ್ಮ ಸಂವೇದನೆ ತೆರೆದಿಟ್ಟ ಗಂಡು ಸಾಹಸ
ಕರಾವಳಿಯ ಆ ಹುಡುಗ ಯೌವ್ವನದ ಉತ್ತುಂಗ ಶಿಖರ ಏರುತ್ತಿದ್ದ. ಸ್ತ್ರೀವೇಷ ಮಾಡಿಕೊಂಡು ರಂಗಸ್ಥಳಕ್ಕೆ ಹೋದರೆ ಯಾರಾದರೂ ಹಾರಿಸಿಕೊಂಡು ಹೋಗುವಂತಹ ಮೋಹಕ ರೂಪ. ಬೆನ್ನಿಗೆ ಅಂಟಿಕೊಂಡಿದ್ದ ಸ್ಟಾರ್ ಪಟ್ಟವೆಂಬ ಭ್ರಮೆ. ಎಲ್ಲಿಯೇ ಆಟವಾದರೂ ಮಂಟಪ ಬಂದ ದಾರಿ ಬಿಡಿ... ಎನ್ನುವಷ್ಟು ಜನಪ್ರಿಯತೆ.

ನಿಜಕ್ಕೂ ಅಂದು ಯಕ್ಷಗಾನಕ್ಕೆ ಬೇಕಾದ ದಂತದ ಗೊಂಬೆಯಂಥ ಅಂಗಸೌಷ್ಠವದ ಕಲಾವಿದ ಸಿಕ್ಕಿದ್ದ. ಅವನ ಅವಶ್ಯಕತೆ ಯಕ್ಷಗಾನದವರಿಗೂ ಇತ್ತು. ಆದರೆ, ಕಲಾವಿದನಿಗೆ ತನ್ನ ಬದುಕಿನ ಪಥ ಬದಲಿಸಿಕೊಳ್ಳುವ ಪ್ರಜ್ಞೆ ಜಾಗೃತವಾಗಿತ್ತು. ಹೀಗಾಗಿ ರಂಗದಿಂದಲೇ ವಿಮುಖನಾಗಿ ಬೆಂಗಳೂರು ಬಸ್ ಹತ್ತಿದ. ಆಗ ಅವನ ಕಿವಿಯಲ್ಲಿ ತಾನು ಕುಣಿದು ದಣಿಯುತ್ತಿದ್ದಾಗ ಪ್ರೇಕ್ಷಕರು ಹಾಕುತ್ತಿದ್ದ ಶಿಳ್ಳೆ, ಚಪ್ಪಾಳೆಗಳು ರಿಂಗಣಿಸುತ್ತಿದ್ದವು.

ಆದರೆ, ತಿರುಗಿ ಮೇಳಕ್ಕೆ ಹೋಗಿ ಬಿಡಲೇ ಎನ್ನುವ ದಂದ್ವವಿರಲಿಲ್ಲ. ಅವಡುಗಚ್ಚಿ ಇಷ್ಟಪಟ್ಟ ಉದ್ಯೋಗದಲ್ಲಿ ಬೆವರು ಸುರಿಸಿ ದುಡಿದ. ಮತ್ತೆ ಹತ್ತು ವರ್ಷ ವೃತ್ತಿರಂಗಕ್ಕೆ ಕಾಲಿಡಲೇ ಇಲ್ಲ. ಯಶಸ್ವಿ ಉದ್ಯಮಿಯೂ ಆದ. ‘ಮಂಟಪ ಐಸ್‌ಕ್ರೀಮ್’ ಮನೆಮಾತಾಯಿತು. ಕರಾವಳಿ, ಮಲೆನಾಡಿನವರು ಓಹೋ ನಮ್ಮ ಮಂಟಪರು... ಎನ್ನತೊಡಗಿದರು. ಇದು ಉಡುಪಿ ಜಿಲ್ಲೆಯ ಸಾಲಿಗ್ರಾಮದ ಪಾರಂಪಳ್ಳಿಯ (ಪಡುಕೆರೆ) ಸಾಮಾನ್ಯ ಕುಟುಂಬದ ಮಂಟಪ ಪ್ರಭಾಕರ ಉಪಾಧ್ಯರ ಬೆಳವಣಿಗೆಯ ಮೊದಲ ಹಂತ. ಮಂಟಪ ಬೆಂಗಳೂರಿನತ್ತ ಪ್ರಯಾಣ ಬೆಳೆಸದಿದ್ದರೆ, ಕೈಚಪ್ಪಾಳೆಯಲ್ಲಿ ತೇಲಿಹೂಗುವ ಸಾಧ್ಯತೆಯೇ ಜಾಸ್ತಿ ಇತ್ತು.

ಐಸ್‌ಕ್ರೀಮ್ ಅಂಗಡಿಯ ಮಾಲಕನಾಗಿ ನೆಲೆ ಕಂಡುಕೊಂಡ ಮಂಟಪ, ಪುನಃ ಗೆಜ್ಜೆ ಕಟ್ಟಿದರು. ೧೯೯೦ ರಿಂದ ೧೯೯೩ ರ ವರೆಗೆ ಚಿಟ್ಟಾಣಿಯವರ ಬಚ್ಚಗಾರು ಮೇಳದಲ್ಲಿ ಅತಿಥಿ ಸ್ತ್ರೀವೇಷಧಾರಿಯಾಗಿ ಅಕ್ಷರಶಃ ಮಿಂಚಿದರು. ಉದ್ಯಮ ಕ್ಷೇತ್ರದಲ್ಲಿದ್ದಾಗಲೂ ಕಲೆಯೆಡೆಗಿನ ಅಂತರ್ಗತವಾದ ಸೆಳೆತ, ಚಿಂತನೆಯಿಂದ ದೂರ ಸರಿದಿರಲಿಲ್ಲ.

ಹೀಗಾಗಿ ಪುನರಾಗಮನದಲ್ಲೂ ಮಂಟಪರ ಅಲೆ ಮೋಡಿಗೈಯ್ದಿತು. ಪ್ರೇಕ್ಷಕರು ಮಂಟಪರೇ ಮೋಹಿನಿ, ಮೇನಕೆ, ಚಿತ್ರಾಕ್ಷಿ, ಋಚಿಮತಿಯಾಗಿ ಬರಬೇಕೆಂದು ವರಾತ ತೆಗೆದರು. ವೈವಿಧ್ಯಮಯ ಪಾತ್ರ ನಿರ್ವಹಿಸಬೇಕೆಂಬ ಇಚ್ಛೆಯಿದ್ದರೂ ಜನ ಬಯಸುತ್ತಿದ್ದುದು ಶೃಂಗಾರ ಪ್ರಧಾನ ಹಾಗೂ ದಿಗಡದಿಮ್ಮಿಯಂಥ ವೇಷಗಳಲ್ಲೇ. ಮಂಟಪರೇ ಹೇಳುವಂತೆ ಅವರಿಗಾಗ ಆತ್ಮ ತೃಪ್ತಿಯಾಗಲಿಲ್ಲ. ತಮಗಾಗಿ ಕುಣಿಯಲಾರದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಮತ್ತೊಮ್ಮೆ ಬಣ್ಣ ಒರೆಸಿ ಉದ್ಯಮದೆಡೆಗೆ ಗಮನ ಕೊಟ್ಟರು.

ಹೊಸ ತಿರುವು, ಏಕವ್ಯಕ್ತಿಗೆ ನಾಂದಿ
ಆ ಹೊತ್ತಿಗೆ ಉತ್ತರ ಕನ್ನಡಕ್ಕೆ ಶತಾವಧಾನಿ ಡಾ.ಆರ್. ಗಣೇಶ್ ಅವರ ಆಗಮನವಾಗಿತ್ತು. ಶಿರಸಿ, ಕುಮಟಾ, ಯಲ್ಲಾಪುರ, ಸಿದ್ದಾಪುರ ಭಾಗದಲ್ಲಿ ಶತಾವಧಾನದ ಕಾರ್ಯಕ್ರಮ ಜೇನಿನ ಹನಿಯಂತೆ ಜಿನುಗಲಾರಂಭಿಸಿತ್ತು. ಅವಧಾನದೊಂದಿಗೆ ಕಾವ್ಯ-ಚಿತ್ರ-ಯಕ್ಷನೃತ್ಯವೆಂಬ ವಿನೂತನ ಪ್ರಯೋಗವೂ ಡಾ. ಗಣೇಶರ ಕಲ್ಪನೆಯಲ್ಲಿ ಬಂತು. ಅಲ್ಲಿಂದ ಮಂಟಪರ ಕಲಾ ಜೀವನಕ್ಕೆ ಬೇರೊಂದು ತಿರುವು ಸಿಕ್ಕಿತು. ಅವರೊಳಗಿನ ಹೆಣ್ಣು ಅರಳಿದ್ದು ಆವಾಗಲೇ. ಮೊದಲ ಮಳೆಗೆ ಹದಗೊಂಡ ಭೂಮಿಯಿಂದ ವರತೆ ಚಿಮ್ಮುವಂತೆ ‘ಏಕವ್ಯಕ್ತಿ ಯಕ್ಷಗಾನ’ವೆಂಬ ಪರಿಕಲ್ಪನೆ ಮೂರ್ತ ಸ್ವರೂಪ ಪಡೆದುಕೊಂಡಿತು.

ಶಿರಸಿಯ ಭೈರುಂಬೆಯಲ್ಲಿ ೨೦೦೦ ನೇ ಇಸವಿಯಲ್ಲಿ ಪ್ರಾರಂಭಗೊಂಡ ಏಕವ್ಯಕ್ತಿ ಪ್ರಯೋಗ ನಂತರ ನಾಡಿನ ಉದ್ದಗಲಕ್ಕೂ ಪ್ರದರ್ಶನಗೊಂಡಿದೆ. ಇದಕ್ಕೆ ಶಿಲೆ ಮಂಟಪ. ಶಿಲ್ಪಿ ಡಾ. ಗಣೇಶ್. ಜತೆಯಾಗಿ ಹಿಮ್ಮೇಳ ಒದಗಿಸಿದವರು ವಿದ್ವಾನ್ ಗಣಪತಿ ಭಟ್ (ಭಾಗವತರು), ಅನಂತಪದ್ಮನಾಭ ಪಾಠಕ್ (ಮದ್ದಲೆ), ಕೃಷ್ಣಯಾಜಿ ಇಡಗುಂಜಿ (ಚೆಂಡೆ). ಕೊಳಲುವಾದಕ ಎಚ್.ಎಸ್. ವೇಣುಗೋಪಾಲ್ ಸಾಂದರ್ಭಿಕವಾಗಿ ನೆರವಾಗಿದ್ದಾರೆ. ವೇಷಭೂಷಣ ಸಹಕಾರ ರಾಜಶೇಖರ ಹಂದೆ ಅವರದ್ದು. ಶಿಲೆಗೆ ಶಿಲ್ಪಿ ಎಂದೂ ವೈರಿಯಾಗಲಾರ ಎಂಬ ಮಾತಿನಂತೆ, ಮಂಟಪರನ್ನು ತಿದ್ದಿ ತೀಡಿದ ಶತಾವಧಾನಿ ಗಣೇಶ್, ಯಕ್ಷಗಾನದಲ್ಲಿ ಹೊಸ ಇತಿಹಾಸ ನಿರ್ಮಾಣಕ್ಕೆ ಕಾರಣಕರ್ತೃರಾದರು. ಹೀಗಾಗಿ ಮಂಟಪ, ಏಕವ್ಯಕ್ತಿಯ ಸಾವಿರದ ಪ್ರಯೋಗದತ್ತ ದಾಪುಗಾಲಿಟ್ಟಿದ್ದಾರೆ. ಈ ಸಂಭ್ರಮಕ್ಕೆ ಮೂಡಬಿದ್ರೆಯ ವಿದ್ಯಾಗಿರಿ ತೋರಣ ಕಟ್ಟಿಕೊಳ್ಳುತ್ತಿದೆ.

ಹೆಣ್ಣಿನ ಸೂಕ್ಷ್ಮ ಸಂವೇದನೆಯನ್ನು ತೆರಿದಿಟ್ಟದ್ದು ಏಕವ್ಯಕ್ತಿಯ ಪ್ರಥಮ ಅವತರಣಿಕೆ ಭಾಮಿನಿ. ಇದು ಸ್ತ್ರೀಯ ಚಿತ್ತವೃತ್ತಿ, ಚಾಂಚಲ್ಯವನ್ನೇ ಪ್ರಧಾನವಾಗಿಟ್ಟುಕೊಂಡು ಪ್ರದರ್ಶನಗೊಂಡ ರಂಗಕೃತಿ. ಬಳಿಕ ಕೃಷ್ಣಾರ್ಪಣ, ಯಕ್ಷದರ್ಪಣ, ಜಾನಕೀ ಜೀವನ, ಪ್ರಣಯ ವಂ‘ಚಿತೆ’ (ಅಂಬೆ), ಪೂತನಿ, ದಾಕ್ಷಾಯಿಣಿ, ಚಿತ್ರಾಂಗದಾ, ವಿಷಯೆ, ಪ್ರಭಾವತಿ, ಯಕ್ಷ ನವೋದಯ, ದಾಸ ದೀಪಾಂಜಲಿ, ವೇಣು ವಿಸರ್ಜನ ಏಕವ್ಯಕ್ತಿ ಪ್ರಯೋಗಗಳು ಬೆಳಗಿವೆ.

ಬಹಳ ಮುಖ್ಯವಾಗಿ ಮಂಟಪರೇ ತಿಳಿಸಿದಂತೆ, ಈ ಪ್ರಯೋಗಕ್ಕೆ ಇಳಿಯಲು ಹಿಂಜರಿದಿದ್ದರಂತೆ. ಅದಕ್ಕೆ ಕಾರಣ ವಯಸ್ಸು ನಲ್ವತ್ತು ದಾಟಿದ್ದು. ಕುಣಿಯುವುದು ಕಷ್ಟವೆಂಬ ಭಾವದಿಂದ. ಆದರೆ, ನೃತ್ತಾಭಿನಯಕ್ಕಿಂತ ನಾಟ್ಯಾಭಿನಯಕ್ಕೆ ಒತ್ತು ಕೊಟ್ಟು ಶುದ್ಧ ಸಾತ್ವಿಕ ಅಭಿನಯದೊಡನೆ ಸ್ತ್ರೀವೇಷದ ಪರಕಾಯ ಪ್ರವೇಶ ಮಾಡಬೇಕೆಂಬುದನ್ನು ತಿಳಿ ಹೇಳಿದ ಶತಾವಧಾನಿಗಳು ಶಾಸ್ತ್ರದ ಆಧಾರವನ್ನೂ ಒದಗಿಸಿದರು. ಅದಕ್ಕೊಪ್ಪಿದ ಮಂಟಪ, ಪದ್ಮಾ ಸುಬ್ರಹ್ಮಣ್ಯಂ ಶಿಷ್ಯೆ ಸುಂದರೀ ಸಂತಾನಂ ಅವರಿಂದ ನಾಟ್ಯಶಾಸ್ತ್ರದ ಚಾರಿ, ಮುದ್ರೆಗಳನ್ನು ಕಲಿತು ಯಕ್ಷಗಾನಕ್ಕೆ ತಂದರು. ವೇಷಭೂಷಣದಲ್ಲೂ ಆವರಣಕ್ಕೆ ಹೊಂದುವಂತೆ ಬದಲಾವಣೆ ಮಾಡಿಕೊಂಡರು. ಪರಿಣಾಮವಾಗಿ ಏಕವ್ಯಕ್ತಿ ಯಕ್ಷಗಾನ ಹೊಸದೊಂದು ದಾಖಲೆಯಾಯಿತು. ವಿದ್ವಜ್ಜನರು, ಸಂಗೀತ, ನಾಟ್ಯ, ಸಾಹಿತ್ಯ ಕ್ಷೇತ್ರದವರೂ ಆದರಿಸಿದರು. ಯಕ್ಷಗಾನೇತರ ವಲಯದ ಮನೆಯಂಗಳ, ಜಗುಲಿಯಲ್ಲೂ ಏಕವ್ಯಕ್ತಿ ಪ್ರದರ್ಶನಗಳಾಗಿವೆ. ಇಲ್ಲಿ ‘ನಡುಮನೆಯಲ್ಲಿ ಯಕ್ಷಗಾನ’ ಎನ್ನುವುದೂ ಹೊಸ ಆವಿಷ್ಕಾರ.

ಮಂಟಪರ ಏಕವ್ಯಕ್ತಿ ಪ್ರದರ್ಶನವನ್ನು ಒಂದು ಹಂತದಲ್ಲಿ ಮೂಕಿ ಯಕ್ಷಗಾನವೆಂದು ಮೂಗು ಮುರಿದವರೂ ಇದ್ದಾರೆ. ಮಾತಿನಲ್ಲಿ ಹೇಳುವುದನ್ನು ಅಭಿನಯದಲ್ಲೇ ಬಿಂಬಿಸುತ್ತಿದ್ದರಿಂದ ವಾಚಿಕಾಂಗವನ್ನು ಕಳಚಲಾಗಿತ್ತು. ಸಾಂಪ್ರದಾಯಿಕ ಪ್ರೇಕ್ಷಕರಿಗೆ ಇದು ಒಗ್ಗಿರಲಿಲ್ಲ. ನಂತರದ ಪ್ರಯೋಗಗಳಲ್ಲಿ ಔಚಿತ್ಯಕ್ಕನುಗುಣವಾಗಿ ತೀರ ಚುಟುಕಾಗಿ ಅರ್ಥಗಾರಿಕೆ ಸೇರಿಸಿಕೊಂಡಿದ್ದಿದೆ. ಅದೇನೇ ಇರಲಿ, ಪ್ರದರ್ಶನವನ್ನೇ ನೋಡದೇ ಆಡಿಕೊಂಡವರ, ಪೂರ್ವಗ್ರಹ ಪೀಡಿತರ ವ್ಯಂಗ್ಯ ನುಡಿಯ ಮಧ್ಯೆಯೂ ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಯಕ್ಷಗಾನ ಯಶಸ್ಸು ಗಳಿಸಿದ್ದೊಂದು ಅದ್ಭುತ. ಗಣೇಶ್ ಅವರ ನಿರ್ದೇಶನದಲ್ಲಿ ‘ವಿಜಯ ವಿಲಾಸ’ (ಕೊಂಡದಕುಳಿ-ಮಂಟಪ), ‘ಹಂಸ ಸಂದೇಶ’ (ಮಂಟಪ-ಸುಂದರೀ ಸಂತಾನಂ) ಯುಗಳ ಪ್ರಯೋಗಗಳೂ ಕ್ವಚಿತ್ತಾಗಿ ನಡೆದಿವೆ. ಕಲೆಯಿಂದ ಪ್ರತಿಫಲಾಪೇಕ್ಷೆ ಇಲ್ಲದೆ ನಡೆಸಿದ ಈ ಪ್ರಯತ್ನವು ಈ ತಲೆಮಾರಿನ ಒಂದು ಚಾರಿತ್ರಿಕ ಘಟ್ಟ ಎನ್ನಲು ಯಾವ ಮುಲಾಜೂ ಬೇಕಿಲ್ಲ.

‘ಜಾನಕೀ ಜೀವನ’ದಲ್ಲಿ ಚಿನ್ನದ ಜಿಂಕೆಯನ್ನು ಕಂಡು ಅದಕ್ಕಾಗಿ ಹಂಬಲಿಸುವ ಚಂಚಲ ಸ್ವಭಾವದ ಸೀತೆಯೇ ಬೇರೆ. ಅಗ್ನಿ ಪರೀಕ್ಷೆಗೆ ಒಳಗಾಗುವ ಪ್ರಭುದ್ಧ ನಾರಿ ಸೀತೆಯೇ ಬೇರೆ. ಇವೆರಡನ್ನೂ ಸಮರ್ಥವಾಗಿ ಅಭಿನಯಿಸಿ ತೋರಿಸಿದವರು ಮಂಟಪ. ಅವರ ವೇಷದಲ್ಲಿ ಗೋಪಿಕಾ ಸ್ತ್ರೀಯೊಂದಿಗೆ ಚೆಲುವ ಕೃಷ್ಣನೂ ಕಂಡಿದ್ದಾನೆ. ಮಂಟಪ ಯಕ್ಷಗಾನ ಕಲಿತಿದ್ದು ಉಡುಪಿ ಕೇಂದ್ರದಲ್ಲಿ. ಮೊದಲ ತಿರುಗಾಟವಾದದ್ದು ಕೆರೆಮನೆ ಮಹಾಬಲ ಹೆಗಡೆಯವರ ನಿರ್ದೇಶಕತ್ವದ ಕಮಲಶಿಲೆ ಮೇಳದಲ್ಲಿ. ಬಳಿಕ ಪೆರ್ಡೂರು (ಕಾಳಿಂಗ ನಾವುಡ), ಕೆರೆಮನೆ ಶಂಭು ಹೆಗಡೆಯವರ ಇಡಗುಂಜಿ ಮೇಳದಲ್ಲಿ ತಿರುಗಾಟ ಮಾಡಿದ್ದಾರೆ. ಮಹಾಬಲ ಹೆಗಡೆ, ಶಂಭು ಹೆಗಡೆ, ಚಿಟ್ಟಾಣಿ ಅವರಿಂದ ಹಿಡಿದು ಈಗಿನ ಯಾಜಿ, ಕೊಂಡದಕುಳಿ ಅವರಿಗೂ ನಾಯಕಿಯಾಗಿ ಪಾತ್ರ ಮಾಡಿದ್ದು ಮಂಟಪರ ಅಗ್ಗಳಿಕೆ.

ಸಾವಿರದಾಚೆಯ ನಿರೀಕ್ಷೆ
ಯಕ್ಷಗಾನದಲ್ಲಿ ಸ್ತ್ರೀವೇಷ ಮಾಡುವವರು ೪೦ - ೪೫ ವರ್ಷಕ್ಕೆ ತಾರಾಮೌಲ್ಯ ಕಳೆದುಕೊಳ್ಳುತ್ತಾರೆ. ಮಂಟಪರಿಗೆ ೫೦ ದಾಟಿದೆ. ಈಗಲೂ ಅವರು ವೇಷ ಕಟ್ಟಿ ನಿಂತರೆಅಂಗನಾಮಣಿ ನಿಲ್ಲು ನಿಲ್ಲೆಲೇ...’ ಎನ್ನುವಷ್ಟು ಚೆಂದ ಕಾಣುತ್ತಾರೆ. ಇದಕ್ಕೆ ಕಾರಣ ಅವರು ಅನುಸರಿಸುತ್ತಿರುವ ಆಹಾರ ಕ್ರಮ. ಉದ್ಯಮ - ಕಲೆಯ ನಡುವೆ ಶಿಸ್ತು ರೂಢಿಸಿಕೊಂಡಿದ್ದು. ಬೆಳಗ್ಗೆ ಕ್ಕೆ ಏಳುವ ಮಂಟಪರು ಯೋಗ, ಪ್ರಾಣಾಯಾಮ ತಪ್ಪಿಸುವುದಿಲ್ಲ. ಕಲಾಜೀವನ ಹಾಗೂ ಜೀವನ ಕಲೆಗಳೆರಡೂ ಅವರಿಗೆ ಸಿದ್ಧಿಸಿದೆ. ಹೀಗಾಗಿ ಅವರು ರಂಗಸ್ಥಳಕ್ಕೆ ಬಂದರೆ ಹೆಣ್ಣೇ ಆಗುತ್ತಾರೆ. ಇನ್ನೂ ವೇಷ ಮಾಡುವ ಉತ್ಸಾಹ, ಶ್ರದ್ಧೆ ಅವರಲ್ಲುಂಟು. ಶಿಷ್ಟ ಸೊಬಗಿನ ಯಕ್ಷ ತಂಡಗಳಿಗೆ ಮಂಟಪರ ಮಾರ್ಗದರ್ಶನ, ವೇಷದ ಸಹಕಾರದ ಅಗತ್ಯವೂ ಇದೆ. ಮುಂದಿನವರಿಗೆ ಅಗ್ರಪಂಕ್ತಿ ಹಾಕಿ ಕೊಡಲು ಮಂಟಪ ಮತ್ತೊಮ್ಮೆ ವೃತ್ತಿ ಕೂಟಗಳೊಳಗೆ ಅತಿಥಿಯಾಗಿ ಬಂದಾರು. ಶತಾವಧಾನಿಗಳು ಬೇರೆಯದೇ ಆದ ಇನ್ನೊಂದುಮಂಟಪಕಟ್ಟುವುದಕ್ಕೂ ಮಾರ್ಗ ತೋರಿಯಾರು. ಸಾವಿರದಾಚೆಯ ನಿರೀಕ್ಷೆಗೆ ಯಕ್ಷರಂಗ ಕಾತರಿಸುತ್ತಿದೆ.

ಒಮ್ಮೆ ರುಚಿ ನೋಡಿದರೆ ಬಿಡಲಾರರು
ಹ್ವಾಯ್ ನಾನ್ ಮಂಟಪ. ನಿಮ್ಗೆ ಗಟ್ಟಿ ಒಂದು ಗಂಟೆ ಪುರುಸೊತ್ತು ಇದ್ದರೆ ಬನ್ನಿ. ಪೂರ್ತಿ ಪ್ರದರ್ಶನ ಕಾಣಿ. ಮಧ್ಯೆ ಎದ್ದು ಹೋಪ್ದಾದ್ರೆ ಬಪ್ದೇ ಬೇಡ...
ಇದು ಟಿಪಿಕಲ್ ಮಂಟಪ ಸ್ಟೈಲ್. ಆಸಕ್ತರನ್ನು ತಮ್ಮ ಪ್ರದರ್ಶನಗಳಿಗೆ ಮಂಟಪ ಆಹ್ವಾನಿಸುವುದೇ ಪರಿಯಲ್ಲಿ. ಅವರ ಮಾತುಗಳಲ್ಲಿ ಕುಂದಾಪುರ ಭಾಷೆಯ ಸೊಗಡು ದಟ್ಟವಾಗಿಯೇ ಇದೆ. ಅವರ ಕರೆಗೆ ಓಗೊಟ್ಟು ಒಮ್ಮೆ ಪ್ರದರ್ಶನ ನೋಡಿದವರು ಮಂಟಪ ಐಸ್ಕ್ರೀಮ್ ರುಚಿ ಕಾಣಿಸಿಕೊಂಡವರಂತೆ ಮತ್ತೆ ಹುಡುಕಿಕೊಂಡು ಹೋಗುತ್ತಾರೆ. ಮಂಟಪರ ಏಕವ್ಯಕ್ತಿ ತಂಡದ ಶಿಸ್ತು, ಅಚ್ಚುಕಟ್ಟುತನವೂ ಮಾದರಿ.
ಮಂಟಪರ ೯೦೦ ನೇ ಏಕವ್ಯಕ್ತಿ ಪ್ರದರ್ಶನವುವಿಜಯ ಕರ್ನಾಟಕ ಬೆಂಗಳೂರಿನ ಕಚೇರಿಯಲ್ಲೇ ಆಗಿತ್ತು. ಮಂಟಪರ ಮನೆ ಯಾವಾಗಲೂ ಅತಿಥಿಗಳಿಂದ ಕೂಡಿರುತ್ತದೆ. ಅಲ್ಲಿನ ಸತ್ಕಾರ ಮಾತ್ರ ಮಂಟಪರ ಸಹಧರ್ಮಿಣಿ ಮಂಗಲಕ್ಕ ಅವರದ್ದು. ಎಲ್ಲರಿಗೂ ಮಂಗಲಕ್ಕನಾಗಿರುವ ಮಂಗಲಾ ಉಪಾಧ್ಯ, ಮಂಟಪರ ಎಲ್ಲ ಏಳಿಗೆಯ ಪ್ರೇರಕ ಶಕ್ತಿ. ಮಂಟಪ ಗೃಹದಲ್ಲಿ ತಿಂಗಳಿಗೊಂದು ಸಾಂಸ್ಕೃತಿಕ ಕಾರ್ಯಕ್ರಮವೂ ಕಾಯಂ ನಡೆಯುತ್ತದೆ.

ಅನಿವಾರ್ಯವಲ್ಲ
ಏಕವ್ಯಕ್ತಿ ಪ್ರಯೋಗ ಯಕ್ಷಗಾನಕ್ಕೆ ಅನಿವಾರ್ಯವಲ್ಲ. ಹತ್ತಾರು ಕಲಾವಿದರಿದ್ದು ಕೊಡುವ ಪ್ರದರ್ಶನದಲ್ಲೇ ಯಕ್ಷಗಾನದ ನಿಜವಾದ ಸೌಂದರ್ಯ ಅಡಗಿರುತ್ತದೆ. ಆದರೆ, ಏಕವ್ಯಕ್ತಿಯ ತತ್ವವನ್ನು ಕೂಟ ಪ್ರದರ್ಶನದಲ್ಲಿ ಅಳವಡಿಸಿಕೊಂಡರೆ ಒಳ್ಳೆಯದಾಗುತ್ತದೆ ಎಂದು ಮಂಟಪ ಹೇಳುತ್ತಾರೆ. ಏಕವ್ಯಕ್ತಿ ಯಕ್ಷಗಾನಕ್ಕೆ ಅಣಿಯಾದಾಗ ಶತಾವಧಾನಿಗಳು ನನ್ನ ಅಹಂಕಾರವನ್ನು ಬಡಿದರು. ಸ್ವಾತಂತ್ರ್ಯವನ್ನು ಉತ್ತೇಜಿಸಿದರು. ಇದೆಲ್ಲದರ ಫಲಸ್ವರೂಪವೇ ಸಾವಿರದ ಪ್ರಯೋಗ. ಯಕ್ಷಗಾನದ ಒಟ್ಟಾರೆ ಸುಧಾರಣೆ ದೃಷ್ಟಿಯಿಂದಲೂ ಇಂಥದೊಂದು ಮನೋಧರ್ಮ ಬೇಕು. ಶತಾವಧಾನಿಗಳಂತಹ ವಿದ್ವಾಂಸರಿಗೆ ಅರ್ಪಿಸಿಕೊಂಡು ಮೌಲ್ಯ ನಿಷ್ಕರ್ಶೆಗೊಳಪಡುವ ತೆರೆದುಕೊಳ್ಳುವಿಕೆ ಅಗತ್ಯವೆಂಬುದು ಮಂಟಪರ ಅನುಭವದ ಹಿನ್ನೆಲೆಯ ನುಡಿ.

ಏಪ್ರಿಲ್ ರಂದು ಸಾವಿರದ ಸಂಭ್ರಮ
ಡಾ. ಮೋಹನ ಆಳ್ವ ನೇತೃತ್ವದಲ್ಲಿ ಏಪ್ರಿಲ್ ರಂದು ಶುಕ್ರವಾರ ಮೂಡಬಿದ್ರೆಯ ವಿದ್ಯಾಗಿರಿಯಲ್ಲಿ ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಯಕ್ಷಗಾನದಸಾವಿರದ ಸಂಭ್ರಮಕಾರ್ಯಕ್ರಮ ನಡೆಯಲಿದೆ. ‘ಅನನ್ಯ ವ್ಯಕ್ತಿಕೃತಿ ಬಿಡುಗಡೆ ಆಗಲಿದೆ. ಅಂದು ಬೆಳಗ್ಗೆ ೧೦ ರಿಂದ ರಾತ್ರಿ ವರೆಗೆ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳೂ ಇವೆ. ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಮುಖ್ಯಮಂತ್ರಿ ಯಡಿಯೂರಪ್ಪ, ಡಾ. ಸದಾನಂದ ಮಯ್ಯ ಸೇರಿದಂತೆ ಗಣ್ಯರು ಪಾಲ್ಗೊಳ್ಳುತ್ತಾರೆ.
(೩೧-೦೩-೨೦೧೦ ರಂದು ಬುಧವಾರ ‘ವಿಜಯ ಕರ್ನಾಟಕ’ ಲವಲವಿಕೆಯಲ್ಲಿ ಈ ಲೇಖನ ಪ್ರಕಟವಾಗಿದೆ.)

4 comments:

Very informative article. Nice presentation.
Keep posting,
Thanks,
MP Hegde Huklamakki

 

ಹಿಮ್ಮೇಳ ಒದಗಿಸಿದ ವಿದ್ವಾನ್ ಗಣಪತಿ ಭಟ್ (ಭಾಗವತರು), ಅನಂತಪದ್ಮನಾಭ ಪಾಠಕ್ (ಮದ್ದಲೆ), ಕೃಷ್ಣಯಾಜಿ ಇಡಗುಂಜಿ (ಚೆಂಡೆ) ಇವರುಗಳ ಸಹಕಾರ ಮಂಟಪರವರಿಗೆ ಸಾಕಷ್ಟು ಉತ್ತೇಜನ ಕೊಡಲಿಕ್ಕೆ ಸಾಕು.ಚಂಡೆಯ ಕೃಷ್ಣ (ಕುಟ್ಟು)ಯಾಜಿ ಮಂಟಪರ ಜೊತೆಗೆ ಯಕ್ಷಗಾನಕ್ಕೆ ಹೊಸ 'ಬಗೆ' ಕೊಟ್ಟಿದ್ದಾರೆ."ಏಕವ್ಯಕ್ತಿ"ಟೀಂ ನಿಜಕ್ಕೂ ಜನತೆಗೆ ಹೊಸ ಅನುಭವ ಕೊಡುತ್ತಿದ್ದಾರೆ.

 

ಉತ್ತಮ ಲೇಖನ ಸರ್. ನಮ್ಮ ಮಲೆನಾಡು ಮತ್ತು ಕರಾವಳಿ ಸಂಸ್ಕೃತಿಯ ಅವಿಭಾಜ್ಯ ಅಂಗ ಈ ಯಕ್ಷಗಾನ

 

ನಂದಿಕಲ್ ರೆ ...
ಉಪ್ಪೂರಿನ ಆಟ ದಲ್ಲಿ ಅವರ " ಪ್ರಭಾವತಿ " ಪಾತ್ರ ನೋಡಿದ ಬಾಂಬೆ ಇಂದ ಬಂದ ಹುಡಗನೊಬ್ಬ ಹೇಳಿದ ಮಾತು ... ಊರಲ್ಲಿ ಹೆಂಗಸರು ಯಕ್ಷಗಾನ ಮಾಡ್ತಾರಾ ?
ಮಂಟಪರು ಯಕ್ಷಗಾನ ದ ಮಟ್ಟಿಗೆ ಈಗಿನ ಹಲವು ಕಲಾವಿದರಿಗೆ " ಉಪಾಧ್ಯ" ಯಾ ರಾಗುವ ಅವಶ್ಯಕತೆ ಯಕ್ಷ ರಂಗಕ್ಕೆ ಇದೆ .. ಅಲ್ವ ?

 

Post a Comment

Last Posts