ಪ್ರಜ್ವಲವಳ್ಳಿ ! ಯಕ್ಷಲೋಕದ ಗತ್ತು, ಗಾಂಭೀರ್ಯದ ಪ್ರತಿಮೆಗೆ ೭೮

ಜೋಯಿಸರ ಮನೆಯಲ್ಲಿ ಸದಾ ಯಕ್ಷಗಾನದ ಪಾರಾಯಣ. ರಾತ್ರಿ ಆಟ ನೋಡಿಕೊಂಡು ಬರುವ ಅವಭ್ರತರು ಮಾರನೆ ದಿನ ಮನೆಯಲ್ಲಿ ಕುಳಿತು ಪುಷ್ಕಳವಾಗಿ ಅರ್ಥಗಾರಿಕೆಯ ಪಟ್ಟಾಂಗ ಹೊಡೆಯುತ್ತಿದ್ದರು. ಇದನ್ನೆಲ್ಲ ಆಲಿಸುತ್ತಿದ್ದ ಮನೆಗೆಲಸದ ಹುಡುಗನಿಗೆ ರೋಮಾಂಚನ. ಅವನ ಮನದೊಳಗೆ ಪೌರಾಣಿಕ ಪಾತ್ರ ಪ್ರಪಂಚದ ರೂಪರೇಖೆ ಮೂಡಲಾರಂಭಿಸಿತು.
ಸಾಮಾನ್ಯ ಕುಟುಂಬದಿಂದ ಬಂದವನ ಈ ಆಸಕ್ತಿ ಕಂಡ ಜೋಯಿಸರಿಗೆ ಒಳಗೊಳಗೇ ಸಂಭ್ರಮ. ಆಟಕ್ಕೂ ಕರೆದುಕೊಂಡು ಹೋಗತೊಡಗಿದರು. ಒಂದು ದಿನ ಸನಿಹ ಕರೆದು, ‘ವೆಂಕ್ಟೇಶ ಕೂಲಿ ಮಾಡಿ ಆಯುಷ್ಯ ಕಳೆಯಬೇಡ. ನೀನು ವೇಷ ಮಾಡೋದೆ ಒಳ್ಳೇದು. ಒಳ್ಳೆಯ ಕಲಾವಿದ ಆಗ್ತೆ. ಹೊರಟು ಬಿಡು’ ಎಂದು ಅದು ತಮ್ಮ ಅಪೇಕ್ಷೆಯೋ ಎಂಬಂತೆ ಹರಸಿದರು. ಹಾಗಾಗಿ ಆತ ತಿರುಗಿ ಜಲವಳ್ಳಿ ಕಡೆ ಹೆಜ್ಜೆ ಹಾಕಿದ.
ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಜಲವಳ್ಳಿ ವೆಂಕಟೇಶರಾವ್ ಬಣ್ಣ ಹಚ್ಚಲು ಮುಹೂರ್ತ ಕೂಡಿ ಬಂದಿದ್ದು ಹೀಗೆ. ಮನೆಯಲ್ಲಿ ಜಮೀನು ಇಲ್ಲದಿದ್ದರಿಂದ ವೆಂಕಟೇಶ, ಮರವಂತೆ ಸನಿಹದ ದಿಬ್ಬಣಗಲ್‌ನ ರಾಮ ನಾಗಪ್ಪ ಅವಭ್ರತರ (ಅವಭ್ರತರಿಗೆ ಜೋಯಿಸರೆಂದೇ ಕರೆಯುತ್ತಿದ್ದರು) ಮನೆಯ ಕೆಲಸಕ್ಕೆ ಸೇರಿಕೊಂಡಿದ್ದರು. ಅಲ್ಲಿನ ವಾತಾವರಣ ಅವರ ಬದುಕಿನ ಗತಿಯನ್ನೇ ಬದಲಿಸುವುದಕ್ಕೆ ಯಕ್ಷಗಾನದ ಭಾಷೆಯಲ್ಲಿ 'ಗಣಪತಿ ಪೂಜೆ' ಮಾಡಿತು.
ಜಲವಳ್ಳಿಯ ಪರಿಸರವೂ ಯಕ್ಷಗಾನದಿಂದ ಸಮೃದ್ಧವಾಗಿತ್ತು. ಮನೆತನದಲ್ಲಿ ಯಾರೂ ಕಲಾವಿದರು ಇರಲಿಲ್ಲ. ಹೀಗಾಗಿ ಗೆಜ್ಜೆ ಕಟ್ಟುವುದಕ್ಕೆ ಪ್ರೋತ್ಸಾಹವಿರಲಿಲ್ಲ. ಆದರೆ ಜೋಯಿಸರು ಕೊಟ್ಟ ಸ್ಫೂರ್ತಿ, ಧೈರ್ಯ ಬೆನ್ನಿಗಿತ್ತು. ಉತ್ತರ ಕನ್ನಡದ ಕಲಾವಿದರೆಲ್ಲರ ಪಾಲಿಗೆ ಯಕ್ಷಗಾನದ ಮುಕ್ತ ವಿಶ್ವವಿದ್ಯಾಲಯವಾಗಿರುವ ಗುಂಡಬಾಳದಲ್ಲಿ ಜಲವಳ್ಳಿಯ ರಂಗ ಪ್ರವೇಶವಾಯಿತು. ಮೊದಲ ವೇಷ ಯೋಗಿನಿ ಕಲ್ಯಾಣದ ಪಾರ್ವತಿಯದ್ದು. ಅಲ್ಲಿಯೇ ರಂಗಕೃಷಿ ಮುಂದುವರಿಯುತ್ತಿದ್ದಾಗ, ಸೇವೆ ಆಟಕ್ಕೆ ಬಂದ ಕೆರೆಮನೆ ಶಿವರಾಮ ಹೆಗಡೆ, ಕೊಂಡದಕುಳಿ ಸಹೋದರರ ಮೆಚ್ಚುಗೆಯ ದೃಷ್ಟಿ ಬಿತ್ತು. ಕೊಂಡದಕುಳಿಯವರು ತಮ್ಮ ಮೇಳಕ್ಕೇ ಕರೆದುಕೊಂಡು ಹೋದರು.
ನಂತರ ಮೂರೂರು ದೇವರು ಹೆಗಡೆಯವರ ಮೇಳ, ಕೆರೆಮನೆ ಮೇಳದಲ್ಲೂ ತಿರುಗಾಟವಾಯಿತು. ಆ ಹೊತ್ತಿಗೆ ‘ನಮ್ಮ ಮಡಿವಾಳರ ವೆಂಕ್ಟೇಶ ಭಾರೀ ತಯಾರಾಗ್ತಾ ಇದ್ದ’ ಎಂಬ ಅಚ್ಚರಿ ಮಿಶ್ರಿತ ಅಭಿಮಾನದ ಮಾತು ಜಿಲ್ಲೆಯಾದ್ಯಂತ ಹರಿದಾಡತೊಡಗಿತ್ತು. ಮುಂದಿನದು ಕೊಳಗಿಬೀಸ್ ಮೇಳದಲ್ಲಿ ಚಿಟ್ಟಾಣಿ - ಜಲವಳ್ಳಿ ಜೋಡಿಯ ವೈಭವ. ಅಲ್ಲಿ ಖಳನಟನಾಗಿ, ಧೈತ್ಯ ವೇಷಧಾರಿಯಾಗಿ ಬೆಳೆಯಲು ಜಲವಳ್ಳಿಯವರಿಗೆ ಪೂರ್ಣ ಅವಕಾಶ ದೊರೆಯಿತು.
ಈ ಬೆಳವಣಿಗೆ ದಕ್ಷಿಣ ಕನ್ನಡದ ಸುರತ್ಕಲ್ ಮೇಳ, ಜಲವಳ್ಳಿಯವರತ್ತ ನೋಡುವಂತೆ ಮಾಡಿತು. ಆಟವೊಂದರ ಚೌಕಿಯಲ್ಲಿದ್ದ ವೆಂಕಟೇಶರನ್ನು ಉದ್ಯಾವರ ಬಸವ ಎನ್ನುವವ ಮುಸುಕು ಹಾಕಿಕೊಂಡು ಕೈಸನ್ನೆಯಿಂದಲೇ ಕರೆದು, ಮೇಳದ ಯಜಮಾನ ಕಸ್ತೂರಿ ವರದರಾಜ ಪೈ ಬಳಿಗೆ ಬರ ಹೇಳಿದ. ಪೈಗಳು ಕಾರಿನಲ್ಲಿ ಮಂಗಳೂರಿಗೇ ಕರೆದೊಯ್ದರು. ಸುರತ್ಕಲ್ ಮೇಳ ಕೈಹಿಡಿಯಿತು. ಆ ವರ್ಷ ಪಾಪಣ್ಣ ವಿಜಯದಲ್ಲಿ ಜಲವಳ್ಳಿಯವರ ಉಗ್ರಸೇನ ಮೇಲೆ ಬಿದ್ದ.
ಅಗ್ನಿ ಪರೀಕ್ಷೆ
ಸುರತ್ಕಲ್ ಮೇಳ ಸೇರಿದ ಎರಡನೇ ವರ್ಷ ಶೇಣಿ ಗೋಪಾಲಕೃಷ್ಣ ಭಟ್ಟರ ಆಗಮನದೊಂದಿಗೆ ನಿಜವಾದ ಅಗ್ನಿ ಪರೀಕ್ಷೆ ಎದುರಾಯಿತು. ಶೇಣಿ ಬರುವ ಸುದ್ದಿ ಕೇಳಿದ ಜಲವಳ್ಳಿಯವರಿಗೆ ಕಣ್ಣೀರು ಬಂದಿತ್ತಂತೆ. ಅವರೊಂದಿಗೆ ಪಾತ್ರ ಮಾಡುವುದು ಹೇಗೆಂಬ ಹೆದರಿಕೆ. ಸಾಲದ್ದಕ್ಕೆ ಶೇಣಿಯವರ ರಾಜಾ ವಿಕ್ರಮನಿಗೆ ಶನಿ ಪಾತ್ರಧಾರಿಯಾಗಿ ಜಲವಳ್ಳಿ ಬರುವಂತಾಯಿತು. ಶೇಣಿಯವರೇ ಧೈರ್ಯ ತುಂಬಿದ್ದರಿಂದ ಎಲ್ಲವೂ ಸುರಳೀತವಾಯಿತು. ಮುಂದಿನ ನಾಲ್ಕು ವರ್ಷ ಶೇಣಿಯವರ ಒಡನಾಟ ಸಿಕ್ಕಿತು. ಜಲವಳ್ಳಿ ಅಸಾಧಾರಣ ಮಾತುಗಾರರಾಗಿ ಬೆಳೆದಿದ್ದು, ತಾಳಮದ್ದಲೆಯ ಕೂಟದಲ್ಲೂ ಅರ್ಥಧಾರಿಯಾಗಲು ಈ ನಂಟು ಕೊಟ್ಟ ಕೊಡುಗೆ ದೊಡ್ಡದು. ಈ ಅವಧಿಯಲ್ಲಿ ಗತ್ತು, ಗಾಂಭೀರ್ಯದ ವೇಷ, ಸ್ವರಭಾರದ ಅರ್ಥದಿಂದ ದಕ್ಷಿಣ ಕನ್ನಡದ ಮಾತುಗಾರರ ಮೇಳದಲ್ಲಿ ಉತ್ತರ ಕನ್ನಡದ ಜಲವಳ್ಳಿ ಪ್ರತಿಷ್ಠಾಪನೆಗೊಂಡಿದ್ದರು. ಅಲ್ಲಿಯವರೂ ಅವರನ್ನು ಸ್ವೀಕರಿಸಿದ್ದರು.
ಇದ್ದಕ್ಕಿದ್ದ ಹಾಗೆ ಸಾಲಿಗ್ರಾಮ ಮೇಳದ ಯಜಮಾನ ಪಳ್ಳಿ ಸೋಮನಾಥ ಹೆಗ್ಡೆಯವರ ವರಾತದಿಂದ ಜಲವಳ್ಳಿ ಸುರತ್ಕಲ್ ಮೇಳಕ್ಕೆ ವಿದಾಯ ಹೇಳುವಂತಾಯಿತು. ಆಗ ‘ಜಲವಳ್ಳಿಯನ್ನು ಚೆನ್ನಾಗಿ ನೋಡಿಕೊಳ್ಳಿ. ನಿಮಗೆ ಬೇಡವೆಂದಾದರೆ ನಮ್ಮಲ್ಲಿಗೇ ಕಳುಹಿಸಿ’ ಎಂಬ ಹಕ್ಕೊತ್ತಾಯವನ್ನು ಪೈಗಳು ಸಲ್ಲಿಸಿದ್ದರಂತೆ. ಅದರಂತೆಯೇ ನಡೆಸಿಕೊಂಡ ಸಾಲಿಗ್ರಾಮ ಮೇಳ, ಜಲವಳ್ಳಿ ಅವರಿಂದ ೨೪ ವರ್ಷಗಳ ಸುದೀರ್ಘ ಸೇವೆ ಪಡೆದಿದೆ.
ಸದ್ಯ ವಯೋವೃದ್ಧ ಜಲವಳ್ಳಿ ಅಜ್ಜ, ಪೆರ್ಡೂರು ಮೇಳದಲ್ಲಿದ್ದಾರೆ. ಅವರಿಗೀಗ ೭೮ ವರ್ಷ. ಈ ಪ್ರಾಯದಲ್ಲೂ ಅವರು ರಂಗಕ್ಕೆ ಅಡಿಯಿಟ್ಟರೆ ಒಂದೊಂದು ಹೆಜ್ಜೆಗೆ ಮಣಭಾರದಷ್ಟು ತೂಕದ ಗಾಂಭೀರ್ಯ. ಅರ್ಥ ಹೇಳಿದರೆ ಗಂಟೆ ಮೊಳಗಿದಷ್ಟು ಸ್ಪಷ್ಟ. ಸಾರ್ಥಕ ಯಕ್ಷಜೀವನ ಕಂಡ ಜಲವಳ್ಳಿಯವರಿಗೆ ರಾಜಧಾನಿಯಲ್ಲಿ ಸನ್ಮಾನವಾಗುತ್ತಿದೆ. ಹೀಗಾಗಿ ಅವರೆಡೆಗಿನ ಕಿರುನೋಟದ ಈ ಅಕ್ಷರಾಕ್ಷತೆಯ ಅಭಿನಂದನೆ.

ಜನ್ಮಜಾತ ಪ್ರಭೆ
ಯಕ್ಷಗಾನ ಕಲಾವಿದರಿಗೆ ಅವರಿಗೆ ಹೊಂದದ ಏನೇನೋ ಬಿರುದು ಬಾವಲಿ ಕೊಡುವುದುಂಟು. ಆದರೆ, ಜಲವಳ್ಳಿಯವರು ನಿಜ ಅರ್ಥದಲ್ಲಿ ಅಭಿಜಾತ (ಜನ್ಮಜಾತ) ಕಲಾವಿದ. ಅವರಿಗೆ ೨ ನೇ ತರಗತಿ ವರೆಗಿನ ವಿದ್ಯಾಭ್ಯಾಸವಾದ ಬಗ್ಗೆ ದಾಖಲೆಯಿದೆ. ಸರಿಯಾಗಿ ಓದುವುದಕ್ಕೆ ಬಾರದು. ತೀರ ಇತ್ತೀಚಿನ ವರೆಗೂ ಹೆಬ್ಬಟ್ಟು ಒತ್ತುತ್ತಿದ್ದರು. ಹಾಗಾಗಿ ಪುಸ್ತಕ ಓದಿ, ಅಧ್ಯಯನದಿಂದ ಅರ್ಥಗಾರಿಕೆಯ ಸಿದ್ಧಿಯನ್ನು ಗಳಿಸಿಕೊಂಡದ್ದಲ್ಲ. ಕೆಳವರ್ಗದಲ್ಲಿ ಹುಟ್ಟಿ ಬೆಳೆದ ವ್ಯಕ್ತಿಯೊಬ್ಬ ಪ್ರಾಥಮಿಕ ಹಂತದ ವ್ಯಾಸಂಗವನ್ನೂ ಪೂರೈಸದೆ ಭೌದ್ಧಿಕ ಸಂಸ್ಕಾರಕ್ಕೆ ಸಂಬಂಧಿಸಿದ ಅರ್ಥಗಾರಿಕೆಯಲ್ಲಿ ಇಷ್ಟು ಎತ್ತರವೇರಿದ್ದು ಸಣ್ಣ ಮಾತಲ್ಲ. ಶೇಣಿ, ಸಾಮಗರೊಂದಿಗೆ ಅರ್ಥ ಹೇಳಿ ಅವರ ವೈಚಾರಿಕ ಮಂಥನಕ್ಕೆ ಸಹಜ ಸಂವಾದಿಯಾಗಿದ್ದು ಜಲವಳ್ಳಿ ಶ್ರೇಷ್ಠತೆ. ಇದೆಲ್ಲ ಹೇಗಾಯಿತು ಎಂಬ ಬಗ್ಗೆ ಈಗಲೂ ಅನೇಕರಿಗೆ ವಿಸ್ಮಯವಿದೆ. ಜಲವಳ್ಳಿಯವರೂ ಬಾಹ್ಯಲೋಕದಲ್ಲಿ ಬಾಯಿಗೆ ಬಾರದ, ಆಡಲು ಗೊತ್ತಾಗದ ಎಷ್ಟೋ ಶಬ್ದಗಳು ರಂಗಸ್ಥಳದಲ್ಲಿ ತಾನಾಗಿಯೇ ಹೊಳೆಯುತ್ತವೆ ಎನ್ನುತ್ತಾರೆ. ಹೀಗಾಗಿ ಜಲವಳ್ಳಿ ಯಕ್ಷಗಾನದ ಅತ್ಯಮೂಲ್ಯ ನಿಧಿ. ಅವರದ್ದು ಜನ್ಮಜಾತ ಪ್ರತಿಭೆ/ ಪ್ರಭೆ ಎನ್ನುವುದೇ ಹೆಚ್ಚು ಸೂಕ್ತ.
ಪಾತ್ರಗಳು
ಕೆರೆಮನೆ ಮಹಾಬಲ ಹೆಗಡೆಯವರ ನಂತರ ಉತ್ತರ ಕನ್ನಡದಲ್ಲಿ ಆ ತಲೆಮಾರಿನ ಪೈಕಿ ಜಲವಳ್ಳಿ ಅತ್ಯಂತ ಹಿರಿಯ ಕಲಾವಿದ. ಕೆರೆಮನೆ ಸಹೋದರರು, ಚಿಟ್ಟಾಣಿ ಅವರಂತೆ ಪ್ರತ್ಯೇಕ ಅಸ್ತಿತ್ವದಿಂದ ಗುರುತಿಸಿಕೊಂಡವರು. ಜಲವಳ್ಳಿ ಅವರಂತೆ ಖಳವೇಷದ ಚಿತ್ರಣ ಮಾಡಿದವರು ಮತ್ತೊಬ್ಬರು ಇರಲಿಕ್ಕಿಲ್ಲ. ಅದಕ್ಕೆ ಬೇಕಾದ ಆಳ್ತನ, ಎತ್ತರ, ಸ್ವರ ಗಾಂಭೀರ್ಯ, ನೋಟದಿಂದಲೇ ರೌದ್ರತೆ ಸೃಷ್ಟಿಸುವ ಕಣ್ಣುಗಳು ಅವರ ದೈವದತ್ತ ಆಸ್ತಿ. ಆರಂಭದಲ್ಲಿ ಬಡಗಿನ ಸಾಂಪ್ರದಾಯಿಕ ಹೆಜ್ಜೆ ಗೊತ್ತಿದ್ದರೂ, ತೆಂಕಿಗೆ ಹೋದ ಮೇಲೆ ಕೇವಲ ಸುತ್ತು, ಗತ್ತು, ಮಾತಿಗೆ ಒತ್ತು ಕೊಟ್ಟರು ಎನ್ನುವವರಿದ್ದಾರೆ. ಅದು ನಿಜವೆಂದು ಒಪ್ಪಬಹುದಾದರೂ, ಜಲವಳ್ಳಿ ಎನ್ನುವ ಛಾಪು ಮೂಡಿದ್ದೇ ಈ ಬಗೆಯ ಹದವರಿತ ಮೇಳೈಕ್ಯದಿಂದ. ಅದರಿಂದಲೇ ಜಲವಳ್ಳಿಯೊಳಗಿನ ಜಗಜಟ್ಟಿ ಕಲಾವಿದ ಹೊರಹೊಮ್ಮಿದ್ದು. ಮೀಸೆ ಹಚ್ಚುವುದರಿಂದ ಬಣ್ಣಗಾರಿಕೆಯಲ್ಲೂ ಅವರಿಗೆ ತುಂಬ ಕಾಳಜಿ. ಇತರರ ಬಣ್ಣ ಕೆಟ್ಟರೂ ಸಹಿಸುವುದಿಲ್ಲ.
ಜಲವಳ್ಳಿ ಎಂದರೆ ಶನೀಶ್ವರನ ಪಾತ್ರ ಹೆಚ್ಚಿನವರಿಗೆ ನೆನಪಾಗುತ್ತದೆ. ಭಕ್ತಿ ಪ್ರಧಾನ ಆಖ್ಯಾನದಿಂದ ಈ ವೇಷ ಅಚ್ಚೊತ್ತಿರಬಹುದು. ಆದರೆ ಭೀಮ, ಅಶ್ವತ್ಥಾಮ, ರಾವಣ, ರಕ್ತಜಂಘ, ವಲಲ, ವಿಜಯದ ಭೀಷ್ಮ, ಕಂಸ, ಮಾಗದ, ಭಸ್ಮಾಸುರ ಮೋಹಿನಿಯ ಈಶ್ವರ ಇನ್ನೂ ಅನೇಕ ಪಾತ್ರಗಳು ಪರಿಣಾಮಕಾರಿಯಾಗಿ ಸ್ಥಾಪನೆಗೊಂಡಿವೆ. ಕಾಳಿಂಗ ನಾವುಡರ ನಾಗಶ್ರೀ ಪ್ರಸಂಗದ ಸುದರ್ಶನ ಸೇರಿದಂತೆ ಹೊಸ ಕತೆಗಳ ಪಾತ್ರಗಳಿಗೂ ಜಲವಳ್ಳಿ ವೈಶಿಷ್ಟ್ಯ ಬೆಸೆದುಕೊಂಡಿದೆ.

ಶೇಣಿ ಒಡನಾಟ
ಶೇಣಿ ಗೋಪಾಲಕೃಷ್ಣ ಭಟ್ಟರ ಪೂರ್ಣ ಪ್ರೀತಿ, ವಿಶ್ವಾಸ ಜಲವಳ್ಳಿಯವರಿಗೆ ದಕ್ಕಿತ್ತು. ಅರ್ಥ ಹೇಳುವ ಸಾಧ್ಯತೆ ಇರುವುದನ್ನು ಅರಿತ ಶೇಣಿಯವರು ಪ್ರೋತ್ಸಾಹಿಸಿದರಂತೆ. ಒಬ್ಬರು ಹೇಳಿದ್ದು ಒಪ್ಪಿತವಾದರೆ ನಾನು ಕೇಳುತ್ತೇನೆ ಎನ್ನುವ ಜಲವಳ್ಳಿ, ಶೇಣಿಯವರ ಮಾತಿಗೆ ಕಿವಿಯಾದರಂತೆ. ಅವರು ಹೇಳುತ್ತಿದ್ದುದನ್ನು ತಮ್ಮ ಶೈಲಿಗೆ ತಂದುಕೊಂಡರಂತೆ. ಸುರತ್ಕಲ್ ಮೇಳದಲ್ಲಿ ಶೇಣಿ, ಜಲವಳ್ಳಿಯ ವಾಲಿ-ಸುಗ್ರೀವ, ಕೌರವ-ಭೀಮನ ಜೋಡಿಯೂ ಜನಪ್ರಿಯವಾಗಿತ್ತಂತೆ. ಕೃಷ್ಣಲೀಲೆಯಲ್ಲಿ ಕಂಸನ ಪಾತ್ರವನ್ನು ಜಲವಳ್ಳಿ ಅವರಿಂದಲೇ ಶೇಣಿ ಮಾಡಿಸುತ್ತಿದ್ದರಂತೆ. ಆಗ ಅವರು ವಸುದೇವ/ ಅಕ್ರೂರನಾಗಿ ಬಂದು ಒದಗುತ್ತಿದ್ದರಂತೆ.
ಒಮ್ಮೆ ಯಾವುದೋ ಕ್ಯಾಂಪ್ನಲ್ಲಿ ಶೇಣಿಯವರಿಗೆ ಜಲವಳ್ಳಿ ಚಹಾ ತಂದು ಕೊಟ್ಟರಂತೆ. ತಕ್ಷಣನೀನು ನನ್ನ ಮೇಲಿನ ಗೌರವದಿಂದ ಸಣ್ಣವನಾಗಬೇಡ. ಪ್ರವರ್ದಮಾನಕ್ಕೆ ಬಂದಿರುವ ಕಲಾವಿದ. ಇದನ್ನು ನೋಡಿದ ಜನ ಶೇಣಿಯವರಿಗೆ ಚಹಾ ತಂದು ಕೊಡುತ್ತಾನೆ ಎಂದು ಹಗುರ ಮಾಡುತ್ತಾರೆ. ಹಾಗಾಗುವುದು ಬೇಡಎಂದು ಎಚ್ಚರಿಸಿದರಂತೆ. ಇನ್ನೊಮ್ಮೆ ಸಹ ಕಲಾವಿದರೊಬ್ಬರು ಹಚ್ಚಿಕೊಂಡಿದ್ದ ಸಿಗರೇಟಿನ ಕಿಡಿ, ಶೇಣಿಯವರ ಶುಭ್ರ ಶ್ವೇತ ವರ್ಣದ ನಿಲುವಂಗಿಗೆ ಬಡಿದು ಸಣ್ಣ ರಂಧ್ರವಾಯಿತಂತೆ. ಶೇಣಿಯವರು ಅಂಗಿ ಬಿಚ್ಚಿ ಬೇರೊಬ್ಬರಿಗೆ ಕೊಟ್ಟರಂತೆ. ಆಗ ಸಿಗರೇಟು ಉರಿಸುತ್ತಿದ್ದ ಕಲಾವಿದ, ‘ಶೇಣಿಯವರೇ ಅಂಗಿಯನ್ನು ನಿಮ್ಮ ನೆಚ್ಚಿನ ಜಲವಳ್ಳಿಗೇ ಕೊಡಬಹುದಿತ್ತಲ್ಲಎಂದು ಅಳುಕುತ್ತಲೇ ಹೇಳಿದರಂತೆ. ಶೇಣಿಯವರು, ‘ಕೊಡಬಹುದಿತ್ತು. ಅದು ನನಗೂ ಗೊತ್ತು. ಆದರೆ ಕ್ರಮ ಹಾಗಲ್ಲ. ಜಲವಳ್ಳಿಗೆ ನಾನು ತೊಟ್ಟು ಬಿಟ್ಟದ್ದಲ್ಲ. ಅವನಿಗೆ ಅಂಗಡಿಗೆ ಕರೆದುಕೊಂಡು ಹೋಗಿ ಹೊಸದನ್ನೇ ಕೊಡಿಸುತ್ತೇನೆಎಂದವರು ಹಾಗೆಯೇ ಮಾಡಿದರಂತೆ. ಹೀಗೆ ಶೇಣಿಯವರ ಒಡನಾಟದ ಬಗ್ಗೆ ಮೆಲುಕು ಹಾಕುವಾಗ ಜಲವಳ್ಳಿಯವರಿಗೆ ಕಣ್ಣೀರು ಒತ್ತರಿಸಿ ಬಂದಿತ್ತು.

ಸನ್ಮಾನ, ಪ್ರದರ್ಶನ
ಹತ್ತು ಹಲವು ಕಲಾವಿದರನ್ನು ದೊಡ್ಡ ಮಟ್ಟದಲ್ಲಿ ಗೌರವಿಸಿದ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ವಿ.ಆರ್. ಹೆಗಡೆ ಹೆಗಡೆಮನೆಯವರ ನೇತೃತ್ವದ ಯಕ್ಷಗಾನ ಯೋಗಕ್ಷೇಮ ಅಭಿಯಾನ ಹಾಗೂ ಅಗ್ನಿ ಸೇವಾ ಟ್ರಸ್ಟ್ ಸಹಯೋಗದಲ್ಲಿ ಜಲವಳ್ಳಿಯವರಿಗೆ ಸನ್ಮಾನ, ನಿಧಿ ಸಮರ್ಪಣೆ ಆಗುತ್ತಿದೆ. ಇಂದು ರಾತ್ರಿ (೨೮-೦೮-೨೦೧೦ ಶನಿವಾರ) ೧೦.೩೦ ಕ್ಕೆ ಆರಂಭವಾಗುತ್ತದೆ. ಇದೇ ವೇಳೆ ಪೆರ್ಡೂರು ಮೇಳ ಹಾಗೂ ಅತಿಥಿ ಕಲಾವಿದರಿಂದ ಕಾರ್ತವೀರ್ಯಾರ್ಜುನ, ಕರ್ಣಾರ್ಜುನ ಪ್ರದರ್ಶನವಾಗಲಿದೆ.

ಪಟಾಪಟ್ ಸಂದರ್ಶನ
ಪ್ರಶ್ನೆ : ಯಕ್ಷಗಾನ ಕಲಾವಿದರಾಗದಿದ್ದರೆ ನಿಮ್ಮ ಭವಿಷ್ಯವೇನಾಗುತ್ತಿತ್ತು ?
ಉತ್ತರ : ಇದೊಂದು ಯೋಗ. ಇಲ್ಲದಿದ್ದರೆ ಎಲ್ಲಿಯೋ ಕೂಲಿ ಮಾಡಿಕೊಂಡು ಇರುತ್ತಿದ್ದೆ.
ಪ್ರಶ್ನೆ : ಇಷ್ಟು ದೊಡ್ಡ ಅರ್ಥಧಾರಿಯಾಗಿದ್ದು ಹೇಗೆ ?
ಉತ್ತರ : ಅದು ನನಗೂ ಗೊತ್ತಿಲ್ಲ. ಈಗೀಗ ಸ್ವಲ್ಪ ಓದಲು ಕಲಿತಿದ್ದೇನೆ. ಬರೆಯುವುದಕ್ಕೆ ಆಗುವುದಿಲ್ಲ. ರಂಗದಲ್ಲಿ ಅದ್ಯಾವುದೋ ಪ್ರೇರಣೆ ಬರುತ್ತದೆ.
ಪ್ರಶ್ನೆ : ಚಿಟ್ಟಾಣಿಯವರ ಜತೆಗೆ ವೇಷ ಮಾಡಿದ ಅನುಭವ ಹೇಳಿ.
ಉತ್ತರ : ಅವರ ಜತೆ ನನ್ನದು ಎಷ್ಟೋ ಜೋಡಿ ವೇಷವಾಗಿದೆ. ಬಗ್ಗೆ ಹೆಮ್ಮೆಯಿದೆ. ಅದು ಯಕ್ಷಗಾನ ಪ್ರಪಂಚಕ್ಕೆಲ್ಲ ತಿಳಿದಿದೆ. ಅವರ ಕುರಿತು ಗೌರವವೂ ಇದೆ.
ಪ್ರಶ್ನೆ : ಶಂಭು ಹೆಗಡೆಯವರ ಜತೆ ವೇಷ ಮಾಡಿದ್ದಿರಾ ?
ಉತ್ತರ : ಶಂಭು ಹೆಗಡೇರು ಸಾಲಿಗ್ರಾಮ ಮೇಳ ಬಿಟ್ಟ ಮೇಲೆ ಒಮ್ಮೆ ವಿಶೇಷ ಸಂದರ್ಭದಲ್ಲಿ ಅವರನ್ನು ಅತಿಥಿಯಾಗಿ ಕರೆದಿದ್ದರು. ಅವರ ಕಾರ್ತವೀರ್ಯ, ನನ್ನ ರಾವಣ ಆಗಿತ್ತು. ಸಂಘಟಕರಿಗೆ ಭರ್ಜರಿ ಕಲೆಕ್ಷನ್ ಬಂದಿತ್ತು. ಮತ್ತೊಮ್ಮೆ ಅವರ ಗದಾಪರ್ವದ ಕೌರವ, ನನ್ನ ಭೀಮನ ಪಾತ್ರ ಮಾಡುವ. ಸಮಯ ಬರಲಿ. ಹೇಳ್ತೆ ಎಂದಿದ್ದರು. ದಿನ ಕಡೆಗೂ ಬರಲೇ ಇಲ್ಲ.
ಪ್ರಶ್ನೆ : ನಿಮ್ಮ ಮಗ ವಿದ್ಯಾಧರ ಅವರ ಭವಿಷ್ಯದ ಬಗ್ಗೆ ಹೇಳಿ.
ಉತ್ತರ : ಅವನಿಗೆ ನನಗಿಂತ ಉತ್ತಮ ಅವಕಾಶವಿದೆ. ಯಾವುದೇ ವಿಕಾರವಿಲ್ಲದ ಶುದ್ಧ ಉತ್ತರ ಕನ್ನಡ ಶೈಲಿಯ ಕುಣಿತ ವಿದ್ಯಾಧರನಿಗೆ ಗೊತ್ತಿದೆ. ವೃತ್ತಿಯ ಶಿಸ್ತು ರೂಢಿಸಿಕೊಳ್ಳಬೇಕು. ಸುಧಾರಣೆಯಾಗಬೇಕು. ನನಗೆ ಅವನದ್ದೇ ದೊಡ್ಡ ಚಿಂತೆಯಾಗಿದೆ.
ಪ್ರಶ್ನೆ : ಇನ್ನೂ ಆಟ ಕುಣಿತೀರಾ ?
ಉತ್ತರ : ತಿರುಗಾಟ ಸಾಗಿದೆ. ವೇಷ ಮಾಡಿಕೊಂಡಾಗ ಒಂದೊಂದು ಸಲ ತಲೆಸುತ್ತು ಬರುತ್ತದೆ. ಹೀಗಾಗಿ ಹೆಚ್ಚು ಕಿರೀಟವಿಲ್ಲದ ವೇಷ ಆಯ್ದುಕೊಳ್ಳುತ್ತಿದ್ದೇನೆ. ಏನಿದ್ದರೂ ಆರೋಗ್ಯದ ಮೇಲೆ ಅವಲಂಬಿಸಿದೆ.
('ವಿಜಯ ಕರ್ನಾಟಕ' 'ಲವಲವಿಕೆ'ಯಲ್ಲಿ ಈ ಲೇಖನ ಪ್ರಕಟವಾಗಿದೆ. ಇಲ್ಲಿ ಜಲವಳ್ಳಿಯವರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಸೇರಿಸಲಾಗಿದೆ)

1 comments:

Amazing article and interview. Thank you. There is a lesson for the new generation how older generation collaborated and made Yakshagana what it is today.

 

Post a Comment

Last Posts